Published on: January 4, 2023
ಭಾರತೀಯ ವಿಜ್ಞಾನ ಕಾಂಗ್ರೆಸ್
ಭಾರತೀಯ ವಿಜ್ಞಾನ ಕಾಂಗ್ರೆಸ್
ಸುದ್ದಿಯಲ್ಲಿ ಏಕಿದೆ? ಪ್ರಧಾನಿ ನರೇಂದ್ರ ಮೋದಿ ಅವರು ನಾಗ್ಪುರ ವಿವಿಯಲ್ಲಿ ನಡೆಯುವ 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಉದ್ಘಾಟನಾ ಅಧಿವೇಶನವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮುಖ್ಯಾಂಶಗಳು
- ತಾಂತ್ರಿಕ ಗೋಷ್ಠಿಗಳನ್ನು 14 ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರ ಭಾಗವಾಗಿ ವಿಶ್ವವಿದ್ಯಾಲಯದ ʻಮಹಾತ್ಮ ಜೋತಿಬಾ ಫುಲೆ ಶೈಕ್ಷಣಿಕ ಕ್ಯಾಂಪಸ್ʼನ ವಿವಿಧ ಸ್ಥಳಗಳಲ್ಲಿ ಸಮಾನಾಂತರವಾಗಿ ಗೋಷ್ಠಿಗಳನ್ನು ನಡೆಸಲಾಗುತ್ತದೆ. ಈ 14 ವಿಭಾಗಗಳನ್ನು ಹೊರತುಪಡಿಸಿ, ʻಮಹಿಳಾ ವಿಜ್ಞಾನ ಕಾಂಗ್ರೆಸ್ʼ, ʻರೈತರ ವಿಜ್ಞಾನ ಕಾಂಗ್ರೆಸ್ʼ, ʻಮಕ್ಕಳ ವಿಜ್ಞಾನ ಕಾಂಗ್ರೆಸ್ʼ, ʻಬುಡಕಟ್ಟು ಸಮಾವೇಶʼ, ʻವಿಜ್ಞಾನ ಮತ್ತು ಸಮಾಜʼದ ಬಗ್ಗೆ ಒಂದು ವಿಭಾಗ ಹಾಗೂ ʻವಿಜ್ಞಾನ ಸಂವಹನಕಾರರ ಕಾಂಗ್ರೆಸ್ ವಿಭಾಗಗಳು ಇರಲಿವೆ.
- ಇಂದು ವಿಜ್ಞಾನ ಕ್ಷೇತ್ರ ಭಾರತವನ್ನು ಆತ್ಮನಿರ್ಭರ್ ಮಾಡುತ್ತಿದೆ. 2023 ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದ್ದು, ವಿಜ್ಞಾನದ ಬಳಕೆಯೊಂದಿಗೆ ಭಾರತದ ಸಿರಿಧಾನ್ಯಗಳ ಬಳಕೆಯನ್ನು ಇನ್ನಷ್ಟು ಸುಧಾರಿಸಬೇಕು.
ಜ್ಞಾನದ ಜ್ಯೋತಿ – ʻವಿಜ್ಞಾನ್ ಜ್ಯೋತಿʼಯನ್ನು ಒಲಿಂಪಿಕ್ ಜ್ಯೋತಿಯ ಮಾದರಿಯಲ್ಲಿ ರೂಪಿಸಲಾಗಿದೆ. ಇದು ಸಮಾಜದಲ್ಲಿ, ವಿಶೇಷವಾಗಿ ಯುವಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಸಮರ್ಪಿತವಾದ ಆಂದೋಲನವಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಈ ಜ್ಯೋತಿಯನ್ನು ಸ್ಥಾಪಿಸಲಾಗಿದ್ದು, 108ನೇ ʻಭಾರತೀಯ ವಿಜ್ಞಾನ ಕಾಂಗ್ರೆಸ್ʼ ಸಮಾಪ್ತಿಯವರೆಗೂ ಅದು ಉರಿಯುತ್ತಲೇ ಇರುತ್ತದೆ.
