Published on: December 29, 2022

ಭಾರತ-ಚೀನಾ ಗಡಿ

ಭಾರತ-ಚೀನಾ ಗಡಿ

ಸುದ್ದಿಯಲ್ಲಿ ಏಕಿದೆ?  ಅರುಣಾಚಲ ಪ್ರದೇಶದ ತವಾಂಗ್ ವಲಯದ ಯಾಂಗ್‌ಟ್ಸೆ ಗಡಿ ಪೋಸ್ಟ್‌ ಭಾರತ-ಚೀನಾ ಗಡಿಯಲ್ಲಿ ಇತ್ತೀಚೆಗೆ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದಿದ್ದು, ಉದ್ವಿಗ್ನತೆಯನ್ನು ಶಮನಗೊಳಿಸುವಂತೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕರೆ ನೀಡಿದ್ದಾರೆ.‌

ಮುಖ್ಯಾಂಶಗಳು

  • 2017ರ ಡೊಕ್ಲಾಮ್‌ ಗಡಿ ಬಿಕ್ಕಟ್ಟು, ಗಲ್ವಾನ್‌ ಕಣಿವೆ ಸಂಘರ್ಷ, ಈಗ ತವಾಂಗ್ ಗಡಿ ಗಲಾಟೆ, ಹೀಗೆ ಆಗಾಗ ಚೀನಾ ಭೂ ಅತಿಕ್ರಮಿಸುವ ಪ್ರಯತ್ನಗಳನ್ನು ನಡೆಸಿದೆ.
  • ಜೂನ್, 2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಘರ್ಷಣೆಯ ನಂತರ ಇದು ಭಾರತ ಮತ್ತು ಚೀನಾದ ಸೇನೆಗಳ ನಡುವಿನ ಮೊದಲ ಪ್ರಮುಖ ಘರ್ಷಣೆ ಆಗಿದೆ.
  • ಪ್ಯಾಂಗೊಂಗ್ ಸರೋವರ ಪ್ರದೇಶದಲ್ಲಿ ಹಿಂಸಾತ್ಮಕ ಘರ್ಷಣೆಯ ನಂತರ ಭುಗಿಲೆದ್ದ ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿನ ನಂತರ ವಿವಿಧ ಹಂತಗಳಲ್ಲಿ ಬಿಕ್ಕಟ್ಟುಗಳನ್ನು ಪರಿಹರಿಸಲು ಎರಡೂ ದೇಶಗಳು ತಮ್ಮ ಕಮಾಂಡರ್‌ಗಳ ನಡುವೆ 16 ಸುತ್ತಿನ ಮಾತುಕತೆಗಳನ್ನು ನಡೆಸಿದ್ದವು.
  • ಸೆಪ್ಟೆಂಬರ್‌ನಲ್ಲಿ ನಡೆದ ಕೊನೆಯ ಸುತ್ತಿನ ಮಾತುಕತೆ ವೇಳೆ ಎರಡೂ ಕಡೆಯವರು ಗೋಗ್ರಾ-ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿನ ಪ್ಯಾಟ್ರೋಲಿಂಗ್ ಪಾಯಿಂಟ್ 15ರಿಂದ ತಮ್ಮ ಸೇನೆಗಳನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿದ್ದರು.

ಕಾರಣ :ಡಿಸೆಂಬರ್ 9ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಚೀನಾದ ಸೈನಿಕರು ಪ್ರಯತ್ನಿಸಿದರು.

ಆದರೆ, ಭಾರತೀಯ ಸೇನೆಯು ದೃಢವಾಗಿ ಅವರನ್ನು ಹಿಮ್ಮೆಟ್ಟಿಸಿತು.

ಯಾಂಗ್‌ಟ್ಸೆ ಪೋಸ್ಟ್‌ ಭಾರತಕ್ಕೆ ಏಕೆ ಮುಖ್ಯ?

