Published on: November 26, 2022

ಭಾರತದ ಸಂವಿಧಾನ ದಿನ

ಭಾರತದ ಸಂವಿಧಾನ ದಿನ

ಸುದ್ಧಿಯಲ್ಲಿ ಏಕಿದೆ?

ಪ್ರತಿ ವರ್ಷ ನವೆಂಬರ್ 26 ರಂದು ಭಾರತದ ಸಂವಿಧಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ರಾಷ್ಟ್ರೀಯ ಕಾನೂನು ದಿನ ಅಥವಾ ನ್ಯಾಷನಲ್ ಲಾ ಡೇ ಎಂದೂ ಕರೆಯಲಾಗುತ್ತದೆ. ಭಾರತದ ಸಂವಿಧಾನವನ್ನು ಅಳವಡಿಸಿಕೊಂಡ ಸಂದರ್ಭದ ಸ್ಮರಣೆಗಾಗಿ ಈ ದಿನವನ್ನ ಆಚರಿಸಲಾಗುತ್ತದೆ.

ಮುಖ್ಯಾಂಶಗಳು

  • ನವೆಂಬರ್ 26, ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನವಾಗಿದೆ. 1949ರ ನವೆಂಬರ್ 26 ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಇದರ ಅಂಗವಾಗಿಯೇ ಸಂವಿಧಾನ ದಿನವನ್ನು ಆಚರಣೆ ಮಾಡುತ್ತಿದ್ದೇವೆ.
  • ಭಾರತದಲ್ಲಿ ಸಂವಿಧಾನ ಅಂಗೀಕಾರವಾಗಿದ್ದು 1949 ರ ನವೆಂಬರ್ 26 ರಂದೇ, ಆದರೂ ಅನುಷ್ಠಾನಕ್ಕೆ ಬಂದಿದ್ದು 1950 ರ ಜನವರಿ 26 ರಂದು. ಈ ದಿನವನ್ನು ಗಣರಾಜೋತ್ಸವ ದಿನವಾಗಿ ಆಚರಣೆ ಮಾಡಲಾಗುತ್ತದೆ.
  • ಸಂವಿಧಾನ ದಿನ ಎಂದು ಆಚರಣೆ ಶುರುವಾಗಿದ್ದು 2015ರಿಂದ. ಅದಕ್ಕೂ ಮುನ್ನ ಕಾನೂನು ದಿನವಾಗಿ ಆಚರಿಸಲಾಗುತ್ತಿತ್ತು. 1930ರಲ್ಲಿ ಅಂದಿನ ಕಾಂಗ್ರೆಸ್​ನ ಲಾಹೋರ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯಕ್ಕೆ ಪಣ ತೊಡಲಾಯಿತು. ಆ ಐತಿಹಾಸಿಕ ದಿನ ಕೂಡ ನ. 26 ಆಗಿದೆ.
  • ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲ್ಪಡುವ ಬಿ.ಆರ್. ಅಂಬೇಡ್ಕರ್ (14 ಏಪ್ರಿಲ್ 1891) ಅವರ 125 ನೇ ಜನ್ಮದಿನದ ವರ್ಷವಾಗಿದ್ದು, ವರ್ಷವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸುವುದರೊಂದಿಗೆ ಕೇಂದ್ರವು 2015 ರಲ್ಲಿ ನವೆಂಬರ್ 26 ಅನ್ನು ಸಂವಿಧಾನ ದಿನ ಎಂದು ಘೋಷಿಸಿತು.

ಸಂವಿಧಾನದ ಬಗ್ಗೆ

  • ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ನಮ್ಮ ಸಂವಿಧಾನ ವೈವಿಧ್ಯಗಳ ಸಂಗಮವಾಗಿದ್ದು, ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ.
  • ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆಯೊದಗಿಸಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ನಮ್ಮ ಸಂವಿಧಾನವು ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು.
  • ಭಾರತ ಸಂವಿಧಾನವು ಹಲವು ದೇಶದ ಸಂವಿಧಾನದ ಪ್ರಮುಖ ಅಂಶಗಳನ್ನು ಎರವಲು ಪಡೆದಿದೆ.
  • ಬ್ರಿಟನ್, ಐರ್‌ಲ್ಯಾಂಡ್, ಜಪಾನ್, ಯುಎಸ್‌ಎ, ದಕ್ಷಿಣ ಆಫ್ರಿಕಾ, ಜರ್ಮನಿ, ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳ ಸಂವಿಧಾನದ ಕೆಲವು ಅಂಶಗಳನ್ನು ಎರವಲು ಪಡೆದಿದೆ.
  • 2 ವರ್ಷ 11 ತಿಂಗಳು, 17 ದಿನಗಳ ಅವಧಿಯಲ್ಲಿ ರಚಿಸಿದ ಸಂವಿಧಾನ.
  • ಭಾರತ ಸಂವಿಧಾನ ಅತಿದೊಡ್ಡ ಕೈಬರವಣಿಗೆಯ ಡಾಕ್ಯುಮೆಂಟ್ ಹೊಂದಿರುವ ಸಂವಿಧಾನವಾಗಿದ್ದು, ಇಂಗ್ಲಿಷ್‌ನಲ್ಲಿ ಒಟ್ಟು 1,17,369 ಪದಗಳನ್ನು ಹೊಂದಿದೆ.
  • ಕೈ ಬರವಣಿಗೆಯಲ್ಲಿ ಬರೆದ ಮೂಲ ಸಂವಿಧಾನ ಪುಸ್ತಕವನ್ನು ಸಂಸತ್ತಿನ ಗ್ರಂಥಾಲಯದಲ್ಲಿ ಹೀಲಿಯಂ ನಿಂದ ಕೂಡಿದ ಕೇಸ್‌ನಲ್ಲಿ ಸುರಕ್ಷಿತವಾಗಿ ಇಡಲಾಗಿದೆ.