Published on: November 26, 2021
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ
ಸುದ್ಧಿಯಲ್ಲಿ ಏಕಿದೆ ? ರಾಜ್ಯದಲ್ಲಿ ಶೌಚಾಲಯ ಬಳಕೆಯಲ್ಲಿ ತಾರತಮ್ಯಗಳು ಕಂಡು ಬಂದಿದೆ ಎಂದು 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ತನ್ನ ವರದಿಯಲ್ಲಿ ತಿಳಿಸಿದೆ.
ವರದಿಯಲ್ಲಿ ಏನಿದೆ ?
- ಉತ್ತರ ಕರ್ನಾಟಕದ 12 ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕರ್ನಾಟಕದ 15 ಜಿಲ್ಲೆಗಳು ಮತ್ತು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಹೆಚ್ಚಾಗಿರುವುದು ಕಂಡು ಬಂದಿದೆ.
- ದಕ್ಷಿಣ ಮತ್ತು ಎಲ್ಲಾ ಕರಾವಳಿ ಜಿಲ್ಲೆಗಳಲ್ಲಿ ಶೌಚಾಲಯ ವ್ಯವಸ್ಥೆಗಳು ಶೇ.90 ರಷ್ಟಿದ್ದರೆ, ಉತ್ತರ ಕರ್ನಾಟಕದ ಒಂದು ಜಿಲ್ಲೆ ಕೂಡ ಶೇ.90 ರಷ್ಟನ್ನು ತಲುಪಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.
- ಸೂಕ್ತ ರೀತಿಯ ನೈರ್ಮಲ್ಯ ಸೌಲಭ್ಯಗಳಿಲ್ಲದ ಕುಟುಂಬಗಳು ಅತಿಸಾರ, ಭೇದಿ ಮತ್ತು ಟೈಫಾಯಿಡ್ನಂತಹ ರೋಗಗಳ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಸಮೀಕ್ಷೆಯು ವರದಿಯಲ್ಲಿ ತಿಳಿಸಿದೆ.
- ಕರ್ನಾಟಕದಲ್ಲಿ ಶೇ.83.1 ಕುಟುಂಬಗಳು ಶೌಚಾಲಯ ಸೌಲಭ್ಯವನ್ನು ಹೊಂದಿದ್ದು, ಗ್ರಾಮೀಣ ಪ್ರದೇಶಗಳಿಗಿಂತ (75.9%) ನಗರ ಪ್ರದೇಶಗಳಲ್ಲಿ (93.3%) ಶೌಚಾಲಯ ಸೌಲಭ್ಯಗಳು ಹೆಚ್ಚಾಗಿದೆ.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಇತರೆ ಹಿಂದುಳಿದ ವರ್ಗಕ್ಕೆ ಸೇರದ ಕುಟುಂಬಗಳಲ್ಲಿ ಶೇ.76 ರಿಂದ ಶೇ.88 ರಷ್ಟು ಪರಿಶಿಷ್ಟ ಜಾತಿಯವರಿಗೆ ಶೌಚಾಲಯಗಳ ಪ್ರವೇಶವಿದೆ ಎಂದು ಸಮೀಕ್ಷೆ ಹೇಳಿದೆ.
- “ಬಾಗಲಕೋಟೆ, ಕಲಬುರಗಿ, ಬಿಜಾಪುರ, ರಾಯಚೂರು, ಯಾದಗಿರಿ ಮುಂತಾದ ಜಿಲ್ಲೆಗಳಲ್ಲಿ ಈ ವ್ಯವಸ್ಥೆಗಳು ಶೋಚನೀಯ ಸ್ಥಿತಿಯಲ್ಲಿದ್ದು, ನೀರು ಪೂರೈಕೆಯಲ್ಲಿ ಕೊರತೆ, ಶೌಚಾಲಯ ಬಳಕೆಯಲ್ಲಿನ ಸಾಂಸ್ಕೃತಿಕ ಅಡೆತಡೆಗಳು ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ಫಲವಂತಿಕೆ ದರ
- ದೇಶದ ಮಹಿಳೆಯರ ಫಲವಂತಿಕೆಯ ದರ 2.2ರಿಂದ 2ಕ್ಕೆ ಇಳಿಕೆಯಾಗಿದೆ’ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ ಎರಡನೇ ಹಂತದ ವರದಿಯಲ್ಲಿ ಹೇಳಲಾಗಿದೆ.
- ದೇಶದಲ್ಲಿನ ಒಟ್ಟು ಜನನ ಪ್ರಮಾಣವನ್ನು, ಫಲವಂತಿಕೆ ವಯಸ್ಸಿನ ಒಟ್ಟು ಮಹಿಳೆಯರ ಸಂಖ್ಯೆಯೊಂದಿಗೆ ತಾಳೆ ಮಾಡಿ ಫಲವಂತಿಕೆ ದರವನ್ನು ಲೆಕ್ಕಹಾಕಲಾಗುತ್ತದೆ.
- 2015–16ರಲ್ಲಿ ಫಲವಂತಿಕೆ ದರವು 2.2ರಷ್ಟು ಇತ್ತು. 2019–21ರಲ್ಲಿ ಈ ದರವು 2ಕ್ಕೆ ಇಳಿದಿದೆ. ದೇಶದ ನಗರ ಪ್ರದೇಶದಲ್ಲಿ ಫಲವಂತಿಕೆ ದರವು 1.6ರಷ್ಟು ಇದೆ. ಗ್ರಾಮೀಣ ಪ್ರದೇಶಗಳಲ್ಲಿ 2.1ರಷ್ಟು ಇದೆ.