  • ತವಾಂಗ್‌ನಿಂದ ಈಶಾನ್ಯ ದಿಕ್ಕಿನಲ್ಲಿ 35 ಕಿ.ಮೀ. ದೂರದಲ್ಲಿದೆ.
  • ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿದೆ.
  • ಅಕ್ಟೋಬರ್‌ನಿಂದ ಶುರುವಾಗಿ ಮಾರ್ಚ್‌ವರೆಗೂ ಇಲ್ಲಿ ಮಂಜುಗಡ್ಡೆ ತೀವ್ರವಾಗಿ ಆವರಿಸಿರುತ್ತದೆ. ದಿನದ ಬಹುತೇಕ ಸಮಯ ಈ ಪ್ರದೇಶವನ್ನು ಉಭಯ ರಾಷ್ಟ್ರಗಳು ಡ್ರೋನ್‌ಗಳ ಮೂಲಕ ನಿಗಾ ಇಡುತ್ತಿವೆ. ಎರಡೂ ರಾಷ್ಟ್ರಗಳು ಇಲ್ಲಿಉತ್ತಮ ರಸ್ತೆ ಜಾಲ ಹೊಂದಿವೆ.
  • ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಉಭಯ ರಾಷ್ಟ್ರಗಳ ಸೇನಾ ತುಕಡಿ ಗಸ್ತು ತಿರುಗುತ್ತದೆ. ಎಲ್‌ಎಸಿಯಲ್ಲಿ ಚೀನಾ ಸೈನಿಕರ ವರ್ತನೆ ಮೇಲೆ ಕಣ್ಣಿಡಲು ಯಾಂಗ್‌ಟ್ಸೆ ಚೆಕ್‌ಪೋಸ್ಟ್‌ ಅತ್ಯಂತ ಪ್ರಶಸ್ತ ಸ್ಥಳವಾಗಿದೆ.

ಉಭಯ  ರಾಷ್ಟ್ರಗಳ ನಡುವಿನ  ಗಡಿ ವಿವಾದಗಳು:

  • 1987ರಲ್ಲಿ ಸಂದೊರೊಂಗ್ ಚು ಗಡಿ
  • 2013ರಲ್ಲಿ ದೆಪ್ ಸಂಗ್ ಗಡಿ
  • 2014 ಚುಮರ್ ಗಡಿ
  • 2017 ಡೋಕ್ಲಾಂ ಗಡಿ
  • 2020 ಗಲ್ವಾನ್ ವ್ಯಾಲಿ

ಅರುಣಾಚಲದ ಮೇಲೆ  ಚೀನಾದ ದೃಷ್ಟಿ

  • ಅಂತಾರಾಷ್ಟ್ರೀಯ ನಕ್ಷೆಯಲ್ಲಿ ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಎಂದೇ ತೋರಿಸಲಾಗಿದೆ. ಹಾಗಿದ್ದೂ, ಚೀನಾ ಈ ಪ್ರದೇಶವು ದಕ್ಷಿಣ ಟಿಬೆಟ್‌ನ ಒಂದು ಭಾಗ ಎಂದೇ ಪ್ರತಿಪಾದಿಸುತ್ತಿದೆ.

ಹಿನ್ನೆಲೆ

  • ವಿವಾದಕ್ಕೊಳಗಾದ ಇತರ ದೊಡ್ಡ ವಿವಾದಿತ ಭೂಪ್ರದೇಶ, ಪೂರ್ವದ, ಮೆಕ್ ಮಹೊನ್ ರೇಖೆಯ ದಕ್ಷಿಣ ಭಾಗದಲ್ಲಿದೆ. ಇದನ್ನು ಹಿಂದೆ ಈಶಾನ್ಯ ಫ್ರಾಂಟಿಯರ್ ಏಜೆನ್ಸಿ ಎಂದು ಕರೆಯಲಾಗುತ್ತಿತ್ತು ಮತ್ತು ಇದನ್ನು ಈಗ ಅರುಣಾಚಲ ಪ್ರದೇಶ ಎಂದು ಕರೆಯಲಾಗುತ್ತದೆ.  ವಾಸ್ತವವಾಗಿ, 1912ರವರೆಗೆ ಭಾರತ ಮತ್ತು ಟಿಬೆಟ್‌ ನಡುವೆ ಯಾವುದೇ ಗಡಿ ಇರಲಿಲ್ಲ. ಮೊಘಲರು ಅಥವಾ ಬ್ರಿಟಿಷರು ಕೂಡ ಈ ಪ್ರದೇಶವನ್ನು ಆಳಲಿಲ್ಲ. ಯಾವಾಗ ಇಲ್ಲಿನ ತವಾಂಗ್‌ನಲ್ಲಿ ಬೌದ್ಧ ಮಂದಿರ ಸ್ಥಾಪನೆ ಆಯಿತೋ ಆಗ ಭಾರತ ಅರುಣಾಚಲದ ಕುರಿತು ಹೆಚ್ಚು ತಲೆಕೆಡಿಸಿಕೊಂಡಿತು.
  • ಈ ಕುರಿತಾಗಿ 1914ರಲ್ಲಿ ಶಿಮ್ಲಾದಲ್ಲಿ ಜರುಗಿದ ಮಹತ್ವದ ಸಭೆಯಲ್ಲಿ ಭಾರತದ ಪರವಾಗಿ ಬ್ರಿಟಿಷ್‌ ಅಧಿಕಾರಿಗಳು, ಟಿಬೆಟ್‌ನ ಪ್ರತಿನಿಧಿಗಳು ಮತ್ತು ಚೀನಾದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸರ್‌ ಹೆನ್ರಿ ಮೆಕ್‌ಮಹೋನ್‌ ಅವರು ಗುರುತಿಸಿದ ಗಡಿರೇಖೆಯ ಒಪ್ಪಂದವನ್ನು ಈ ಸಭೆಯಲ್ಲಿಅಂಗೀಕರಿಸಲಾಯಿತು. ಇದರ ಅನ್ವಯ, ”ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ,” ಎಂಬ ನಿರ್ಣಯವನ್ನು ಟಿಬೆಟ್‌ ಮುಕ್ತವಾಗಿ ಒಪ್ಪಿಕೊಂಡಿತು. ಆದರೆ, ಚೀನಾ ಮಾತ್ರ ಒಪ್ಪಿಕೊಳ್ಳದೆ, ಸಭೆಯಿಂದ ನಿರ್ಗಮಿಸಿತು.

