Published on: January 3, 2022

‘ಮಾತೃ ವಂದನಾ’ ಯೋಜನೆ

‘ಮಾತೃ ವಂದನಾ’ ಯೋಜನೆ

ಸುದ್ಧಿಯಲ್ಲಿ ಏಕಿದೆ ?  ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಮೈಸೂರು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು, 70 ಸಾವಿರಕ್ಕೂ ಹೆಚ್ಚು ಮಹಿಳೆಯರು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.

ಯೋಜನೆ ಯಶಸ್ವಿಗೊಳ್ಳಲು ಕಾರಣ

  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಯೋಜನೆ ಬಗ್ಗೆ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ ಪರಿಣಾಮ, ಮೈಸೂರು ಜಿಲ್ಲೆಯು ಯೋಜನೆ ಜಾರಿಯಲ್ಲಿ ಬಹುಪಾಲು ಯಶಸ್ವಿಯಾಗಿದೆ. ಆ ಮೂಲಕ ರಾಜ್ಯದಲ್ಲಿಯೇ ಐದನೇ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಗರದಲ್ಲಿ ತುಸು ಅಡೆತಡೆ:

  • ಗ್ರಾಮೀಣ ಪ್ರದೇಶದಲ್ಲಿ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಆದರೆ ನಗರ ಪ್ರದೇಶದಲ್ಲಿ ಸ್ವಲ್ಪ ಅಡೆ ತಡೆ ಎದುರಾಗುತ್ತಿದೆ. ಹೆಚ್ಚು ಜನಸಂಖ್ಯೆ ಇರುವ ನಗರದಲ್ಲಿ ಯೋಜನೆಯಡಿ ಫಲಾನುಭವಿಗಳಾಗುತ್ತಿರುವವರ ಸಂಖ್ಯೆ ಕಡಿಮೆ ಇದೆ.
  • ಅಲ್ಲದೇ, ನಗರ ಪ್ರದೇಶದಲ್ಲಿ ಗರ್ಭಿಣಿಯರು ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡುವುದು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಅಗತ್ಯಕ್ಕೆ ತಕ್ಕಷ್ಟು ಇಲ್ಲದಿರುವುದು, ನಗರದ ಬಹುತೇಕ ಮಹಿಳೆಯರು ಈ ಬಗ್ಗೆ ಆಸಕ್ತಿ ವಹಿಸದಿರುವುದು ಕಾರಣವಾಗಿದೆ.

ಪಿಎಂಎಂವಿವೈ ಯೋಜನೆ

  • ಈ ಯೋಜನೆಯು 2017ರ ಜನವರಿ 1 ರಂದು ಜಾರಿಗೆ ಬಂದಿದ್ದು, ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ಪೌಷ್ಠಿಕ ಆಹಾರ ಪಡೆಯುವುದಕ್ಕಾಗಿ 5000 ರೂ. ಗಳನ್ನು ಫಲಾನುಭವಿಗಳ ಆಧಾರ್ ಲಿಂಕ್ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಗುತ್ತದೆ.
  • ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗೆ ಅನುಗುಣವಾಗಿ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಭಾರತ ಸರ್ಕಾರ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಜಾರಿಗೆ ತಂದಿದೆ. ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಈ ಯೋಜನೆ ಸಹಕಾರಿಯಾಗಿದೆ. ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ, ಬಾಣಂತಿಯರ ಮರಣವನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರ್ಕಾರ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಜಾರಿಗೆ ತಂದಿದೆ.

ಮಾತೃ ವಂದನಾ ಯೋಜನೆಯ ಉದ್ದೇಶ

  • ಪ್ರಸವಕ್ಕೆ ಕೆಲ ದಿನಗಳ ಮೊದಲು ಮತ್ತು ನಂತರದ ತಿಂಗಳುಗಳಲ್ಲಿ ಮಹಿಳೆ ವಿಶ್ರಾಂತಿ ಪಡೆಯಬೇಕಾಗುತ್ತದೆ. ವಿಶ್ರಾಂತಿಯಿಂದಾಗಿ ಆಕೆಗೆ ಆಗುವ ಕೂಲಿ ಹಣದ ನಷ್ಟವನ್ನು ಸಹಾಯಧನದ ಮೂಲಕ ತುಂಬಿಕೊಡಲು ಸರ್ಕಾರ ಯೋಜನೆ ರೂಪಿಸಿದೆ.
  • ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ಸಹಕರಿಸುವುದರ ಜೊತೆಗೆ ಅಪೌಷ್ಟಿಕತೆ ಮತ್ತು ರಕ್ತಹಿನತೆ, ಶಿಶುಮರಣ ತಡೆಯುವುದು.
  • ನಗದು ಸಹಾಯಧನ ಪ್ರೋತ್ಸಾಹವು ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯ ಸುಧಾರಣೆಗೆ ನೆರವಾಗುತ್ತದೆ.

