Published on: November 10, 2021

‘ಮನೆ ಮನೆಗೆ ಗಂಗೆ’

‘ಮನೆ ಮನೆಗೆ ಗಂಗೆ’

ಸುದ್ಧಿಯಲ್ಲಿ ಏಕಿದೆ ? ಕೊರೊನಾ ಕಾರಣದಿಂದಾಗಿ ‘ಮನೆ ಮನೆಗೆ ಗಂಗೆ’ ಎನ್ನುವ ಮಹತ್ವದ ಯೋಜನೆಗೆ ತೀವ್ರ ಹಿನ್ನಡೆಯಾಗಿದೆ. ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ವಿಳಂಬ ಮತ್ತು ಅನುದಾನದ ಕೊರತೆಯಿಂದಾಗಿ ನಿಗದಿತ ಪ್ರಗತಿ ಸಾಧಿಸುವುದು ಸಾಧ್ಯವಾಗಿಲ್ಲ.

ಅಂಕಿ ಸಂಖ್ಯೆ

  • 2020ರಲ್ಲೇ ಯೋಜನೆ ಆರಂಭವಾಗಿದ್ದರೂ ಶೇ. 90 ರಷ್ಟು ನಳ ಸಂಪರ್ಕಿಸುವ ಕಾರ್ಯ ಇನ್ನೂ ಬಾಕಿ ಇದೆ. ಸರಕಾರ ಹಾಕಿಕೊಂಡ ಗುರಿ ಅನ್ವಯ ಕಳೆದೆರಡು ವರ್ಷದಲ್ಲಿ 40 ಲಕ್ಷ ಮನೆಗಳಿಗೆ ಗಂಗೆ ಹರಿಯಬೇಕಿತ್ತು. ಕೋವಿಡ್‌ ಬಾಧಿಸಿದ ಹಿನ್ನೆಲೆ 2020ರಲ್ಲಿ 3.43 ಲಕ್ಷ ಮನೆಗಳು ಮತ್ತು ಪ್ರಸಕ್ತ ಸಾಲಿನಲ್ಲಿ ಈ ವರೆಗೆ 5.57 ಲಕ್ಷ ಮನೆಗಳು ಸೇರಿ ಒಟ್ಟಾರೆ ಸರಾಸರಿ 9 ಲಕ್ಷ ಮನೆಗಳಿಗೆ ಮಾತ್ರ ಯೋಜನೆ ಲಭಿಸಿದೆ.
  • ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ 4.05 ಕೋಟಿ ಜನಸಂಖ್ಯೆ ಇದ್ದು, 2053ರಲ್ಲಿ 5 ಕೋಟಿ ಜನಸಂಖ್ಯೆ ಮೀರಲಿದೆ. ಹೀಗಾಗಿ, ಮುಂಬರುವ 30 ವರ್ಷದ ದೃಷ್ಟಿಕೋನ ಇಟ್ಟುಕೊಂಡೇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮೂಲಕ ಯೋಜನೆ ಜಾರಿ ಮಾಡಲಾಗಿದೆ.

ಏನಿದು ಯೋಜನೆ?:

  • ಗ್ರಾಮೀಣ ವಸತಿಗಳ ಪ್ರತಿ ಮನೆಗಳಿಗೆ 2024ರೊಳಗಾಗಿ ನಳ ಸಂಪರ್ಕ ಕಲ್ಪಿಸುವ ಮೂಲಕ ಮನೆಯ ಪ್ರತಿ ಸದಸ್ಯನಿಗೆ ಪ್ರತಿ ದಿನ 55 ಲೀಟರ್‌ ಶುದ್ಧ ನೀರು ಪೂರೈಸುವ ಯೋಜನೆ ಇದಾಗಿದೆ.
  • ನೀರಿನ ಸೌಲಭ್ಯವಿಲ್ಲದ ಗ್ರಾಮೀಣ ಜನ ವಸತಿಗಳಿಗೆ ಹತ್ತಿರದ ಜಲಾಶಯಗಳಿಂದ ಎತ್ತುವಳಿ ಯೋಜನೆ ಮೂಲಕ ನೀರನ್ನು ಕಲ್ಪಿಸುವುದು ಯೋಜನೆಯ ಉದ್ದೇಶ.

ಎಲ್ಲೆಲ್ಲಿ ಸಮಸ್ಯೆ:

  • ಬೀದರ್‌, ಕಲಬುರಗಿ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಮನೆಗಳಿಗೆ ನಳ ಸಂಪರ್ಕ ನೀಡಿದರೂ ನೀರಿನ ಸೌಲಭ್ಯ ಒದಗಿಸುವುದು ಕಷ್ಟ. ಹೀಗಾಗಿ ಕೊಳವೆ ಬಾವಿ ಮೂಲಕ ಅಥವಾ ಇತರ ಜಿಲ್ಲೆಗಳ ಜಲಾಶಯಗಳಿಂದ ಪೈಪ್‌ ಲೈನ್‌ ಮೂಲಕವಾದರೂ ನೀರು ತರುವ ಪ್ರಯತ್ನ ನಡೆದಿದೆ.