Published on: November 26, 2021

ರಾಷ್ಟ್ರೀಯ ಹಾಲು ದಿನ

ರಾಷ್ಟ್ರೀಯ ಹಾಲು ದಿನ

ಸುದ್ಧಿಯಲ್ಲಿ ಏಕಿದೆ ?  ಪ್ರತಿ ವರ್ಷ ನವೆಂಬರ್ 26 ರಂದು ರಾಷ್ಟ್ರೀಯ ಹಾಲು ದಿನವನ್ನು ಆಚರಿಸಲಾಗುತ್ತದೆ.

ಐತಿಹಾಸಿಕ ಹಿನ್ನೆಲೆ

  • ಭಾರತೀಯ ಡೈರಿ ಅಸೋಸಿಯೇಷನ್‌ನೊಂದಿಗೆ ಭಾರತದ ಎಲ್ಲಾ ಡೈರಿ ಮೇಜರ್‌ಗಳು 2014 ರಲ್ಲಿ ಡಾ. ವರ್ಗೀಸ್ ಕುರಿಯನ್ ಅವರಿಗೆ ಗೌರವ ಸಲ್ಲಿಸಲು ನವೆಂಬರ್ 26 ರಂದು ರಾಷ್ಟ್ರೀಯ ಹಾಲು ದಿನವನ್ನು ಆಚರಿಸಲು ನಿರ್ಧರಿಸಿದರು. ನವೆಂಬರ್ 26 ಡಾ ಕುರಿಯನ್ ಅವರ ಜನ್ಮದಿನ.
  • ದೇಶ ಮತ್ತು ವಿಶ್ವದ ಅತ್ಯಂತ ದೊಡ್ಡ ಹಾಲು ಉತ್ಪಾದಕರ ಒಕ್ಕೂಟವಾದ ಅಮೂಲ್ (ಆನಂದ್ ಮಿಲ್ಕ್‌ ಯೂನಿಯನ್ ಲಿಮಿಟೆಡ್‌) ಅನ್ನು ರೂಪಿಸಿದ್ದು ಕುರಿಯನ್. 1946ರಲ್ಲಿ ದೇಶದ ಮೊದಲ ಹಾಲು ಉತ್ಪಾದಕರ ಸಂಘ ಗುಜರಾತ್‌ನಲ್ಲಿ ಆರಂಭವಾಗಿತ್ತು. 1948ರಲ್ಲಿ ಅದರ ಸದಸ್ಯರ ಸಂಖ್ಯೆ ಹೆಚ್ಚಾಯಿತು. ಜಿಲ್ಲಾಮಟ್ಟದಲ್ಲಿಯೂ ಹಾಲು ಉತ್ಪಾದಕರ ಸಂಘಟಗಳ ಒಕ್ಕೂಟಗಳು ಆರಂಭವಾದವು.

‘ಆಪರೇಷನ್ ಫ್ಲಡ್’

