Published on: December 23, 2021
ರಾಷ್ಟ್ರೀಯ ಗಣಿತ ದಿನ
ರಾಷ್ಟ್ರೀಯ ಗಣಿತ ದಿನ
ಸುದ್ಧಿಯಲ್ಲಿ ಏಕಿದೆ ? ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ ಡಿಸೆಂಬರ್ 22, ಈ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ‘ರಾಷ್ಟ್ರೀಯ ಗಣಿತ ದಿನ’ ಎಂದು ಆಚರಣೆ ಮಾಡಲಾಗುತ್ತದೆ.
ಹಿನ್ನಲೆ
- ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನ’ವಾಗಿ ಆಚರಿಸಲು 2012ರಲ್ಲಿ ಅಂದಿನ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರು ಕರೆಕೊಟ್ಟರು. ರಾಮಾನುಜನ್ ಅವರ 125ನೇ ಜನ್ಮ ಜಯಂತಿ ಆಚರಣೆ ಸಂದರ್ಭದಲ್ಲಿ ಅಂದು ಮದ್ರಾಸ್ ಯೂನಿವರ್ಸಿಟಿಗೆ ಭೇಟಿ ನೀಡಿದ್ದ ಮನಮೋಹನ್ ಸಿಂಗ್ ಅವರು ರಾಷ್ಟ್ರೀಯ ಗಣಿತ ದಿನ ಎಂದು ಘೋಷಣೆ ಮಾಡಿದ್ದರು.
ಶ್ರೀನಿವಾಸ ರಾಮಾನುಜನ್ ಯಾರು?:
- ತಮಿಳುನಾಡಿನ ಈರೋಡ್‌ನಲ್ಲಿ ಡಿಸೆಂಬರ್ 22, 1887 ರಲ್ಲಿ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಶ್ರೀನಿವಾಸ ರಾಮಾನುಜನ್ ರವರು ಗಣಿತ ವಿಷಯದೊಂದಿಗೆ ಇದ್ದ ಒಲವು, ಅಪಾರ ಜ್ಞಾನದಿಂದಾಗಿ ಅವರು ಗಣಿತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮತ್ತು ಸಾಧನೆಗಳನ್ನು ಗುರುತಿಸಿ ರಾಷ್ಟ್ರೀಯ ಗಣಿತ ದಿನ ಆಚರಿಸಲಾಗುತ್ತದೆ.
- ‘ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ ’ (ಅಂತ್ಯವಿಲ್ಲದಷ್ಟು ತಿಳಿದವರು) ಎಂದೇ ರಾಮಾನುಜನ್ ಅವರು ಪ್ರಖ್ಯಾತರು. ಗಣಿತ ವಿಷಯದ ಬಗ್ಗೆ ರಾಮಾನುಜನ್ ಅವರಿಗೆ ಅಷ್ಟು ಒಲವು, ಪ್ರೀತಿ, ಆಳವಾದ ಜ್ಞಾನವಿತ್ತು.
- 26ನೇ ವಯಸ್ಸಿನಲ್ಲಿ ರಾಮಾನುಜನ್ ಅವರನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಅನಂತ ಸರಣಿಗಳು, ಮುಂದುವರಿದ ಭಿನ್ನರಾಶಿಗಳು, ಅಸಮರ್ಪಕ ಅನುಕಲನಗಳು ಮತ್ತು ಸಂಖ್ಯಾ ಸಿದ್ಧಾಂತದ ಕುರಿತು 120 ಗಣಿತದ ಪ್ರಮೇಯಗಳ ಹೇಳಿಕೆಗಳಿಗಾಗಿ ಅವರನ್ನು ಆಹ್ವಾನಿಸಲಾಗಿತ್ತು.
- ಟ್ರಿನಿಟಿ ಕಾಲೇಜಿನಲ್ಲಿ ಫೆಲೋ ಆಗಿ ಆಯ್ಕೆಯಾದ ಮೊದಲ ಭಾರತೀಯ ಶ್ರೀನಿವಾಸ ರಾಮಾನುಜನ್. ಎಲಿಪ್ಟಿಕ್ ಫಂಕ್ಷನ್‌ಗಳು ಮತ್ತು ಸಂಖ್ಯೆಗಳ ಸಿದ್ಧಾಂತದ ಕುರಿತು ತಮ್ಮ ಕೆಲಸಕ್ಕಾಗಿ ಲಂಡನ್‌ನ ರಾಯಲ್ ಸೊಸೈಟಿಯ ಕಿರಿಯ ಫೆಲೋ ಆಗಿದ್ದರು. 3,000 ಕ್ಕೂ ಹೆಚ್ಚು ಗಣಿತದ ಫಲಿತಾಂಶಗಳು ಮತ್ತು ಸಮೀಕರಣಗಳನ್ನು ಸಂಗ್ರಹಿಸಿದ ನಂತರ, ಗಣಿತಜ್ಞ 1919 ರಲ್ಲಿ ಭಾರತಕ್ಕೆ ಮರಳಿದರು. 1920ರಲ್ಲಿ ಕ್ಷಯರೋಗದಿಂದಾಗಿ ನಿಧನರಾದರು.
ರಾಷ್ಟ್ರೀಯ ಗಣಿತ ದಿನ ಆಚರಣೆಯ ಮಹತ್ವವೇನು?
- ಮಾನವೀಯತೆಯ ಬೆಳವಣಿಗೆ, ಗಣಿತದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸಹ ‘ರಾಷ್ಟ್ರೀಯ ಗಣಿತ ದಿನ’ ಆಚರಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. ರಾಷ್ಟ್ರದ ಯುವ ಪೀಳಿಗೆಗೆ ಗಣಿತ ಕ್ಷೇತ್ರಕ್ಕೆ ಕೊಡುಗೆ ನೀಡಿದ ನಮ್ಮದೇ ದೇಶದ ಗಣಿತಜ್ಞ ಶ್ರೀನಿವಾಸ ರಾಮಾನುಜನರ್ ರವರ ಕೊಡುಗೆಗಳನ್ನು ತಿಳಿಸುವುದು, ಯುವ ಪೀಳಿಗೆಯಲ್ಲಿ ಗಣಿತವನ್ನು ಕಲಿಯಲು ಪ್ರೇರೇಪಿಸಲು, ಯುವಕರಲ್ಲಿ ಗಣಿತ ಕಲಿಕೆಯಿಂದ ಆಗುವ ಉಪಯೋಗಗಳನ್ನು ತಿಳಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವು ಸಹ.