Published on: April 18, 2022

ರಾಷ್ಟ್ರೀಯ ಸುರಕ್ಷತಾ ಗುಣಮಟ್ಟದ ಮಾನ್ಯತೆ!

ರಾಷ್ಟ್ರೀಯ ಸುರಕ್ಷತಾ ಗುಣಮಟ್ಟದ ಮಾನ್ಯತೆ!

ಸುದ್ಧಿಯಲ್ಲಿ ಏಕಿದೆ? ರಾಜ್ಯದ ಮುಜರಾಯಿ ಇಲಾಖೆಯ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಭಕ್ತರಿಕೆ ನೀಡುವ ಭೋಜನ ಪ್ರಸಾದವು ರಾಷ್ಟ್ರೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆದುಕೊಂಡಿದೆ.

ಹಿನ್ನಲೆ

  • ಈ ದೇವಾಲಯಕ್ಕೆ ನಿತ್ಯವೂ ಸಾವಿರಾರೂ ಸಂಖ್ಯೆಯಲ್ಲಿ ರಾಜ್ಯ-ಹೊರ ರಾಜ್ಯ ಮಾತ್ರವಲ್ಲದೇ ವಿದೇಶದಿಂದಲೂ ಭಕ್ತರೂ ಆಗಮಿಸುತ್ತಿದ್ದು, ಅವರಿಗೆ ದೇವಾಲಯದ ವತಿಯಿಂತ ಉಚಿತ ಭೋಜನ ಪ್ರಸಾದದ ವ್ಯವಸ್ಥೆ ಇದೆ.
  • ಈ ಭೋಜನ ಪ್ರಸಾದ ಹಾಗೂ ದೇವರಿಗೆ ಅರ್ಪಿಸುವ ನೈವೇದ್ಯಗಳು ಗರಿಷ್ಟ ಗುಣಮಟ್ಟದಿಂದ ಕೂಡಿದ್ದು, ಆರೋಗ್ಯಕ್ಕೆ ಅತ್ಯಂತ ಸುರಕ್ಷಿತವಾಗಿದೆ ಎಂದು ಪ್ರಾಧಿಕಾರವು ಪ್ರಮಾಣಪತ್ರವನ್ನು ನೀಡಿದೆ.

ಪ್ರಾಧಿಕಾರ ಪರಿಶೀಲಿಸಿದ ಅಂಶಗಳು

  • ಈ ಭೋಜನಾ ತಯಾರಿಸುವ ಅಡುಗೆ ಮನೆ, ಅಲ್ಲಿರುವ ಸೌಲಭಯಗಳು, ಆಹಾರ ತಯಾರಿಸುವ ವಿಧಾನ, ಈ ಸಂದರ್ಭದಲ್ಲಿ ಪಾಲಿಸುವ ಸ್ವಚ್ಛತೆ, ಆಹಾರ ತಯಾರಿಕಾ ಸಿಬ್ಬಂದಿಗೆ ನೀಡಿರುವ ತರಬೇತಿ ಇತ್ಯಾದಿ ಅಂಶಗಳನ್ನು ಆಧರಿಸಿ ಇತ್ತೀಚೆಗೆ ಪ್ರಾಧಿಕಾರವು ಪರಿಶೋಧನೆ ಮಾಡಿತ್ತು.
  • ಆಹಾರ ತಯಾರಿಕಾ ಕೊಠಡಿಯು ಅತ್ಯಂತ ಸುಸಜ್ಜಿತವಾಗಿದ್ದು, ಸೋರುವಿಕೆ ಇಲ್ಲದ, ಉತ್ತಮ ಗುಣಮಟ್ಟದ ಗೋಡೆ, ಕಾಲು ಜಾರದಂತಹ ನೆಲಹಾಸು, ತುಕ್ಕು ಹಿಡಿಯದ ಕಿಟಕಿ ಬಾಗಿಲುಗಳು, ಆಹಾರ ತಯಾರಿಸುವ ಪಾತ್ರೆಗಳಿಗೆ ಕಲಾಯಿ ಹಾಕಿರುವುದು ಉತ್ತಮ ಗಾಳಿ ಬೆಳೆಕು ಸೌಲಭ್ಯ, ಆಹಾರವನ್ನು ಬಿಸಿ-ತಂಪು ಮಾಡುವ ಯಂತ್ರೋಪಕರಣಗಳು ಆಹಾರ ತಯಾರಿಕಾ ಸಾಮಾಗ್ರಿಗಳ ದಾಸ್ತಾನು ಕೊಠಡಿ, ಪಾತ್ರೆ ತೊಳೆಯುವ ನೀರು, ತ್ಯಾಜ್ಯ ವಿಲೇವಾರಿ ಇತ್ಯಾದಿಗಳ ಗುಣಮಟ್ಟವನ್ನು ಪರೀಕ್ಷಿಸಿದೆ. ಆಹಾರ ಸುರಕ್ಷತಾ ಪ್ರಮಾಣಪತ್ರ ಹೊಂದಿರುವ ಸರಬರಾಜುದಾರರ ಮೂಲಕವೇ ಖರೀದಿ, ಅವಧಿ ಮೀರುವ ಮೊದಲೇ ಆಹಾರ ಪದಾರ್ಥಗಳ ಬಳಕೆ, ಅವುಗಳನ್ನು ಕೆಡದಂತೆ ಇಡುವ ಸೂಕ್ತ ವ್ಯವಸ್ಥೆ, ಭೋಜನ ಶಾಲೆಯಲ್ಲಿ ಸ್ವಚ್ಛತೆಗೆ ಆದ್ಯತೆ, ಶುದ್ಧೀಕರಣ ಇತ್ಯಾದಿಗಳನ್ನು ಕೂಡ ಪ್ರಾಧಿಕಾರ ಗಮನಿಸಿದೆ.
  • ನೈರ್ಮಲ್ಯ, ವಾತಾವರಣ, ಸಂಗ್ರಹಣೆ ಮತ್ತು ಆಹಾರ ತಯಾರಿಕೆಯಲ್ಲಿ ಬಳಸುವ ಶುದ್ಧ ನೀರು ಮುಂತಾದ ವಿವಿಧ ಅಂಶಗಳನ್ನು ಪರಿಗಣಿಸಿ, ಎಫ್‌ಎಸ್‌ಎಸ್‌ಎಐ ಪ್ರಮಾಣಪತ್ರವನ್ನು ನೀಡಿದೆ