  • ಗುಜರಾತಿನಲ್ಲಿ ವರ್ಗೀಸ್ ಕುರಿಯನ್ ಅವರು ರೂಪಿಸಿದ್ದ ಸಹಕಾರಿ ಹಾಲು ಒಕ್ಕೂಟ ವ್ಯವಸ್ಥೆಯ ಯಶಸ್ಸಿನ ಬಗ್ಗೆ ತಿಳಿದುಕೊಳ್ಳಲು ಅಂದಿನ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರಿಗೆ ತೀವ್ರ ಕುತೂಹಲವಿತ್ತು. 1964ರಲ್ಲಿ ಅಮೂಲ್‌ ಘಟಕಕ್ಕೆ ಭೇಟಿ ನೀಡಿದ ಅವರು, ಹಳ್ಳಿಗರ ಸಾಮಾಜಿಕ–ಮತ್ತು ಆರ್ಥಿಕ ಸ್ಥಿತಿ ಉತ್ತಮಪಡಿಸುವ ಕುರಿಯನ್ ಅವರ ಈ ಮಾದರಿಯನ್ನು ದೇಶದ ಎಲ್ಲಡೆ ವಿಸ್ತರಿಸುವ ಕುರಿತ ಚರ್ಚೆ ನಡೆಸಿದ್ದರು. ಈ ಬಳಿಕ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ರೂಪು ತಾಳಿತು. ಕುರಿಯನ್ ಅದರ ಮೊದಲ ಮುಖ್ಯಸ್ಥರಾದರು. ಮಂಡಳಿಯು 1970ರಲ್ಲಿ ಭಾರತದಲ್ಲಿ ಡೇರಿ ಅಭಿವೃದ್ಧಿ ಯೋಜನೆಯನ್ನು ಶುರು ಮಾಡಿತ್ತು. ಇದು ‘ಆಪರೇಷನ್ ಫ್ಲಡ್’ ಎಂದೇ ಹೆಸರಾಯಿತು.
  • ‘ಆಪರೇಷನ್ ಫ್ಲಡ್’ ಯೋಜನೆಯು ದೇಶದಲ್ಲಿ ಕ್ಷೀರಕ್ರಾಂತಿಗೆ ನಾಂದಿಹಾಡಿತು. ಮಧ್ಯವರ್ತಿಯ ಹಾವಳಿ ತಪ್ಪಿಸಿ, ಹಾಲು ಉತ್ಪಾದಕರಿಂದ ಪ್ರಮುಖ ನಗರ ಮತ್ತು ಪಟ್ಟಣಗಳ ಗ್ರಾಹಕರಿಗೆ ಹಾಲು ಪೂರೈಸುವ ಉದ್ದೇಶವನ್ನು ಇದು ಹೊಂದಿತ್ತು.
  • ಉತ್ಪಾದಕರಿಗೆ ಅರ್ಹ ಬೆಲೆ ದೊರಕಿಸಲು ಆದ್ಯತೆ ನೀಡಲಾಗಿತ್ತು. ಈ ಯೋಜನೆಯು ಡೇರಿ ಉದ್ಯಮಕ್ಕೆ ಸ್ಥಿರತೆ ತರುವುದರ ಜೊತೆಗೆ ಬಡ ರೈತರಿಗೆ ಉದ್ಯೋಗದ ದಾರಿ ಮಾಡಿಕೊಟ್ಟಿತು.
  • ಆಪರೇಷನ್ ಫ್ಲಡ್‌ನ ತಳಹದಿಯಲ್ಲಿ ಬಹುತೇಕ ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ತಲೆ ಎತ್ತಿದವು. ಹಾಲು ಉತ್ಪಾದನೆ, ಸರಬರಾಜು ಸೇರಿದಂತೆ ವಿವಿಧ ಹಂತಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಯಿತು. ಇದರ ಫಲವಾಗಿ ದೇಶದಲ್ಲಿ ಕ್ಷೀರ ಕ್ರಾಂತಿ ಆಯಿತು.
  • ಆಪರೇಷನ್ ಫ್ಲಡ್ ಯೋಜನೆಯುಜಗತ್ತಿನ ಅತಿದೊಡ್ಡ ಡೇರಿ ಅಭಿವೃದ್ಧಿ ಕಾರ್ಯಕ್ರಮ ಎಂದು ಹೆಸರಾಯಿತು. ಇದಕ್ಕೆ ಕಾರಣಕರ್ತರಾದ ವರ್ಗೀಸ್ ಕುರಿಯನ್ ಅವರನ್ನು ಕ್ಷೀರ ಕ್ರಾಂತಿಯ ಪಿತಾಮಹ ಎಂದು ಕರೆಯಲಾಯಿತು.

ಮೂರು ಹಂತಗಳು:

  • ಯೋಜನೆಯಲ್ಲಿ ಮೂರು ಹಂತಗಳಿದ್ದವು. 1970ರಲ್ಲಿ ಮೊದಲ ಹಂತದಲ್ಲಿ, 10 ರಾಜ್ಯಗಳಲ್ಲಿ 18 ಹಾಲಿನ ಘಟಕಗಳನ್ನು ಸ್ಥಾಪಿಸಿ ಅದರ ಮೂಲಕ ದೇಶದ ನಾಲ್ಕು ಮಹಾ ನಗರಗಳಿಗೆ ಹಾಲು ಸರಬರಾಜು ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. 1981ರಲ್ಲಿ ಈ ಹಂತ ಪೂರ್ಣಗೊಂಡಾಗ, ದೇಶದಲ್ಲಿ 13 ಸಾವಿರ ಸಹಕಾರಿ ಸಂಘಗಳು ರೂಪುಗೊಂಡಿದ್ದವು.
  • ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಎರಡನೇ ಹಂತ ಜಾರಿಯಾಯಿತು. 1985ರ ವೇಳೆಗೆ ದೇಶದಲ್ಲಿ 136 ಘಟಕಗಳು, 34 ಸಾವಿರ ಸಂಘಗಳು ಅಸ್ತಿತ್ವದಲ್ಲಿದ್ದವು. 36 ಲಕ್ಷ ಸದಸ್ಯರು ಡೇರಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.
  • ಮೂರನೇ ಹಂತದಲ್ಲಿ ಉತ್ಪಾದಕತೆ ಹೆಚ್ಚಿಸುವ ಹಾಗೂ ದೀರ್ಘಾವಧಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶ ಇರಿಸಿಕೊಳ್ಳಲಾಗಿತ್ತು. ಈ ಹಂತ ಪೂರ್ಣಗೊಂಡಾಗ (1996) ದೇಶದಲ್ಲಿ 93 ಸಾವಿರ ಡೇರಿ ಸಂಘಗಳಿದ್ದವು. ಸದಸ್ಯರ ಸಂಖ್ಯೆ 94 ಲಕ್ಷಕ್ಕೆ ಏರಿಕೆಯಾಗಿತ್ತು.
  • ಈ ಉದ್ಯಮ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋಯಿತು. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಯಿತು. ಹಾಲಿನ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲು ಆರಂಭಿಸಲಾಯಿತು.