ಭಾರತ ಚೀನಾ ನಡುವಿನ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಆಗಾಗ್ಗೆ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಆದರೆ ಇದು ಕೇವಲ ಮಾತಿನ ಚಕಮಕಿಯಾಗಿರುತ್ತದೆ.

  • ಕಾರಣ :ಎಲ್ ಎ ಸಿಯಲ್ಲಿ ಶಾಂತಿ ಕಾಪಾಡಲು ಭಾರತ ಮತ್ತು ಚೀನಾ ನಡುವೆ 5 ಒಪ್ಪಂದಗಳಾಗಿವೆ. (1993, 1996, 2005, 2012, 2013)
  • ಪರಸ್ಪರ ಅತಿಕ್ರಮಣ, ಶಸ್ತ್ರಾಸ್ತ್ರ ದಾಳಿ, ಅನಗತ್ಯ ಪ್ರಚೋದನೆಗೆ ಇಲ್ಲಿ ಅವಕಾಶವಿಲ್ಲ. ಕೇವಲ ಶಾಂತಿಯುತ ಮಾತುಕತೆ ಮೂಲಕ ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎನ್ನುವುದು ಈ ಎಲ್ಲ ಒಪ್ಪಂದಗಳಲ್ಲಿದೆ. ಈ ಕಾರಣಕ್ಕಾಗಿ ಇಲ್ಲಿ ಗಸ್ತು ತಿರುಗುವ ಯೋಧರು ಕೂಡ ಶಸ್ತ್ರಾಸ್ತ್ರ ರಹಿತರಾಗಿಯೇ ತಂಡೋಪತಂಡವಾಗಿ ಸಾಗುತ್ತಾರೆ. ಬಂದೂಕಗಳ ಬದಲಾಗಿ ದೊಣ್ಣೆಯಂತಹ ವಸ್ತುಗಳನ್ನು ಇಟ್ಟುಕೊಂಡಿರುತ್ತಾರೆ. ಶತ್ರುಸೈನಿಕರ ಜೊತೆಗೆ ಮಾತುಕತೆ ಸಂಘರ್ಷದ ಹಂತ ತಲುಪಿದಾಗ ಮುಷ್ಟಿಕಾಳಗವು ನಡೆಯುತ್ತದೆ.
  • 1962 ರ ಯುದ್ಧದ ನಂತರ ಉಭಯ ದೇಶಗಳ ನಡುವಿನ ಕೆಟ್ಟು ಹೋಗಿದ್ದ   ಸಂಬಂಧವನ್ನು ದೂರ ಮಾಡಲು  1988 ರಲ್ಲಿ ಅಂದಿನ ಪ್ರಧಾನಿ ರಾಜೀವ ಗಾಂಧಿ ಚೀನಾಕ್ಕೆ ನೀಡಿದ್ದರು. ಈ ಪ್ರವಾಸವು ಉಭಯ ರಾಷ್ಟ್ರಗಳ ಸಂಬಂಧ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಭಾರತ-ಚೀನಾ ನಡುವಿನ ಪ್ರಮುಖ ಒಪ್ಪಂದಗಳು:

  1. 1993 ರ ಒಪ್ಪಂದ :ಪ್ರಧಾನಿ ಪಿ.ವಿ. ನರಸಿಂಹರಾವ ಚೀನಾಕ್ಕೆ ಭೇಟಿ ನೀಡಿದ್ದರು. ಚೀನಾದ ನೇತಾರ ಲೀ ಪೆಂಗ್ ಜೊತೆ ಎಲ್ಎಸಿ ಕುರಿತು ಮೊಟ್ಟ ಮೊದಲ ಒಪ್ಪಂದ ಏರ್ಪಟ್ಟಿತ್ತು. ಇದರ ಪ್ರಕಾರ ಎಲ್ಎಸಿ ಯಲ್ಲಿ ಉಭಯ ರಾಷ್ಟ್ರಗಳು ಪರಸ್ಪರ ಸೇನೆಯನ್ನು ಮುನ್ನುಗಿಸುವಂತಿಲ್ಲ ಎಂದು ತೀರ್ಮಾನ ಕೈಗೊಳ್ಳಲಾಯಿತು. ಮತ್ತು ಒಂದು ದೇಶದ ಸೈನಿಕನು ಆಕಸ್ಮಿಕವಾಗಿ ಎಲ್ಎಸಿ ಗಡಿ ದಾಟಿದರೆ, ಇನ್ನೊಂದು ದೇಶವು ಆ ಸೈನಿಕನಿಗೆ ತಕ್ಷಣವೇ ಹಿಂತಿರುಗಲು ಸೂಚಿಸಬೇಕು. ಉದ್ವಿಗ್ನತೆ ಹೆಚ್ಚಿದಲ್ಲಿ ಎರಡೂ ದೇಶಗಳ ಸೇನಾ ಕಮಾಂಡರಗಳು ತೆರಳಿ ಪರಿಸ್ಥಿಯನ್ನು ಅವಲೋಕಿಸಿ ಮಾತುಕತೆ ನಡೆಸಬೇಕು.ಸೇನಾ ಸಮರಾಭ್ಯಾಸಕ್ಕೂ ಮುನ್ನ ಮಾಹಿತಿ ನೀಡುವ ವಿಷಯವು ಈ ಒಪ್ಪಂದದಲ್ಲಿದೆ.
  2. 1996 ರ ಒಪ್ಪಂದ : ಎಚ್.ಡಿ ದೇವೇಗೌಡ ಅವರು ಪ್ರಧಾನಿ ಆಗಿದ್ದಾಗ ಎರಡನೆಯ ಒಪ್ಪಂದ ನಡೆದಿತ್ತು. ಎರಡೂ ದೇಶಗಳು ಪರಸ್ಪರ ಬಲ ಪ್ರಯೋಗ ಮಾಡುವಂತಿಲ್ಲ, ಯುದ್ಧ ಪ್ರಚೋದನೆ ನಡೆಸುವಂತಿಲ್ಲ ಎಂದು ತೀರ್ಮಾನಿಸಿದವು. ಈ ಒಪ್ಪಂದದ ಆರ್ಟಿಕಲ್ 6 ರ ಪ್ರಕಾರ, ಎಲ್ಎಸಿ ಯ 2 ಕಿ.ಮೀ. ತ್ರಿಜ್ಯದಲ್ಲಿ ಎರಡೂ ದೇಶಗಳು ಗುಂಡಿನ ದಾಳಿ ಅಥವಾ ಹಾನಿಕಾರಕ ರಾಸಾಯನಿಕಗಳನ್ನು ಬಳಸುವಂತಿಲ್ಲ ಮತ್ತು ಗಡಿಯ ಬಳಿ ಪರಸ್ಪರ 10 – 10 ಮೀಟರ ಅಂತರ ಕಾಪಾಡಿಕೊಳ್ಳಲು ತೀರ್ಮಾನಿಸಿದವು.
  3. 2005 ರ ಒಪ್ಪಂದ: ಎರಡು ರಾಷ್ಟ್ರಗಳ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಮಿಲಿಟರಿ ಕ್ಷೇತ್ರದ ವಿಶ್ವಾಸಾರ್ಹ ಕಟ್ಟಡಗಳಲ್ಲಿ ಶಿಷ್ಟಾಚಾರ ಪಾಲನೆ ಕುರಿತು ಒಪ್ಪಂದ (ಮನಮೋಹನ ಸಿಂಗ ಪ್ರಧಾನಿಯಾಗಿದ್ದರು)
  4. 2012 ರ ಒಪ್ಪಂದ: ಭಾರತ-ಚೀನಾ ಗಡಿ ವ್ಯವಹಾರಗಳ ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ಕಾರ್ಯ ಕಾರ್ಯವಿಧಾನವನ್ನು ಸ್ಥಾಪಿಸುವ ಕುರಿತು ಒಪ್ಪಂದ (ಮನಮೋಹನ ಸಿಂಗ ಪ್ರಧಾನಿಯಾಗಿದ್ದರು)
  5. 2013 ಗಡಿ ರಕ್ಷಣಾ ಸಹಕಾರ ಒಪ್ಪಂದ: ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಮಿಲಿಟರಿ ಕ್ಷೇತ್ರದಲ್ಲಿ ವಿಶ್ವಾಸ ಹೆಚ್ಚಿಸುವ ಕ್ರಮಗಳಿಗೆ ಒತ್ತು ನೀಡುವುದು (ಮನಮೋಹನ ಸಿಂಗ ಪ್ರಧಾನಿಯಾಗಿದ್ದರು)

