Published on: December 21, 2022

‘ಮನೋಸ್ಥೈರ್ಯ’ ಕಾರ್ಯಕ್ರಮ

‘ಮನೋಸ್ಥೈರ್ಯ’ ಕಾರ್ಯಕ್ರಮ

ಸುದ್ದಿಯಲ್ಲಿ ಏಕಿದೆ? ಮಕ್ಕಳಿಗೆ ಮಾನಸಿಕ ಆರೋಗ್ಯದ ಮಹತ್ವವನ್ನು ತಿಳಿಸಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ನೇತೃತ್ವದಲ್ಲಿ ‘ಮನೋಸ್ತೈರ್ಯ’ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.

ಮುಖ್ಯಾಂಶಗಳು

  • ಮಂಗಳೂರಿನಲ್ಲಿ ಈ ಉಪಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಕಾರ್ಯಕ್ರಮದಡಿ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮತ್ತು ಸಮಾಲೋಚನೆ ನೀಡಲಾಗುತ್ತಿದೆ.
  • ಕಾರ್ಯಕ್ರಮದ ಮೂಲಕ ಶಾಲೆಯ ಶಿಕ್ಷಕರಿಗೆ ಮನಶ್ಶಾಸ್ತ್ರಜ್ಞರು ಮತ್ತು ಮನೋವೈದ್ಯರಿಂದ ತರಬೇತಿ ನೀಡಲಾಗುತ್ತದೆ.
  • ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆ ಕಾರ್ಯಕ್ರಮಕ್ಕೆ ಇದು ಮೊದಲ ಉಪಕ್ರಮವಾಗಿದೆ.
  • ಈಗಾಗಲೇ 220 ಶಿಕ್ಷಕರನ್ನು ಗುರುತಿಸಲಾಗಿದ್ದು, 2023ರ ಜನವರಿಯಿಂದ ಕಾರ್ಯಕ್ರಮ ಆರಂಭವಾಗುವ ನಿರೀಕ್ಷೆಯಿದೆ.

ಕಾರ್ಯಕ್ರಮ ಪ್ರಾರಂಭಿಸಲು ಕಾರಣಗಳು

  • ಮಕ್ಕಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಮತ್ತು ಖಿನ್ನತೆಯ ಸಂಖ್ಯೆಯು ಕಳವಳಕ್ಕೆ ಪ್ರಮುಖ ಕಾರಣವಾಗಿದೆ. ಈ ಸಮಸ್ಯೆಗೆ ಅಂತ್ಯ ಹಾಡಲು ನಾವು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ವಯಸ್ಸಿನಲ್ಲಿ ಮಧ್ಯಪ್ರವೇಶಿಸಬೇಕಾಗಿದೆ.
  • ಅನೇಕ ವಿದ್ಯಾರ್ಥಿಗಳು, ವಿಶೇಷವಾಗಿ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಓದುತ್ತಿರುವವರು ಜೀವನದ ವಾಸ್ತವಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಷ್ಟಕರ ಸಂದರ್ಭಗಳನ್ನು ಎದುರಿಸಲು ಅಸಹಾಯಕರಾಗುತ್ತಾರೆ. ತಮ್ಮ ಸಮಸ್ಯೆಗಳಿಗೆ ಪರ್ಯಾಯ ಪರಿಹಾರಗಳನ್ನು ಕಂಡುಗೊಳ್ಳದೆ,ಖಿನ್ನತೆಯಲ್ಲಿ ಏಕಾಂಗಿಯಾಗಿ ಹೋರಾಡುತ್ತಾರೆ.
  • ಖಿನ್ನತೆ, ಹತಾಶೆ, ಆತಂಕ, ಅನಿಯಂತ್ರಿತ ಕೋಪ ಮತ್ತು ಇತರ ಮಾನಸಿಕ ಅಸ್ವಸ್ಥತೆಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ, ಕೆಲವು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಇದು ಸಮಯದ ಅಗತ್ಯವಾಗಿದೆ. ಕೌನ್ಸೆಲಿಂಗ್‌ನಿಂದ ವಿದ್ಯಾರ್ಥಿಗಳು ಇದರಿಂದ ಹೊರಬರಲು ಖಂಡಿತಾ ಸಹಕಾರಿಯಾಗುತ್ತದೆ.

ಕಾರ್ಯಕ್ರಮಗಳು

  • ‘ನೋ ಬ್ಯಾಗ್’ ದಿನದಂದು ಮಕ್ಕಳ ಮಾನಸಿಕ ಆರೋಗ್ಯಕ್ಕಾಗಿ ಒಂದು ಗಂಟೆ ಮೀಸಲಿಡಲಾಗುವುದು.
  • ಪ್ರತಿ ಶಾಲೆಯ ಮುಖ್ಯೋಪಾಧ್ಯಾಯಿನಿ/ ಮುಖ್ಯೋಪಾಧ್ಯಾಯರು ಮಾನಸಿಕ ಆರೋಗ್ಯದ ಕುರಿತು ತರಗತಿಗಳನ್ನು ನಡೆಸಲು ಒಬ್ಬ ಶಿಕ್ಷಕರನ್ನು ನೋಡಲ್ ಅಧಿಕಾರಿ ಅಥವಾ ಮಾರ್ಗದರ್ಶಕರಾಗಿ ನೇಮಿಸುತ್ತಾರೆ.
  • ಶಾಲೆಗಳಲ್ಲಿ ಮಾನಸಿಕ ಆರೋಗ್ಯ ಸಮಾಲೋಚನಾ ಕೇಂದ್ರವನ್ನು ಸಹ ತೆರೆಯಲಾಗುವುದು ಮತ್ತು ಒತ್ತಡದಲ್ಲಿರುವ ಮಕ್ಕಳಿಗೆ ವಿಶೇಷ ಸಮಾಲೋಚನೆಯನ್ನು ನೀಡುವ ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತದೆ.
  • ಮಾನಸಿಕ ಆರೋಗ್ಯ ಮತ್ತು ಸ್ಥಿರತೆ ಕುರಿತು ತರಗತಿಗಳು ಪ್ರತಿ ವಾರ ನಡೆಯಲಿವೆ.