Published on: December 13, 2021

ರಕ್ತಹೀನತೆ

ರಕ್ತಹೀನತೆ

ಸುದ್ಧಿಯಲ್ಲಿ ಏಕಿದೆ? ಕರ್ನಾಟಕದಲ್ಲಿ ರಕ್ತ ಹೀನತೆ ಹಾಗೂ ಅದರಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳು, ಮಹಿಳೆಯರ ಸಂಖ್ಯೆ ಕಳೆದ 5 ವರ್ಷಗಳಲ್ಲಿ ಗಣನೀಯ ಏರಿಕೆ ಕಂಡಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮಿಕ್ಷೆಯಿಂದ ಬಹಿರಂಗವಾಗಿದೆ.

ಮುಖ್ಯಾಂಶಗಳು

  • ರಕ್ತ ಹೀನತೆ ಸಮಸ್ಯೆ ಮಹಿಳೆಯರಲ್ಲಿ ಶೇ.48ರಷ್ಟು ಏರಿಕೆಯಾಗಿದ್ದರೆ, 6 ತಿಂಗಳಿನಿಂದ 59 ತಿಂಗಳವರೆಗಿನ ಮಕ್ಕಳಲ್ಲಿ ಈ ಪ್ರಮಾಣ ಶೇ.66 ಹೆಚ್ಚಾಗಿದೆ. 2015-16ಕ್ಕೆ ಹೋಲಿಕೆ ಮಾಡಿದರೆ ರಕ್ತ ಹೀನತೆ ಎದುರಿಸುತ್ತಿರುವ ಮಕ್ಕಳ ಸಂಖ್ಯೆ ಶೇ.5ಕ್ಕೆ ಹಾಗೂ ಮಹಿಳೆಯರ ಸಂಖ್ಯೆ ಶೇ.3ಕ್ಕೆ ಏರಿಕೆಯಾಗಿದೆ.
  • ರಕ್ತ ಹೀನತೆಗೆ ಕಬ್ಬಿಣಾಂಶ ಕಡಿಮೆ ಇರುವುದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. 15-19 ವರ್ಷ ವಯೋಮಾನದ ಯುವತಿಯರಲ್ಲಿ ರಕ್ತಹೀನತೆಯ ಪ್ರಮಾಣ, 2015-16ಕ್ಕೆ ಹೋಲಿಸಿದರೆ ಶೇ. 4ರಷ್ಟು ಹೆಚ್ಚಾಗಿದೆ. ಇದೇ ವೇಳೆ ಪುರುಷರಲ್ಲೂ ಕೂಡ ರಕ್ತ ಹೀನತೆಯ ಪ್ರಮಾಣ ತುಸು ಹೆಚ್ಚಾಗಿದೆ. 2015-16ಕ್ಕೆ ಹೋಲಿಸಿದರೆ, 15ರಿಂದ 49 ವರ್ಷ ವಯೋಮಾನವರಲ್ಲಿ ಶೇ.1 ಹಾಗೂ 15-19 ವಯೋಮಾನದವರಲ್ಲಿ ಶೇ.2.5 ಅಧಿಕವಾಗಿದೆ.

ರಕ್ತಹೀನತೆ ಹೇಗೆ ಉಂಟಾಗುತ್ತದೆ ?

  • ಅಪೌಷ್ಟಿಕತೆ ಮತ್ತು ಕಬ್ಬಿಣಾಂಶ ಕಡಿಮೆಯಾಗುವುದರಿಂದ ಶರೀರದಲ್ಲಿ ಅನಿಮಿಯಾ ಅಥವಾ ರಕ್ತಹೀನತೆ ಉಂಟಾಗುತ್ತದೆ.
  • ರಕ್ತಹೀನತೆ ಉಂಟಾದಾಗ ರಕ್ತದ ಮೂಲಕ ಶರೀರದಾದ್ಯಂತ ಆಮ್ಲಜನಕ ಪೂರೈಕೆ ಸಾಮರ್ಥ್ಯವು ಕಡಿಮೆಯಾಗುತ್ತದೆ.

ಹಿಮೊಗ್ಲೋಬಿನ್‌ ಪ್ರಮಾಣ

  • ಆರೋಗ್ಯಕರ ಮಹಿಳೆಯಲ್ಲಿ ಹಿಮೊಗ್ಲೋಬಿನ್‌ ಪ್ರಮಾಣ ಪ್ರತಿ ಡೆಸಿಲೀಟರ್‌ಗೆ 12 ಗ್ರಾಂ(ಜಿ/ಡಿಎಲ್‌) ಇರಬೇಕು. ಆರು ತಿಂಗಳಿಗೂ ಕಡಿಮೆ ಪ್ರಾಯದ ಶಿಶುಗಳಿಗೆ ಪ್ರತಿದಿನ 0.27 ಮಿಲಿಗ್ರಾಂ ಕಬ್ಬಿಣಾಂಶ ಅಗತ್ಯವಾಗಿರುತ್ತದೆ

ಗ್ರಾಮೀಣರಲ್ಲಿ ಸಮಸ್ಯೆ ಹೆಚ್ಚು

  • ನಗರ ಪ್ರದೇಶದಲ್ಲಿ ಶೇ.62.8 ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.67.1ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದು ಸೂಕ್ತ ವಿಧಾನದ ಚಿಕಿತ್ಸೆ ನೀಡಿದರಷ್ಟೇ ಈ ಸಮಸ್ಯೆಯಿಂದ ಸುಲಭವಾಗಿ ಪಾರಾಗಲು ಸಾಧ್ಯ.
  • ರಕ್ತಹೀನತೆ ಪ್ರಸವಪೂರ್ವ ಹಾಗೂ ಪ್ರಸವದ ನಂತರದಲ್ಲಿ ತಾಯಂದಿರ ಸಾವಿಗೂ ಕಾರಣವಾಗಬಹುದು. ನಿಶ್ಶಕ್ತಿ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಕುಸಿತ, ಅವಧಿಗೂ ಮುನ್ನ ಪ್ರಸವ, ಕಡಿಮೆ ತೂಕದ ಶಿಶುಗಳ ಜನನಕ್ಕೂ ಕಾರಣವಾಗಬಹುದಾಗಿದೆ.