- 2015–16ಕ್ಕೆ ಹೋಲಿಸಿದರೆ, ಗರ್ಭನಿರೋಧಕ ಕ್ರಮಗಳನ್ನು ಅನುಸರಿಸುವವರ ಪ್ರಮಾಣವು 2019–21ರಲ್ಲಿ ಏರಿಕೆಯಾಗಿದೆ. 2015–16ರಲ್ಲಿ ದೇಶದ ಶೇ 54ರಷ್ಟು ಮಂದಿ ಇಂತಹ ಕ್ರಮಗಳನ್ನು ಅನುಸರಿಸುತ್ತಿದ್ದರು. 2019–21ರಲ್ಲಿ ದೇಶದ ಶೇ 67ರಷ್ಟು ಜನರು ಇಂತಹ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಹೀಗಾಗಿಯೇ ಫಲವಂತಿಕೆಯ ದರದಲ್ಲಿ ಇಳಿಕೆ ಸಾಧ್ಯವಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.
- ಎರಡನೇ ಹಂತದಲ್ಲಿ ಸಮೀಕ್ಷೆಗೆ ಒಳಪಟ್ಟ ರಾಜ್ಯಗಳಲ್ಲಿ ಜನಸಂಖ್ಯೆಯ ಮಟ್ಟ ಕಾಯ್ದುಕೊಳ್ಳಲು ಅಗತ್ಯವಾದ ಫಲವಂತಿಕೆ ದರವು 2.1ರಷ್ಟು ಇದೆ ಎಂದು ವರದಿಯು ಹೇಳಿದೆ.
ಪುರುಷರಿಗಿಂತ ಹೆಚ್ಚು ಮಹಿಳೆಯರು
- ದೇಶದ ಲಿಂಗಾನುಪಾತದಲ್ಲಿ ಮಹಿಳೆಯರ ಸಂಖ್ಯೆ ಇದೇ ಮೊದಲ ಬಾರಿ ಪುರುಷರಿಗಿಂತಲೂ ಹೆಚ್ಚು ಇದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ ವರದಿಯನ್ನು ಉಲ್ಲೇಖಿಸಿ ಆರೋಗ್ಯ ಸಚಿವಾಲಯವು ಹೇಳಿದೆ.
- ದೇಶದಲ್ಲಿ ಈಗ 1,020 ಮಹಿಳೆಯರಿಗೆ 1,000 ಪುರುಷರು ಇರಬಹುದು ಎಂದು ಸಮೀಕ್ಷೆಯು ಅಂದಾಜಿಸಿದೆ. ಇದು ಮಾದರಿ ಆಧಾರದಲ್ಲಿ ಹಾಕಿದ ಲೆಕ್ಕಾಚಾರ. ಇದು ಜನಸಂಖ್ಯೆ ಪ್ರವೃತ್ತಿಯ ಸೂಚಕ ಮಾತ್ರ. ವಾಸ್ತವದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದು ಜನಗಣತಿಯ ವರದಿ ಬಂದ ಬಳಿಕವಷ್ಟೇ ತಿಳಿಯುತ್ತದೆ.
- 2011ರ ಜನಗಣತಿ ಪ್ರಕಾರ, ದೇಶದಲ್ಲಿ ಸಾವಿರ ಪುರುಷರಿಗೆ 940 ಮಹಿಳೆಯರು ಮಾತ್ರ ಇದ್ದರು.
- ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಎರಡು ವರ್ಷಗಳ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯ ಪ್ರಕಾರ, 1,000 ಪುರುಷರಿಗೆ 1,020 ಮಹಿಳೆಯರು ದೇಶದಲ್ಲಿದ್ದಾರೆ.
- 1876ರಿಂದ ಹಿಡಿದು ಇಂದಿನವರೆಗ ನಡೆದಿರುವ ಸಮೀಕ್ಷೆಗಳಲ್ಲಿ ಇದೇ ಮೊದಲ ಬಾರಿಗೆ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿದೆ ಎಂದು ಸರ್ಕಾರದ ಅಂಕಿ ಅಂಶ ಹೇಳುತ್ತಿದೆ.
- ಮಹಿಳೆಯರ ದೀರ್ಘಾವಧಿಯ ಜೀವಿತಾವಧಿಯಿಂದ ಈ ಫಲಿತಾಂಶ ಕಂಡುಬಂದಿದೆ. ಆದರೆ, ದೇಶದಲ್ಲಿ ಈಗಲೂ ಹೆಣ್ಣುಮಕ್ಕಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗಂಡು ಮಕ್ಕಳೇ ಜನಿಸುತ್ತಿದ್ದಾರೆ. ಪ್ರತಿ 929 ಹೆಣ್ಣುಮಕ್ಕಳಿಗೆ 1,000 ಗಂಡು ಮಕ್ಕಳು ಜನಿಸುತ್ತಿದ್ದಾರೆ. ಇದು ದೇಶದಲ್ಲಿ ಗಂಡು ಮಗುವಿನ ಆದ್ಯತೆ ನೀಡುತ್ತಿರುವುದನ್ನು ತೋರಿಸುತ್ತದೆ.
- ಭಾರತದಲ್ಲಿ ಸದ್ಯ 130 ಕೋಟಿ ಜನಸಂಖ್ಯೆ ಇದ್ದು, ಈ ದಶಕದ ಅಂತ್ಯದ ವೇಳೆಗೆ ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.