Published on: October 18, 2021
ಮುಂಗಾರು ಹಿಂತೆಗೆತ
ಮುಂಗಾರು ಹಿಂತೆಗೆತ
ಸುದ್ಧಿಯಲ್ಲಿ ಏಕಿದೆ? ಅಕ್ಟೋಬರ್ 6ರಿಂದಲೇ ಮುಂಗಾರು ಹಿಂತೆಗೆತ ಆರಂಭವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದರೂ, ಕೇರಳದಲ್ಲಿ ಮಾತ್ರ ಭಾರಿ ಮಳೆಯಾಗುತ್ತಿದೆ. ಇದನ್ನೂ ಮುಂಗಾರು ಅಂತ್ಯದ ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ.
- ಕೇರಳಕ್ಕೆ ಈ ಬಾರಿ ಮೂರು ದಿನ ತಡವಾಗಿ ಅಂದರೆ, ಜೂನ್ ಮೂರರಂದು ಮುಂಗಾರು ಪ್ರವೇಶವಾಗಿತ್ತು. ಅದರಂತೆ, ಮುಂಗಾರಿನ ಅಂತ್ಯವೂ ವಿಳಂಬವಾಗುತ್ತಿದೆ ಎಂದು ತಿಳಿದು ಬಂದಿದೆ. ಕೇರಳದ ಪೂರ್ವ- ಮಧ್ಯ ಅರಬ್ಬಿ ಸಮುದ್ರದಲ್ಲಿ ದಿಢೀರನೆ ವಾಯುಭಾರ ಕುಸಿತವಾದ ಕಾರಣ ಕೇರಳ-ಕರ್ನಾಟಕದ ಕರಾವಳಿ ಭಾಗದಲ್ಲೂ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
- ಕೇರಳ, ಕರ್ನಾಟಕದ ಜತೆಗೆ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ ಭಾರತದ ಕೆಲವೆಡೆ ಮಳೆಯಾಗಿದೆ.
ಮುಂಗಾರು ಅಂತ್ಯ ಘೋಷಣೆ ಹೇಗೆ?
- ಸಾಮಾನ್ಯವಾಗಿ ದೇಶದಲ್ಲಿ ಸೆಪ್ಟೆಂಬರ್ 17 ರಂದೇ ಮುಂಗಾರು ಅಂತ್ಯದ ಆರಂಭವಾಗಬೇಕಿತ್ತು. ಈ ಬಾರಿ ವಿಳಂಬವಾಗಿದ್ದು, ಇದುವರೆಗೆ ಹವಾಮಾನ ಇಲಾಖೆಯು ಮುಂಗಾರು ಋುತು ಮುಗಿದಿದೆ ಎಂದು ಘೋಷಿಸಿಲ್ಲ. ಮುಂಗಾರು ಅಂತ್ಯದ ಘೋಷಣೆಗೆ ಒಂದು ಮಾನದಂಡವೂ ಇದೆ. ದೇಶದಲ್ಲಿ ಸತತ ಐದು ದಿನ ಮಳೆಯಾಗದಿದ್ದರೆ ಅಥವಾ ಒಣ ಹವೆ ಇದ್ದರೆ ಆಗ ಮುಂಗಾರು ಅಂತ್ಯವಾಗಿದೆ ಎಂದು ಘೋಷಿಸಲಾಗುತ್ತದೆ.