ಭೋಗ್ ಪ್ರಮಾಣಪತ್ರಕ್ಕೆ ಆಯ್ಕೆಯಾದ ರಾಜ್ಯದ ಇತರ ದೇವಾಲಯಗಳು

  • ಕೊಲ್ಲೂರು ದೇವಸ್ಥಾನದ ಜೊತೆಗೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ದ.ಕ. ಜಿಲ್ಲೆಯ ಧರ್ಮಸ್ಥಳ ಮತ್ತು ಉತ್ತರ ಕನ್ನಡ ಜಿಲ್ಲೆಯ ಮಾರಿಕಾಂಬಾ ದೇವಸ್ಥಾನ, ಶಿರಸಿ ಮುಂತಾದ ಪ್ರಸಿದ್ಧ ದೇವಾಲಯಗಳನ್ನು ಕೂಡ ಭೋಗ್ ಅಡಿಯಲ್ಲಿ ಆಯ್ಕೆ ಮಾಡಲಾಗಿದೆ.

ಭೋಗ್(BHOG ) ಎಂದರೇನು?

  • ಭೋಗ್ ಎಂಬುದು ದೇವರಿಗೆ ಆನಂದದಾಯಕ ಶುಚಿತ್ವದಿಂದ ನೀಡುವ ನೈವೇದ್ಯವಾಗಿದೆ (Blissful Hygiene Offering to God). ಇವು FSSAI ನೀಡಿದ ಪ್ರಮಾಣಪತ್ರಗಳಾಗಿವೆ. BHOG ಪ್ರಮಾಣಪತ್ರಗಳು ಭಕ್ತರಿಗೆ ಮತ್ತು ದೇವತೆಗಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಖಚಿತಪಡಿಸುತ್ತದೆ. ದೇವಾಲಯಗಳಲ್ಲಿ ಆಹಾರದ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಇದನ್ನು ಪ್ರಾರಂಭಿಸಲಾಯಿತು.

ಯೋಜನೆಯ ಬಗ್ಗೆ

  • ಈ ಯೋಜನೆಯನ್ನು FSSAI ಆರಂಭಿಸಿದೆ. ಈ ಯೋಜನೆಯು ದೇವಾಲಯಗಳಲ್ಲಿನ ಆಹಾರದ ಗುಣಮಟ್ಟವನ್ನು ಕಾಪಾಡುವುದರ ಜೊತೆಗೆ ಆಹಾರ ನಿರ್ವಹಣೆ ಮಾಡುವವರಿಗೆ ಮೂಲಭೂತ ಆಹಾರ ಸುರಕ್ಷತೆಯ ಬಗ್ಗೆ ತರಬೇತಿಯನ್ನು ನೀಡುತ್ತದೆ. ಇದು ಗುರುದ್ವಾರಗಳು, ದೇವಾಲಯಗಳು, ಮಸೀದಿಗಳನ್ನು ಒಳಗೊಂಡಿದೆ. ಈ ಯೋಜನೆಯು ದೇವಾಲಯದ ಆವರಣದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಸಾದವನ್ನು ಮಾರಾಟ ಮಾಡುವ ಪ್ರಸಾದ ಮಳಿಗೆಗಳು ಮತ್ತು ಮಾರಾಟಗಾರರು BHOG ಪ್ರಮಾಣಪತ್ರವನ್ನು ಪಡೆಯುವುದನ್ನು ಕಡ್ಡಾಯಗೊಳಿಸಿದೆ.

 ಸರಿಯಾಗಿ ತಿನ್ನುವ ಅಭಿಯಾನ (ಈಟ್ ರೈಟ್ ಅಭಿಯಾನ)

  • ಪ್ರಮಾಣಪತ್ರವು ಈಟ್ ರೈಟ್ ಅಭಿಯಾನದ ತತ್ವಗಳನ್ನು ಸಹ ಒಳಗೊಂಡಿದೆ. ಈಟ್ ರೈಟ್ ಅಭಿಯಾನವು “ಆರೋಗ್ಯವಾಗಿರುವುದನ್ನು ತಿನ್ನುವುದು ” ಮತ್ತು “ಸರಿಯಾಗಿರುವುದನ್ನು ತಿನ್ನುವುದು” ಎಂಬ ಎರಡು ವಿಶಾಲ ಸ್ತಂಭಗಳನ್ನು ಆಧರಿಸಿದೆ