Published on: December 21, 2021

ಮತಾಂತರ ನಿಷೇಧ ವಿಧೇಯಕ

ಮತಾಂತರ ನಿಷೇಧ ವಿಧೇಯಕ

ಸುದ್ಧಿಯಲ್ಲಿ ಏಕಿದೆ? ವಿವಾದಾತ್ಮಕ ಮತಾಂತರ ನಿಷೇಧ ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆ ದಟ್ಟವಾಗಿದೆ. ವಿಧೇಯಕದಲ್ಲಿ ಬಲವಂತದ ಮತಾಂತರಕ್ಕೆ ಹತ್ತು ವರ್ಷದ ವರೆಗೂ ಶಿಕ್ಷೆ ಕೊಡುವ ಅವಕಾಶ‌ ಇದೆ.

ಮತಾಂತರ ನಿಷೇಧ ವಿಧೇಯಕದಲ್ಲಿ ಇರುವ ಪ್ರಮುಖ ಅಂಶಗಳೇನು?

  • ಬಲವಂತ, ವಂಚನೆ, ಒತ್ತಾಯ ಹಾಗೂ ಆಮಿಷದ ಮೂಲಕ ನಡೆಸುವ ಮತಾಂತರ ಹಾಗೂ ಮದುವೆಯಾಗುವ ಭರವಸೆಯ ಮೂಲಕ ನಡೆಸುವ ಮತಾಂತರಕ್ಕೆ ನಿಷೇಧವಿದೆ.‌
  • ಆದರೆ ವ್ಯಕ್ತಿಯು ಆತನ ನಿಕಟ ಪೂರ್ವ ಧರ್ಮಕ್ಕೆ ಮರು ಮತಾಂತರಗೊಂಡರೆ ಅದನ್ನು ಈ ಅಧಿನಿಯಮದ ಅಡಿಯಲ್ಲಿ ಮತಾಂತರವೆಂದು ಪರಿಗಣಿಸಲಾಗುವುದಿಲ್ಲ
  • ಮತಾಂತರಗೊಂಡ ವ್ಯಕ್ತಿಯ ಪೋಷಕರು, ಸಹೋದರ, ಸಹೋದರಿ, ಸಹವರ್ತಿ ಅಥವಾ ಸಹೋದ್ಯೋಗಿಗಳಿಗೂ ಮತಾಂತರದ ಬಗ್ಗೆ ದೂರನ್ನು ನೀಡಿದರೆ ಎಫ್ ಐಆರ್ ದಾಖಲಿಸುವ ಅವಕಾಶವಿದೆ.
  • ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಇಪ್ಪತ್ತೈದು ಸಾವಿರ ರೂಪಾಯಿಗಳ ದಂಡ‌ ವಸೂಲಾತಿಗೆ ಅವಕಾಶವಿದೆ.
  • ಅಪ್ರಾಪ್ತ ವ್ಯಕ್ತಿ, ಮಹಿಳೆ, ಎಸ್ ಸಿ, ಎಸ್ ಟಿ ಸೇರಿದ ವ್ಯಕ್ತಿಯ ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಹತ್ತು ವರ್ಷಗಳ ವರೆಗೆ ಜೈಲು ಶಿಕ್ಷೆಗೆ ಕಾಯ್ದೆಯಲ್ಲಿ ಅವಕಾಶವಿದೆ. ಅಷ್ಟೇ ಅಲ್ಲದೆ 50 ಸಾವಿರ ದಂಡ ವಸೂಲಿಗೂ ಅವಕಾಶವಿದೆ.
  • ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ ಸಂದಾಯವಾಗುವಂತೆ ಗರಿಷ್ಠ ಐದು ಲಕ್ಷ ರೂಪಾಯಿ ಪರಿಹಾರ ಕೊಡಿಸಲು ಅವಕಾಶ ಕಲ್ಪಿಸಲಾಗಿದೆ.
  • ಅಪರಾಧ ಪುನರಾವರ್ತನೆ ಆದಲ್ಲಿ ಐದು ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ದಂಡ ವಸೂಲಿಗೂ ಅವಕಾಶವಿದೆ.
  • ಮತಾಂತರದ ಉದ್ದೇಶದ ಆದ ಮದುವೆಯನ್ನು ಅಸಿಂಧುವೆಂದು ಘೋಷಿಸಲು ನ್ಯಾಯಾಲಯಕ್ಕೆ ಅವಕಾಶ ನೀಡಲಾಗಿದೆ.

ಮತಾಂತರ ಆಗಬೇಕಾದಲ್ಲಿ ಪಾಲಿಸಬೇಕಿದೆ ನಿಯಮಾವಳಿಗಳು!

  • ಮತಾಂತರವಾಗಲು‌ ಮುಂದಾಗಿರುವ ವ್ಯಕ್ತಿ ಕನಿಷ್ಠ ಆರವತ್ತು ದಿನಗಳ ಮೊದಲು ಜಿಲ್ಲಾ ದಂಡಾಧಿಕಾರಿಗೆ ಈ ಬಗ್ಗೆ ತಿಳಿಸಬೇಕು.
  • ಮತಾಂತರ ಮಾಡುವ ವ್ಯಕ್ತಿಯೂ ಈ ಬಗ್ಗೆ ಜಿಲ್ಲಾ ದಂಡಾಧಿಕಾರಿಗೆ ಮೂವತ್ತು ದಿನಗಳ ಮೊದಲೇ ಈ ಬಗ್ಗೆ ಮಾಹಿತಿ ಕೊಡಬೇಕು.
  • ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು. ಇದಕ್ಕೆ30 ದಿನಗಳ ಒಳಗಾಗಿ ಆಕ್ಷೇಪನೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಿಚಾರಣೆ ನಡೆಸಲು ಅವಕಾಶ ಇದೆ.
  • ವಿಚಾರಣೆಯ ಸಂದರ್ಭದಲ್ಲಿ ತಪ್ಪು ಕಂಡುಬಂದಲ್ಲಿ ಕ್ರಿಮಿನಲ್‌ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲು ಅವಕಾಶವಿದೆ.
  • ಮತಾಂತರಗೊಂಡ ವ್ಯಕ್ತಿಯೂ ಮತಾಂತರಗೊಂಡ ದಿನಾಂಕದಿಂದ‌ ಹಿಡಿದು ಮೂಲ ಧರ್ಮ, ಮತಾಂತರಗೊಂಡ ಧರ್ಮ ಹಾಗೂ ಇನ್ನಿತರ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಬೇಕು.
  • ಅಪರಾಧಕ್ಕೆ ನೆರವು ಹಾಗೂ ದುಷ್ಪ್ರೇರಣೆ ನೀಡಿ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶವೂ ಇದೆ.