ಚೀನಾ ಭೂ ಅತಿಕ್ರಮಿಸುವ ಪ್ರಯತ್ನಗಳನ್ನು ತಡೆಯುವಲ್ಲಿ ಭಾರತದ ಕೈಗೊಳ್ಳುತ್ತಿರುವ ಕ್ರಮಗಳು

  • ಸುರಂಗ ಮಾರ್ಗ: ತವಾಂಗ್‌ ಗಡಿ ಸಂಪರ್ಕಿಸುವ ಸೆಲಾ ಪಾಸ್‌ ಸುರಂಗ ಮಾರ್ಗವನ್ನು ಗಡಿ ರಸ್ತೆ ಅಭಿವೃದ್ಧಿ ಸಂಸ್ಥೆ (ಬಿಆರ್‌ಒ) ನಿರ್ಮಿಸುತ್ತಿದೆ. 317 ಕಿ.ಮೀ ಉದ್ದದ ಬಾಲಿಪಾರಾ-ಚಾರ್ದುಯಾರ್‌-ತವಾಂಗ್‌ ರಸ್ತೆ ಸಂಪರ್ಕದ ಭಾಗವಾಗಿ ಈ ಸುರಂಗ ಮಾರ್ಗ ನಿರ್ಮಾಣಗೊಳ್ಳುತ್ತಿದ್ದು, ಮುಂದಿನ ವರ್ಷದ ಜನವರಿ ಅಂತ್ಯಕ್ಕೆ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.
  • ಇಲ್ಲಿ ಏಕಪಥದ 980 ಮೀಟರ್‌ ಉದ್ದದ ಒಂದು ಹಾಗೂ ದ್ವಿಪಥದ 1555 ಮೀಟರ್‌ ಉದ್ದದ ಮತ್ತೊಂದು ಸುರಂಗ ನಿರ್ಮಾಣಗೊಳ್ಳುತ್ತಿದೆ. ಸಮುದ್ರ ಮಟ್ಟದಿಂದ 13,000 ಅಡಿ ಎತ್ತರದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಶ್ವದ ಮೊದಲ ದ್ವಿಪಥ ಸುರಂಗ ಮಾರ್ಗ ಇದಾಗಿದೆ ಎಂದು ಹೇಳಲಾಗುತ್ತಿದೆ.
  • ಟ್ರಾನ್ಸ್‌-ಅರುಣಾಚಲ ಹೈವೆ: ಅರುಣಾಚಲ ಪ್ರದೇಶ ರಾಜ್ಯ ಸರಕಾರವು ತವಾಂಗ್‌ ಗಡಿ ಬೆಸೆಯುವ ಟ್ರಾನ್ಸ್‌-ಅರುಣಾಚಲ ಹೆದ್ದಾರಿ ನಿರ್ಮಾಣಕ್ಕೆ ಮುಂದಾಗಿದೆ. ಇದು 2,000 ಕಿ.ಮೀ ಉದ್ದದ ಹೈವೆಯಾಗಿದೆ. ಉತ್ತರದಲ್ಲಿ ತವಾಂಗ್‌ನಿಂದ ಪೂರ್ವದಲ್ಲಿ ಕನುಬಾರಿವರೆಗೆ ಸಂಪರ್ಕ ಕಲ್ಪಿಸುವ ದ್ವಿಪಥದ ಹೆದ್ದಾರಿ ಇದಾಗಿದ್ದು, ಈಗಾಗಲೇ ಅನೇಕ ಭಾಗಗಳಲ್ಲಿ ಕಾಮಗಾರಿಗಳು ಪೂಣಗೊಂಡಿವೆ. ಯುಪಿಎ ಸರಕಾರದ ಅವಧಿಯಲ್ಲಿಯೇ ಚಾಲನೆ ದೊರೆತಿದ್ದ ಈ ಯೋಜನೆ 2024ರ ವೇಳೆಗೆ ಪೂರ್ಣಗೊಳ್ಳಲಿದೆ.
