Published on: July 5, 2022

ರಾಜ್ಯದ ಮೊದಲ ಸುರಂಗ ಅಕ್ವೇರಿಯಂ

ರಾಜ್ಯದ ಮೊದಲ ಸುರಂಗ ಅಕ್ವೇರಿಯಂ

ಸುದ್ದಿಯಲ್ಲಿ ಏಕಿದೆ?

ಬೆಂಗಳೂರಿನ ಆಕರ್ಷಣೆಗಳಲ್ಲಿ ಒಂದಾಗಿರುವ ಐತಿಹಾಸಿಕ ಕಬ್ಬನ್ ಪಾರ್ಕ್‌ ಉದ್ಯಾನದಲ್ಲಿ ಶೀಘ್ರದಲ್ಲೇ ಸುರಂಗ ಅಕ್ವೇರಿಯಂ ತಲೆ ಎತ್ತಲಿದೆ.

ಮುಖ್ಯಾಂಶಗಳು

  • ಕಬ್ಬನ್ ಪಾರ್ಕ್‌ ಮತ್ಸ್ಯಾಲಯಕ್ಕೆ ಹೊಸ ನೋಟ ಸಿಗಲಿದ್ದು, 1983 ರಲ್ಲಿ ನಿರ್ಮಾಣವಾಗಿದ್ದ ಮತ್ಸ್ಯಾಲಯವನ್ನು ಪಿಪಿಪಿ (ಖಾಸಗಿ ಸಾರ್ವಜನಿಕ ಸಹಭಾಗಿತ್ವ) ಮಾದರಿಯಲ್ಲಿ ಅಭಿವೃದ್ದಿ ಪಡಿಸಲು ಬಂದರು ಹಾಗೂ ಮೀನುಗಾರಿಕಾ ಇಲಾಖೆ ನಿರ್ಧಾರ ಮಾಡಿದೆ.
  • 38 ವರ್ಷ ಹಳೆಯದಾದಮತ್ಸ್ಯಾಲಯವನ್ನು ಆಧುನಿಕವಾಗಿ ನವೀಕರಿಸುವ ಮೂಲಕ ಹೊಸ ಲುಕ್‌ ನೀಡಲಾಗುತ್ತದೆ.