ವಿಶೇಷ ಆಕರ್ಷಣೆ: ಪ್ರೈಡ್ ಆಫ್ ಇಂಡಿಯಾ ಎಂಬ ಬೃಹತ್ ಪ್ರದರ್ಶನ
- ಈ ಪ್ರದರ್ಶನದಲ್ಲಿ ಪ್ರಮುಖ ಬೆಳವಣಿಗೆಗಳು, ಪ್ರಮುಖ ಸಾಧನೆಗಳು ಮತ್ತು ಸಮಾಜಕ್ಕೆ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಮುಖ ಕೊಡುಗೆಗಳನ್ನು ಅನಾವರಣಗೊಳಿಸಲಾಗುವುದು. ಈ ಪ್ರದರ್ಶನವು ವೈಜ್ಞಾನಿಕ ಪ್ರಪಂಚದ ಸಂಪೂರ್ಣ ಚಿತ್ರಣವನ್ನು ಒಳಗೊಂಡಿರುವ ನೂರಾರು ಹೊಸ ಆಲೋಚನೆಗಳು, ಆವಿಷ್ಕಾರಗಳು ಮತ್ತು ಉತ್ಪನ್ನಗಳನ್ನು ಒಟ್ಟುಗೂಡಿಸುತ್ತದೆ.
- ದೇಶಾದ್ಯಂತದ ಸರಕಾರ, ಕಾರ್ಪೊರೇಟ್ ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ಯಮಗಳು(ಪಿ.ಎಸ್.ಯು), ಶೈಕ್ಷಣಿಕ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ಸಂಸ್ಥೆಗಳು, ಅನ್ವೇಷಕರು ಮತ್ತು ಉದ್ಯಮಿಗಳ ಸಾಮರ್ಥ್ಯ ಹಾಗೂ ಸಾಧನೆಗಳ ಪ್ರದರ್ಶನವನ್ನು ʻಪ್ರೈಡ್ ಆಫ್ ಇಂಡಿಯಾʼ ಒಳಗೊಂಡಿರಲಿದೆ.
ಸ್ಟಾರ್ಟಪ್‌ಗಳಲ್ಲಿಅಗ್ರ 3ನೇಸ್ಥಾನ
- ವಿಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮೂಲಕ ವಿಶ್ವದ 130 ರಾಷ್ಟ್ರಗಳ ಪೈಕಿ ಸದ್ಯ ದೇಶವು 40ನೇ ಸ್ಥಾನದಲ್ಲಿದೆ. 2015ರಲ್ಲಿ 81ನೇ ಸ್ಥಾನದಲ್ಲಿತ್ತು. ವಿಶೇಷವಾಗಿ, ಸ್ಟಾರ್ಟಪ್ ಕ್ಷೇತ್ರದಲ್ಲಿ ದೇಶವು ಅಗ್ರ 3ನೇ ಸ್ಥಾನದಲ್ಲಿದೆ
- ಗುರಿ : ಭಾರತದ ಅಗತ್ಯಗಳನ್ನು ಪೂರೈಸಲು ವೈಜ್ಞಾನಿಕ ಅಭಿವೃದ್ಧಿ ನಮ್ಮ ವಿಜ್ಞಾನಿ ಸಮುದಾಯಕ್ಕೆ ಸ್ಫೂರ್ತಿಯಾಗಬೇಕು,ಜಾಗತಿಕ ಜನಸಂಖ್ಯೆಯ ಶೇಕಡಾ 17ರಿಂದ 18ರಷ್ಟು ಮಂದಿ ಭಾರತದಲ್ಲಿ ವಾಸಿಸುತ್ತಿದ್ದಾರೆ. ಭಾರತವನ್ನು ಸಶಕ್ತಗೊಳಿಸುವ ವೈಜ್ಞಾನಿಕ ಆವಿಷ್ಕಾರಗಳು ಈ ಜಾಗತಿಕ ಜನಸಂಖ್ಯೆಯನ್ನು ಸಬಲೀಕರಣಗೊಳಿಸಲು ಸಹ ಸಹಾಯ ಮಾಡುತ್ತವೆ.