Published on: March 1, 2023
ರಾಷ್ಟ್ರೀಯ ವಿಜ್ಞಾನ ದಿನ 2023
ರಾಷ್ಟ್ರೀಯ ವಿಜ್ಞಾನ ದಿನ 2023
ಸುದ್ದಿಯಲ್ಲಿ ಏಕಿದೆ? ಪ್ರತಿ ವರ್ಷ ಫೆಬ್ರವರಿ 28 ರಂದು ಸರ್ ಸಿ.ವಿ.ರಾಮನ್ ರ ‘ರಾಮನ್ ಪರಿಣಾಮ’ ಅವಿಷ್ಕಾರದ ಸ್ಮರಣಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ.
- ಥೀಮ್: ಈ ಬಾರಿ ಜಾಗತಿಕ ಸೌಖ್ಯಕ್ಕಾಗಿ ಜಾಗತಿಕ ವಿಜ್ಞಾನ ಎಂಬ ಘೋಷವಾಕ್ಯವಿದೆ.
ಹಿನ್ನೆಲೆ
- ರಾಷ್ಟ್ರೀಯ ವಿಜ್ಞಾನ ದಿನವನ್ನು ಫೆಬ್ರವರಿ 28 ರಂದು ಆಚರಣೆ ಮಾಡಬೇಕು ಎಂದು, 1986 ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಂಮ್ಯುನಿಕೇಷನ್ (NCSTC) ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಎನ್‌ಸಿಎಸ್‌ಟಿಸಿ’ಯ ಈ ಮನವಿಯನ್ನು ಒಪ್ಪಿದ ಅಂದಿನ ಸರ್ಕಾರ ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ದೇಶದಾದ್ಯಂತ ಆಚರಿಸುವಂತೆ ಘೋಷಿಸಿತು. ನಂತರ ಮೊದಲ ರಾಷ್ಟ್ರೀಯ ವಿಜ್ಞಾನ ದಿನವನ್ನು 1987 ಫೆಬ್ರವರಿ 28 ರಂದು ಆಚರಣೆ ಮಾಡಲಾಯಿತು.
ಆಚರಣೆ ಏಕೆ?
- ಪ್ರತಿ ವರ್ಷ ಫೆಬ್ರವರಿ 28 ರಂದು ಸರ್ ಸಿ ವಿ ರಾಮನ್ ರ’ರಾಮನ್ ಪರಿಣಾಮ’ ಅವಿಷ್ಕಾರದ ಸ್ಮರಣಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸರ್ ಸಿ.ವಿ.ರಾಮನ್ ಅವರ ಅಪೂರ್ವ ಸಾಧನೆಗಳ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ರಾಮನ್ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಕ್ರಿ.ಶ.1928ರ ಫೆಬ್ರವರಿ 28ರಂದು ಬೆಳಕಿನ ಚದುರಿವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷಣಗಳ ಪರಿಣಾಮದ ಬಗ್ಗೆ ಪ್ರತಿಪಾದಿಸಿದ ದಿನ. ಮುಂದಿನ ದಿನಗಳಲ್ಲಿ ಅದು ರಾಮನ್ ಪರಿಣಾಮವೆಂದೇ ಪ್ರಸಿದ್ಧವಾಯಿತು.
ಉದ್ದೇಶ
- ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸುವುದು.
- ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುವುದು.
- ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಬೆಳೆಸುವುದು.
- ಪ್ರಯೋಗಗಳ ಮೂಲಕ ಹೊಸ ಅವಿಷ್ಕಾರಗಳನ್ನು ಮಾಡಲು ವಿದ್ಯಾರ್ಥಿಗಳನ್ನು ಹುರಿದುಂಬಿಸುವುದು.
- ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಸಕ್ತ ಬೆಳವಣಿಗೆ ಮತ್ತು ಅಭಿವೃದ್ಧಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು.
- ವಿಜ್ಞಾನ, ತಂತ್ರಜ್ಞಾನ, ಗಣಿತ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪ್ರಯೋಗಗಳ ಮೂಲಕ ನಾವೀನ್ಯತೆಯನ್ನು ಮೂಡಿಸಲು ಪ್ರೇರೆಪಿಸುವುದು.
ಸಿ.ವಿ ರಾಮನ್
- ವಿಜ್ಞಾನ ವಿಭಾಗದಿಂದ ನೊಬೆಲ್ ಪಡೆದ ಏಷ್ಯಾದ ಮೊಟ್ಟ ಮೊದಲ ವಿಜ್ಞಾನಿ ಎಂಬ ಖ್ಯಾತಿ ಹೊಂದಿದ ಸಿ.ವಿ. ರಾಮನ್ ಅವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್. ಜನಿಸಿದ್ದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ 1888ರ ನವೆಂಬರ್ 7ರಂದು . ಅವರ ತಂದೆ ಚಂದ್ರಶೇಖರ್ ಅಯ್ಯರ್ ಗಣಿತ ಹಾಗೂ ಭೌತವಿಜ್ಞಾನದ ಶಿಕ್ಷಕರಾಗಿದ್ದರು. ರಾಮನ್ ಅವರು ಕಲ್ಕತಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ಮುಂದೆ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
- ರಾಮನ್ ಅವರು 1929 ರಲ್ಲಿ ನೈಟ್ ಪದವಿ ಪಡೆದರು ಮತ್ತು 1933 ರಲ್ಲಿ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಭೌತಶಾಸ್ತ್ರ ವಿಭಾಗದ ನಿರ್ದೇಶಕರಾದರು.