ಸುರಂಗ ಅಕ್ವೇರಿಯಂ ಕುರಿತು

  • ಬ್ಲೂ ಆಕ್ವಾ ಸ್ಟುಡಿಯೋ ಬೆಂಗಳೂರು ಸಂಸ್ಥೆ ಹದಿನೈದು ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ಸ್ಯಾಲಯವನ್ನು ಅಭಿವೃದ್ದಿ ಮಾಡಲು ಪ್ರಸ್ತಾವನೆ ಸಲ್ಲಿಸಿದೆ. ಇದರಂತೆ ಮತ್ಸ್ಯಾಲಯದ ಹೊಸ ವಿನ್ಯಾಸವನ್ನು ಬದಲಾಯಿಸದೆ 2 ಅಂತಸ್ತಿನಲ್ಲಿ ವಿವಿಧ ಟ್ಯಾಂಕ್‌ಗಳನ್ನು ಇರಿಸಿ ಅಲಂಕರಿಸಲಾಗುತ್ತದೆ. ಇಲ್ಲಿ ಮೆರೈನ್‌ ಅಕ್ವೇರಿಯಂ, ಜೆಲ್ಲಿ ಅಕ್ವೇರಿಯಂ ಹಾಗೂ ಸಿಹಿ ನೀರಿನ ಅಲಂಕಾರಿಕ 150 ಕ್ಕೂ ಹೆಚ್ಚು ಮೀನು ತಳಿಗಳನ್ನು ಪ್ರದರ್ಶಿಸಲಾಗುತ್ತದೆ.
  • ಇನ್ನು ಈ ಸುರಂಗ ಅಕ್ವೇರಿಯಂನಲ್ಲಿ 30 ಕ್ಕೂ ಹೆಚ್ಚು ಬಗೆಯ ಅಲಂಕಾರಿಕ ಆಕ್ವಾ ಪ್ರಾಣಿಗಳು ಇರುತ್ತವೆ ಮತ್ತು ಇದು 60,000 ಲೀಟರ್ ಸಮುದ್ರದ ನೀರನ್ನು ಹೊಂದಿರುತ್ತದೆ.
  • ಇದು 24 ಅಡಿ ಉದ್ದ, 10 ಅಡಿ ಅಗಲ ಮತ್ತು 15 ಅಡಿ ಎತ್ತರ ಇರಲಿದೆ.
  • ಸಿಂಗಾಪುರ, ದುಬೈ ಮತ್ತು ಚೀನಾದಲ್ಲಿ ಇದೇ ರೀತಿಯ ಸುರಂಗ ಅಕ್ವೇರಿಯಂಗಳನ್ನು ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಗುಜರಾತಿನಲ್ಲಿ ಒಂದಿದೆ.
  • ಒಂದು ಲಕ್ಷ ಲೀಟರ್ ನೀರು ಇರುವ ಕೊಯಿ ಕೊಳವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇವು 1.5 ಅಡಿಗಳಷ್ಟು ದೊಡ್ಡ ಮೀನುಗಳನ್ನು ಹೊಂದಿರುವ ದೊಡ್ಡ ಕೊಳಗಳಾಗಿವೆ. ಮೀನುಗಳು ವಿವಿಧ ಬಣ್ಣಗಳಿಂದ ಕೂಡಿರುತ್ತವೆ ಮತ್ತು ಸಂದರ್ಶಕರು ಅವುಗಳಿಗೆ ಆಹಾರವನ್ನು ಕೂಡ ನೀಡಬಹುದು.
  • ಅಂತಹ ಕನಿಷ್ಠ 150 ಮೀನುಗಳನ್ನು ಹೊಂದಲು ಯೋಜಿಸುತ್ತಿದ್ದೇವೆ. ವಿವಿಧ ಬಗೆಯ ಅಕ್ವೇರಿಯಂಗಳನ್ನು ಹೊಂದಿರುವ ಮ್ಯೂಸಿಯಂ ಮತ್ತು ಹೈಟೆಕ್ ಸೌಲಭ್ಯಗಳನ್ನು ಹೊಂದಿರುವ ಮೀನುಗಳು ಹೆಚ್ಚುವರಿ ಆಕರ್ಷಣೆಯಾಗಿರಲಿದೆ.
  • ಮೀನುಗಾರಿಕೆಯನ್ನು ಕೈಗೊಳ್ಳಲು ಬಯಸುವ ಉದ್ಯಮಿಗಳಿಗೆ ತರಬೇತಿ ನೀಡುವ ಸೌಲಭ್ಯವೂ ಇರುತ್ತದೆ.

ಉದ್ದೇಶ

ಕಬ್ಬನ್‌ಪಾರ್ಕ್‌ನಲ್ಲಿರುವ ಈ ಮತ್ಸ್ಯಾಲಯಕ್ಕೆ ಪ್ರತಿ ನಿತ್ಯ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಿದ್ದಾರೆ. ವಾರ್ಷಿಕವಾಗಿ 1.20 ಲಕ್ಷ ಪ್ರವಾಸಿಗರು ಮತ್ಸ್ಯಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರತಿವರ್ಷ 12 ಲಕ್ಷ ಆದಾಯವೂ ಪ್ರವಾಸಿಗರಿಂದ ಸಂಗ್ರಹವಾಗುತ್ತದೆ. ಇದೀಗ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮತ್ಸ್ಯಾಲಯಕ್ಕೆ ಹೊಸ ಟಚ್‌ ನೀಡಲು ಇಲಾಖೆ ನಿರ್ಧಾರ ಮಾಡಿದೆ.