Published on: June 24, 2022

ಮಾನವೀಯತೆಗಾಗಿ ಯೋಗ:

ಮಾನವೀಯತೆಗಾಗಿ ಯೋಗ:

ಸುದ್ದಿಯಲ್ಲಿ ಏಕಿದೆ?

ವಿಶ್ವವಿಖ್ಯಾತ ಮೈಸೂರು ಅರಮನೆ ಅಂಗಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆದಿದ್ದು, ಮೋದಿಯವರು ಓಂಕಾರ ಉಚ್ಛಾರಣೆ ಮತ್ತು ಸಂಸ್ಕತ ಶ್ಲೋಕದೊಂದಿಗೆ ಯೋಗಭ್ಯಾಸ ನಡೆಸಿದರು.

ಮುಖ್ಯಾಂಶಗಳು

  • ಮಾನವೀಯತೆಗಾಗಿ ಯೋಗ: ಪ್ರತಿ ಬಾರಿಯ ಯೋಗ ದಿನಾಚರಣೆಗೆ ಪೂರಕವಾಗಿ ವಿಶ್ವಸಂಸ್ಥೆ ಘೋಷವಾಕ್ಯವೊಂದನ್ನು ನೀಡುತ್ತದೆ. ಅದರಂತೆ, ಈ ಬಾರಿ ‘ಮಾನವೀಯತೆಗಾಗಿ ಯೋಗ‘ ಎಂಬ ಥೀಮ್ ಅನ್ನು ನೀಡಲಾಗಿದೆ.
  • 2022, ಜೂನ್ 21 ರಂದು ಎಂಟನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಾಗಿದೆ. ಈ ಬಾರಿ ಮೈಸೂರಿನಲ್ಲಿ ಪ್ರಮುಖ ಕಾರ್ಯಕ್ರಮ ನಡೆಯಿತು, ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಜತೆಗೆ 15,000ಕ್ಕೂ ಅಧಿಕ ಮಂದಿ ಯೋಗ ಪ್ರದರ್ಶನ ನೀಡಿದರು.
  • ಎಂಟನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸ್ಮರಣಾರ್ಥ ಕರ್ನಾಟಕ ಪೋಸ್ಟಲ್ ವಿಶೇಷ ಕವರ್ ಅನ್ನು ಮಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು.ದೇಶದ 23 ಅಂಚೆ ವಲಯಗಳಲ್ಲಿ ಪ್ರತಿಯೊಂದೂ ಅಂತಾರಾಷ್ಟ್ರೀಯ ಯೋಗ ದಿನದ ನೆನಪಿಗಾಗಿ ವಿಶೇಷ ಅಂಚೆ ಕವರ್ ಅನ್ನು ಬಿಡುಗಡೆ ಮಾಡುತ್ತಿದೆ.

ಉದ್ದೇಶ

  • ಯೋಗದ ಮಹತ್ವವನ್ನು ಜಗತ್ತಿಗೆ ಸಾರಲು, ಜೂನ್ 21 ರಂದು ಪ್ರತಿವರ್ಷ ‘ವಿಶ್ವ ಯೋಗ ದಿನಾಚರಣೆ‘ ಮಾಡಲಾಗುತ್ತದೆ. ಬದಲಾಗುತ್ತಿರುವ ಜೀವನಶೈಲಿಯಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ನೆರವಾಗುತ್ತದೆ. ಹೀಗಾಗಿ, ಯೋಗವನ್ನು ಎಲ್ಲರೂ ಅಭ್ಯಸಿಸಿ, ಅದರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವುದು ಯೋಗ ದಿನಾಚರಣೆಯ ಆಶಯವಾಗಿದೆ.

ಹಿನ್ನೆಲೆ

  • ಯೋಗದ ಮೂಲ ಭಾರತ. ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಸುಯೋಗ ನಮ್ಮದು. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯನ್ನು ಸುಲಭದಲ್ಲಿ ಯೋಗದ ಮೂಲಕ ಎಲ್ಲರೂ ಪಡೆಯಬಹುದಾಗಿದೆ.
  • 2014ರ ಡಿಸೆಂಬರ್ 11ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ವಿಶ್ವ ಯೋಗ ದಿನಾಚರಣೆ‘ ಮಾಡುವ ಕುರಿತ ಕರಡು ಪ್ರಸ್ತಾವನೆಗೆ ಅನುಮೋದನೆ ದೊರೆಯಿತು. ಅದಕ್ಕೂ ಮೊದಲು, ಪ್ರಧಾನಿ ನರೇಂದ್ರ ಮೋದಿ, ಯೋಗಕ್ಕೆ ಒಂದು ದಿನ ಸೀಮಿತವಾಗಿರಿಸಬೇಕು ಮತ್ತು ಜಾಗತಿಕವಾಗಿ ಆಚರಿಸಲು ಅನುವು ಮಾಡಿಕೊಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ, ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಅನುಮೋದನೆ ನೀಡಿತು. ಇದು ಭಾರತೀಯರಿಗೆ ಹೆಮ್ಮೆಯ ಕ್ಷಣವೆಂದು ಬಣ್ಣಿಸಲಾಗಿದೆ.
  • ಆಚರಣೆ 2015ರ ಜೂನ್ 21ರಂದು ಜಾಗತಿಕವಾಗಿ ಮೊದಲ, ವಿಶ್ವ ಯೋಗ ದಿನ ಆಚರಿಸಲಾಯಿತು. ಕೇಂದ್ರ ಸರ್ಕಾರ, ಆಯುಷ್ ಸಚಿವಾಲಯದ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ರಾಜಪಥದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು.

ಯೋಗ ಏಕೆ ಬೇಕು?

  • ಯೋಗವನ್ನು ನಿಯಮಿತವಾಗಿ ಮಾಡುವುದರಿಂದ, ರಕ್ತಪರಿಚಲನೆ, ಜೀರ್ಣಕ್ರಿಯೆ ಸರಾಗವಾಗಿ ಉಂಟಾಗಿ, ದೈಹಿಕ ಸ್ಥಿತಿಗತಿ ಉತ್ತಮವಾಗಿರುತ್ತದೆ. ಅಲ್ಲದೆ, ಒತ್ತಡದ ಜೀವನಶೈಲಿಯಿಂದ ಪಾರಾಗಿ, ಮಾನಸಿಕ ನೆಮ್ಮದಿ ಪಡೆಯಲು, ಉತ್ತಮ ನಿದ್ರೆಗಾಗಿ ಯೋಗವು ಸಹಕರಿಸುತ್ತದೆ.
  • ದೈಹಿಕ ಕ್ಷಮತೆ ಕಾಯ್ದುಕೊಳ್ಳುವುದು ಮತ್ತು ಮಾನಸಿಕ ಆರೋಗ್ಯ ಸುಧಾರಿಸುವಲ್ಲಿ ಯೋಗ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಮನುಷ್ಯನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡರೆ, ಅದರಿಂದ ವಿವಿಧ ರೀತಿಯ ಪ್ರಯೋಜನಗಳಿವೆ ಎಂದು ಈಗಾಗಲೇ ದೃಢಪಟ್ಟಿದೆ.