- 1947 ರಲ್ಲಿ, ಅವರು ರಾಮನ್ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ನೇಮಕಗೊಂಡರು ಮತ್ತು 1961 ರಲ್ಲಿ ಅವರು ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸ್‌ಗೆ ಆಯ್ಕೆಯಾದರು.
- ಅವರು ಪ್ರಾಯೋಗಿಕವಾಗಿ ಭಾರತೀಯ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲು ಸಹಾಯ ಮಾಡಿದರು, ಇಂಡಿಯನ್ ಜರ್ನಲ್ ಆಫ್ ಫಿಸಿಕ್ಸ್ ಮತ್ತು ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಅನ್ನು ಸ್ಥಾಪಿಸಿದರು ಮತ್ತು ಭಾರತ ಮತ್ತು ಮ್ಯಾನ್ಮಾರ್ (ಬರ್ಮಾ) ನಲ್ಲಿ ಕಾಲೇಜುಗಳು ಮತ್ತು ಸರ್ಕಾರದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
- 1954 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲಾಯಿತು.
ರಾಮನ್ ಪರಿಣಾಮ
- ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ರಾಮನ್ ಅವರಿಗೆ ಸಮುದ್ರ ಏಕೆ ಯಾವಾಗಲೂ ನೀಲಿಯಾಗಿಯೇ ಕಾಣುತ್ತದೆ ಎಂಬ ಪ್ರಶ್ನೆ ಎದುರಾಯಿತಂತೆ. ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ಗುಟ್ಟು ಅಡಗಿದೆಯೋ ಎಂದು ಪತ್ತೆಮಾಡಲು ಹೊರಟ ರಾಮನ್ ಸೂರ್ಯನ ಬೆಳಕು ನೀರಿನಲ್ಲಿ ಚದುರಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡುಹಿಡಿದರು. ಇದೇ ಅಂಶ ಮುಂದೆ ಅವರು ತಮ್ಮ ಅಧ್ಯಯನವನ್ನು ಮುಂದುವರೆಸಲು ಪ್ರೇರಣೆಯಾಯಿತು.
- ಕೋಲ್ಕತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್‌ನಲ್ಲಿ ರಾಮನ್ ಅವರು ತಮ್ಮ ಸಹೋದ್ಯೋಗಿಗಳೊಡನೆ ನಡೆಸಿದ ಅಧ್ಯಯನಗಳ ಪರಿಣಾಮವೇ ರಾಮನ್ ಪರಿಣಾಮದ ಶೋಧ. ಇದೇ ಸಾಧನೆಗಾಗಿ ಅವರಿಗೆ 1930ನೇ ಇಸವಿಯಲ್ಲಿ ನೊಬೆಲ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊತ್ತಮೊದಲ ನೊಬೆಲ್ ಪುರಸ್ಕಾರವೂ ಹೌದು.
- ಯಾವುದೇ ಪಾರದರ್ಶಕ ರಾಸಾಯನಿಕ ವಸ್ತುವಿನ ಮೂಲಕ ಬೆಳಕನ್ನು ಹಾಯಿಸಿದಾಗ ಅದರಿಂದ ಹೊರಬರುವ ಕಿರಣಗಳು ಒಳಬರುವ ಕಿರಣಗಳಿಗಿಂತ ಭಿನ್ನವಾದ ದಿಕ್ಕಿನತ್ತ ಹೊರಳಿರುವುದನ್ನು ನಾವು ನೋಡಬಹುದು (ಗಾಜಿನ ಪಟ್ಟಕದ ಮೂಲಕ ಬೆಳಕನ್ನು ಹಾಯಿಸುವ ಉದಾಹರಣೆ ನೆನಪಿಸಿಕೊಳ್ಳಿ). ಹೀಗೆ ಚದುರಿದ ಬಹುಪಾಲು ಕಿರಣಗಳ ಸ್ವರೂಪ ಮೂಲ ಕಿರಣದಂತೆಯೇ ಇರುತ್ತದಾದರೂ ಒಂದಷ್ಟು ಭಾಗದ ಕಿರಣಗಳ ತರಂಗಾಂತರ ಮೂಲಕ್ಕಿಂತ ಬದಲಾಗಿರುತ್ತದೆ. ಇದನ್ನೇ ರಾಮನ್ ಪರಿಣಾಮವೆಂದು ಕರೆಯುತ್ತಾರೆ.