ಪಿಎಂಎಂವಿವೈ ಅಡಿಯಲ್ಲಿ ಪ್ರಯೋಜನಗಳು

  • ಅರ್ಹ ಗರ್ಭಿಣಿ ಮತ್ತು ಬಾಣಂತಿಯರಿಗೆ ಮೂರು ಕಂತುಗಳಲ್ಲಿ 5000 ರೂಪಾಯಿ ನಗದು ಸಹಾಯಧನ. ಫಲಾನುಭವಿಯ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುತ್ತದೆ.
  • ಅಂಗನವಾಡಿ ಕೇಂದ್ರದಲ್ಲಿ (ಎಡಬ್ಲ್ಯೂಸಿ) ನೋಂದಣಿ ಮಾಡಿಸಿದ ಗರ್ಭಿಣಿಯರಿಗೆ 150 ದಿನದೊಳಗಾಗಿ ಮೊದಲನೇ ಕಂತಿನಲ್ಲಿ 1000 ರೂಪಾಯಿ ಪಾವತಿಸಲಾಗುತ್ತದೆ.
  • ಎರಡನೇ ಕಂತಿನ 2000 ರೂಪಾಯಿ ಸಹಾಯಧನವನ್ನು ಗರ್ಭಧಾರಣೆಯ 6 ತಿಂಗಳ ನಂತರ ಕನಿಷ್ಠ ಒಂದು ಬಾರಿ ವೈದ್ಯಕೀಯ ತಪಾಸಣೆ ಮಾಡಿದ ನಂತರ ಪಾವತಿಸಲಾಗುತ್ತದೆ.
  • ಮೂರನೇ ಕಂತಿನ 2000 ರೂಪಾಯಿಯನ್ನು ಮಗುವಿನ ಜನನ ಅಧಿಕೃತವಾಗಿ ನೋಂದಣಿಯ ನಂತರ ಮತ್ತು ಮಗುವಿಗೆ ಮೊದಲ ಸುತ್ತಿನ ಬಿಸಿಜಿ, ಒಪಿವಿ, ಡಿಪಿಟಿ ಮತ್ತು ಹೆಪಟೈಟಿಸ್ ಹಾಕಿಸಿದ ನಂತರ ಪಾವತಿಸಲಾಗುವುದು.

ಯಾರೆಲ್ಲಾ ನೋಂದಣಿ ಮಾಡಿಕೊಳ್ಳಬಹುದು?

  • ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು.
  • ಗರ್ಭಪಾತಕ್ಕೆ ಸಂಬಂಧಿಸಿದಂತೆ ಫಲಾನುಭವಿಯು ಈ ಯೋಜನೆಯಡಿ ಒಮ್ಮೆ ಮಾತ್ರ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
  • ಶಿಶು ಮರಣವಾಗಿದ್ದರೆ ಫಲಾನುಭವಿಯು ಯೋಜನೆಯಡಿ ಒಮ್ಮೆ ಮಾತ್ರ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಅಂದರೆ, ಶಿಶು ಮರಣದ ಸಂದರ್ಭದಲ್ಲಿ, ಮೊದಲು ಪಿಎಂಎಂವಿವೈ ಅಡಿಯಲ್ಲಿ ಮಾತೃತ್ವ ಲಾಭದ ಎಲ್ಲಾ ಕಂತುಗಳನ್ನು ಆಕೆ ಈಗಾಗಲೇ ಪಡೆದಿದ್ದರೆ, ಈ ಯೋಜನೆಯಡಿಯಲ್ಲಿ ಮತ್ತೊಮ್ಮೆ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ.
  • ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಅಡಿಯಲ್ಲಿ (ಮಹಿಳಾ ಸರ್ಕಾರಿ ನೌಕರರನ್ನು ಹೊರತುಪಡಿಸಿ) ಬಿಪಿಎಲ್ ಮತ್ತು ಎಪಿಎಲ್​ ಪಡಿತರ ಚೀಟಿದಾರರು ಕುಟುಂಬದ ಮೊದಲ ಮಗುವಿಗೆ ಮಾತ್ರ ರೂಪಾಯಿ 5000 ಪಡೆಯಲು ಅರ್ಹರಾಗಿರುತ್ತಾರೆ.
  • ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ಸರ್ಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಈ ಯೋಜನೆಯ ಸವಲತ್ತುಗಳು ಸಿಗುವುದಿಲ್ಲ. ಇತರ ಸರ್ಕಾರಿ ಯೋಜನೆಗಳಡಿ ಸಮಾನ ಪ್ರಯೋಜನಗಳನ್ನು ಪಡೆಯುತ್ತಿರುವವರೂ ಈ ಯೋಜನೆಯ ಫಲಾನುಭವಿಗಳಾಗುವಂತಿಲ್ಲ