Published on: September 30, 2021
ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ
ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ
ಸುದ್ಧಿಯಲ್ಲಿ ಏಕಿದೆ? ಕೊರೊನಾದಿಂದಾಗಿ ಕಳೆದ ಎರಡು ಬಾರಿ ತಡೆ ಹಿಡಿಯಲಾಗಿದ್ದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಘೋಷಿಸಲಾಗಿದೆ.
- 2020ರ ಸಾಲಿಗೆ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ‘ಮೀರಾಬಾಯಿ ಕೊಪ್ಪಿಕರ್’ ಮತ್ತು 2021ನೇ ಸಾಲಿಗೆ ‘ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಹಾಗೂ ‘ಸಿದ್ಧಗಂಗಾ ಮಠ’ ವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪ್ರಶಸ್ತಿ ಬಗ್ಗೆ
- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯನ್ನು ಸರಕಾರಿ ಕಾರ್ಯಕ್ರಮವನ್ನಾಗಿ ರಾಜ್ಯಾದ್ಯಂತ ಅರ್ಥಪೂರ್ಣವಾಗಿ ಆಚರಿಸಲು ಗಾಂಧಿ ತತ್ವಾದರ್ಶಗಳನ್ನು ಆಧರಿಸಿಕೊಂಡು ಸಮಾಜದಲ್ಲಿ ಗಣನೀಯ ಸೇವೆ ಮಾಡಿದ ಗಣ್ಯರನ್ನು ಗುರುತಿಸಿ ವಾರ್ತಾ ಇಲಾಖೆ ಪ್ರಶಸ್ತಿ ನೀಡುತ್ತಿದೆ.
- ಪ್ರಶಸ್ತಿ ಪುರಸ್ಕೃತರಿಗೆ ತಲಾ ಐದು ಲಕ್ಷ ರೂ. ನಗದು ಪುರಸ್ಕಾರ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುವುದು.
- ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಕರ್ನಾಟಕ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅಶೋಕ್ ಬಂಗಾರೆಪ್ಪಾ ಹಿಂಚಿಗೇರಿ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು.
ಪ್ರಶಸ್ತಿ ಪುರಸ್ಕೃತರ ಹಿನ್ನೆಲೆ
ಸಿದ್ದಗಂಗಾ ಶಿಕ್ಷಣ ಸಂಸ್ಥೆ ಹಾಗೂ ಸಿದ್ದಗಂಗಾ ಮಠ
- “ನಡೆದಾಡುವ ದೇವರು” ಎಂದೇ ಖ್ಯಾತರಾದ ಪರಮಪೂಜ್ಯ ಡಾ: ಶಿವಕುಮಾರ ಸ್ವಾಮೀಜಿಯವರ ಮಹದಾಶಯದಂತೆ ಸತತವಾಗಿ 80 ವರ್ಷಗಳ ಕಾಲ ಅನ್ನದಾಸೋಹ ಹಾಗೂ ಅಕ್ಷರ ದಾಸೋಹದ ತವರಾಗಿ ಜಾತಿ-ಧರ್ಮ ಭೇದವಿಲ್ಲದೇ, ಪ್ರಾಂತ್ಯ-ಪ್ರದೇಶ ತಾರತಮ್ಯ ಮಾಡದೇ ಲಕ್ಷಾಂತರ ಮಕ್ಕಳಿಗೆ ಅನ್ನ, ಆಶ್ರಯ ಮತ್ತು ವಿದ್ಯೆಯನ್ನು ದಾನ ಮಾಡಿದ, ರಾಷ್ಟ್ರದಲ್ಲೇ ಪ್ರತಿಷ್ಠಿತ ಸಂಸ್ಥೆ ಎಂದು ಹೆಸರಾದ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಹಾಗೂ ಸಿದ್ದಗಂಗಾ ಮಠ, ಕ್ಯಾತಸಂದ್ರ, ತುಮಕೂರು, ಸಾಧನೆಗಳ ತವರು.
ಮೀರಾಬಾಯಿ ಕೊಪ್ಪಿಕರ್
- ಮೀರಾಬಾಯಿ ಕೊಪ್ಪಿಕರ್, ಹುಬ್ಬಳ್ಳಿಯ ಅತ್ಯಂತ ಶ್ರೀಮಂತರಾಗಿದ್ದ ಕೊಪ್ಪಿಕರ್ ವಂಶದ ಕುಡಿ. ಇವರಿಗೆ 96 ವರ್ಷ. ಸದ್ಯ ಮುಧೋಳದಲ್ಲಿರುವ ವಾತ್ಸಲ್ಯ ಧಾಮದಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಪಕ್ಕಾ ಗಾಂಧಿವಾದಿಯಾಗಿದ್ದ ಇವರು ಇತ್ತೀಚಿನವರೆಗೂ ತಾವೇ ನೂಲು ನೇಯ್ದು ಅದರಲ್ಲಿ ವಸ್ತ್ರವನ್ನು ಮಾಡಿಕೊಳ್ಳುತ್ತಿದ್ದರು.
- ಗಾಂಧಿವಾದಿಗಳಾಗಿದ್ದ ಮೀರಾಬಾಯಿ ಕೊಪ್ಪಿಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸಬರಮತಿ ಆಶ್ರಮದಲ್ಲಿ ಇದ್ದರು. ವಿನೋಬಾ ಭಾವೆಯವರ ಜೊತೆಗೂಡಿ ಭೂದಾನ ಚಳವಳಿಯಲ್ಲಿ ಪಾಲ್ಗೊಂಡು, ಕರ್ನಾಟಕದಿಂದ ಒಟ್ಟು 40 ಸಾವಿರ ಎಕರೆ ಭೂಮಿಯನ್ನು ದಾನ ಮಾಡಿಸುವಲ್ಲಿ ಯಶಸ್ವಿಯಾದವರು.