ಗುಜರಾತ್‌ನಲ್ಲಿ ಶುರುವಾದ ಅಮೂಲ್‌ ಹೊರತುಪಡಿಸಿದರೆ, ಕರ್ನಾಟಕದಲ್ಲಿ ಶುರುವಾದ ಕೆಎಂಎಫ್ ಅತಿ ಹೆಚ್ಚು ಯಶಸ್ಸು ಪಡೆದ ಹಾಲು ಉತ್ಪಾದಕ ಸಂಸ್ಥೆ ಎನಿಸಿತು.

ವರ್ಗೀಸ್ ಕುರಿಯನ್ ಜೀವನ

  • 1921ರ ನವೆಂಬರ್ 26ರಂದು ಕೇರಳದ ಕೋಯಿಕ್ಕೋಡ್‌ನಲ್ಲಿ ಕ್ರೈಸ್ತ ಕುಟುಂಬದಲ್ಲಿ ಜನಿಸಿದ ವರ್ಗೀಸ್ ಕುರಿಯನ್, 1940ರಲ್ಲಿ ಮದ್ರಾಸ್‌ನ ಲೊಯೋಲಾ ಕಾಲೇಜ್‌ನಿಂದ ಬಿಎಸ್‌ಸಿ ಪದವಿ ಪಡೆದರು. ಅಲ್ಲಿಯೇ 1943ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನೂ ಪಡೆದರು.
  • ಜಮ್‌ಶೆಡ್‌ಪುರದ ಟಾಟಾ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿ, ಬೆಂಗಳೂರಿನ ರಾಷ್ಟ್ರೀಯ ಡೇರಿ ಸಂಶೋಧನಾ ಸಂಸ್ಥೆಯಲ್ಲಿ ಡೇರಿ ವಿಭಾಗದಲ್ಲಿ ಎಂಜಿನಿಯರಿಂಗ್ ಓದಿದರು.
  • ನಂತರ ಮಿಶಿಗನ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.
  • ಗುಜರಾತ್ ರಾಜ್ಯದ ಆನಂದ್‌ನಲ್ಲಿರುವ ಸರ್ಕಾರಿ ಸಂಶೋಧನಾ ಕ್ರೀಮರಿ ಸಂಸ್ಥೆಯಲ್ಲಿ ಕೆಲಸ ಮಾಡಿದರು. 1965ರಲ್ಲಿ ಅವರು ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ ಮೊದಲ ಅಧ್ಯಕ್ಷರಾಗಿ ನೇಮಕವಾದರು. ಇವರ ನೇತೃತ್ವದಲ್ಲಿ ಆಪರೇಷನ್ ಫ್ಲಡ್ ಕಾರ್ಯರೂಪಕ್ಕೆ ಬಂದಿತು.
  • ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಆರಂಭಿಸಿದರು.
  • ರೇಮನ್‌ ಮ್ಯಾಗ್ಸೇಸೆ, ಪದ್ಮ ವಿಭೂಷಣ, ವಿಶ್ವ ಆಹಾರ ಪ್ರಶಸ್ತಿಗಳು ಅವರಿಗೆ ಸಂದಿವೆ. ಅವರು 2012ರ ಸೆಪ್ಟೆಂಬರ್ 9ರಂದು ನಿಧನರಾದರು.