  • ಸಿವೋಕ್‌-ರಂಗ್‌ಪೂ ರೈಲು ಸಂಪರ್ಕ: ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ನಡುವಿನ 45 ಕಿ.ಮೀ. ಉದ್ದದ ಸಿವೋಕ್‌-ರಂಗ್‌ಪೂ ರೈಲು ಸಂಪರ್ಕ ಮಾರ್ಗ ಯೋಜನೆ ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನಾಥು ಲಾ ಪಾಸ್‌ ಮತ್ತು ಡೊಕ್ಲಾಮ್‌ ವಲಯಗಳಿಗೆ ತ್ವರಿತಗತಿಯಲ್ಲಿ ಸೇನಾ ಸರಕುಗಳ ಸಾಗಣೆ ನಿಟ್ಟಿನಲ್ಲಿ ಈ ಸಂಪರ್ಕ ಮಾರ್ಗ ಮಹತ್ವದ್ದಾಗಿದೆ. ಈಸ್ಟರ್ನ್‌ ಕಮಾಂಡ್‌ಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. 2017ರ ಡೊಕ್ಲಾಮ್‌ ಸಂಘರ್ಷದ ಬಳಿಕ ಭಾರತವು ಈ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಒತ್ತು ಕೊಟ್ಟಿದೆ.
  • ಹಸೀಮಾರಾ ವಾಯುನೆಲೆ ಉನ್ನತೀಕರಣ: ಭೂತಾನ್‌ ಗಡಿ ಸಮೀಪದ ಹಸೀಮಾರಾ ವಾಯುನೆಲೆಯು ಚೀನಾ ದೃಷ್ಟಿಯಿಂದ ಭಾರತಕ್ಕೆ ಮಹತ್ವದ ಏರ್‌ಪೋರ್ಟ್‌ ಆಗಿದ್ದು, ಅದರ ಉನ್ನತೀಕರಣಕ್ಕೆ ಸರಕಾರ ಮುಂದಾಗಿದೆ. ಇದರ ಜತೆಗೆ ಈಗಾಗಲೇ ಫ್ರಾನ್ಸ್‌ನಿಂದ ಖರೀದಿಸಲಾದ 36 ರಫೇಲ್‌ ಫೈಟರ್‌ಜೆಟ್‌ಗಳ ಪೈಕಿ ಕೆಲವನ್ನು ಈ ವಾಯುನೆಲೆಯಲ್ಲಿ ನಿಯೋಜಿಸಲಾಗಿದೆ. ಚೀನಾ ವಾಯುಪಡೆಯ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು ಇದು ನೆರವಾಗುತ್ತಿದೆ

ಇಂಡಿಯಾ ಅಫಘಾನಿಸ್ಥಾನ ಗಡಿ ರೇಖೆ

  • ಡ್ಯುರಾಂಡ್ ರೇಖೆ ಎಂದು ಕರೆಯಲಾಗುತ್ತದೆ
  • ಅಫ್ಘಾನಿಸ್ತಾನ ಮತ್ತು ಭಾರತದ ನಡುವಿನ 2,250-ಕಿಲೋಮೀಟರ್ (1,400 ಮೈಲಿ) ಉದ್ದದ ಗಡಿಯಾಗಿದೆ. ಇದನ್ನು 1893 ರಲ್ಲಿ ಸ್ಥಾಪಿಸಲಾಯಿತು.