Published on: August 13, 2021

ರೇಡಿಯೋ ಕಾಲರ್‌

ರೇಡಿಯೋ ಕಾಲರ್‌

ಸುದ್ಧಿಯಲ್ಲಿ ಏಕಿದೆ? ರಾಜ್ಯದ ಅರಣ್ಯ ವ್ಯಾಪ್ತಿಯಲ್ಲಿನ ಆನೆಗಳ ಟ್ರ್ಯಾಕಿಂಗ್‌ಗೆ ರೇಡಿಯೋ ಕಾಲರ್‌ ವ್ಯವಸ್ಥೆ ಸಹಕಾರಿಯಾಗಿದ್ದು, ಈಗಾಗಲೇ 12 ಆನೆಗಳಿಗೆ ಕಾಲರ್‌ ಅಳವಡಿಸಲಾಗಿದೆ. ಆ ಮೂಲಕ ಪುಂಡಾನೆಗಳ ಚಲನವಲನದ ಮೇಲೆ ನಿಗಾ ಇಡಲು ಅರಣ್ಯ ಇಲಾಖೆ ಹೊಸ ಮಾರ್ಗವನ್ನು ಕಂಡುಕೊಂಡಿದೆ.

  • ರಾಜ್ಯದಲ್ಲಿ ಸದ್ಯ ಒಟ್ಟಾರೆ 6,072 ಆನೆಗಳ ವಾಸಿಸುತ್ತಿದ್ದು, ಜನರೊಂದಿಗಿನ ಸಂಘರ್ಷ, ಬೆಳೆ ನಾಶ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳಿಗೆ ರೇಡಿಯೋ ಕಾಲರ್‌ ಅಳವಡಿಕೆ ಸಹಕಾರಿಯಾಗಲಿದೆ.

ಏನಿದು ರೇಡಿಯೋ ಕಾಲರ್‌..?

  • ಆನೆಗಳ ಹಿಂಡು ಯಾವ ದಿಕ್ಕಿನತ್ತ ಸಂಚರಿಸುತ್ತಿದೆ, ಯಾವ ಪ್ರದೇಶದಲ್ಲಿವೆ ಎನ್ನುವ ಮಾಹಿತಿ ತಿಳಿಯಲು ಅನುಕೂಲವಾಗುವ ವ್ಯವಸ್ಥೆಯೇ ರೇಡಿಯೋ ಕಾಲರ್‌.
  • ಈ ವ್ಯವಸ್ಥೆಯಡಿ ಆನೆ ಹಿಂಡಿನಲ್ಲಿನ ಒಂದಕ್ಕೆ ಮತ್ತು ತರಿಸುವ ಔಷಧ ನೀಡಿ, ಕುತ್ತಿಗೆಗೆ ಬೆಲ್ಟ್‌ ರೀತಿಯ ಟ್ರ್ಯಾಕರ್‌ ಅಳವಡಿಸಲಾಗುತ್ತದೆ. ಡೆಹ್ರಾಡೂನ್‌ ವನ್ಯಜೀವಿ ಸಂಸ್ಥೆ (ಡಬ್ಲೂತ್ರ್ಯಐಐ), ಜರ್ಮನಿಯ ವನ್ಯಜೀವಿ ಸಂಸ್ಥೆಯೊಂದರ ಸಹಯೋಗದಲ್ಲಿ ಅರಣ್ಯ ಇಲಾಖೆ 2015-16ರಲ್ಲಿ ರೇಡಿಯೋ ಕಾಲರ್‌ ಅಳವಡಿಕೆಗೆ ಯೋಜನೆ ಸಿದ್ಧಗೊಂಡರೂ ಮೊದಲ ಬಾರಿಗೆ 2019ರಲ್ಲಿ ಕೊಡಗಿನ ಅರಣ್ಯ ಪ್ರದೇಶದಲ್ಲಿಅಳವಡಿಕೆಗೆ ಚಾಲನೆ ದೊರಕಿತು.
  • ಆರಂಭಿಕವಾಗಿ 20 ರೇಡಿಯೋ ಕಾಲರ್‌ಗಳ ಅಳವಡಿಕೆಗೆ ಉದ್ದೇಶಿಸಿದ್ದರು. ರಾಜ್ಯದಲ್ಲೀಗ ಒಟ್ಟು 12 ಆನೆಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಜಿಎಸ್‌ಎಂ ಆಧಾರದಲ್ಲಿ 3 ಕಾಲರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ ಕಾಲರ್‌ಗಳು ಸ್ಯಾಟಲೈಟ್‌ ಮೂಲಕ ನಿರಂತರವಾಗಿ ಮಾಹಿತಿ ನೀಡಲಿವೆ. ಈ ಕಾಲರ್‌ಗಳು 3 ವರ್ಷದ ಅವಧಿಗೆ ಕಾರ್ಯನಿರ್ವಹಿಸಲಿದ್ದು, ಆನೆಗಳ ಚಲನವಲನದ ಮಾಹಿತಿ ನೀಡುತ್ತವೆ.

ಆನೆಗಳ ಪುಂಡಾಟಕ್ಕೆ ತಡೆ

  • ರಾಜ್ಯದಲ್ಲಿ ಕಾಡಾನೆ ದಾಳಿಗೆ ವಾರ್ಷಿಕ ಅಪಾರ ಪ್ರಮಾಣದಲ್ಲಿ ಕೃಷಿ ಪ್ರದೇಶ ಹಾನಿಗೊಳಗಾಗುತ್ತದೆ. ಬಂಡೀಪುರ ಅರಣ್ಯ ಪ್ರದೇಶವೊಂದರಲ್ಲೇ ಕಳೆದ ವರ್ಷ 2,500 ಪ್ರಕರಣಗಳಲ್ಲಿ 1 ಕೋಟಿ ರೂ. ಪರಿಹಾರ ಮೊತ್ತ, ಜತೆಗೆ ಈವರೆಗೆ 5 ಕೋಟಿ ರೂ. ಪರಿಹಾರ ಮೊತ್ತದ ಬೆಳೆ ಹಾನಿಯಾಗಿದ್ದು ವರದಿಯಾಗಿದೆ. ಈ ರೀತಿ ಆನೆಗಳ ಪುಂಡಾಟಕ್ಕೆ ಬ್ರೇಕ್‌ ಹಾಕಲು ರೇಡಿಯೋ ಕಾಲರ್‌ ಸಹಕಾರಿಯಾಗಲಿದೆ.

ಕರ್ನಾಟಕದಲ್ಲಿವೆ ದೇಶದ ಶೇ.25ರಷ್ಟು ಆನೆಗಳು

  • 2012ರ ಆನೆ ಗಣಿತಿಯಂತೆ ರಾಜ್ಯದಲ್ಲಿ ಸುಮಾರು 6,072 ಆನೆಗಳಿರುವುದಾಗಿ ಮಾಹಿತಿ ಸಂಗ್ರಹಿಸಲಾಗಿತ್ತು. 2017-18ರಲ್ಲಿ ಮೈಸೂರು ಹಾಗೂ ಭದ್ರಾ ಆನೆ ಸಂರಕ್ಷಿತ ಪ್ರದೇಶಗಳಲ್ಲಿ ಆನೆ ಗಣಿತಿ ಕೈಗೊಂಡು 6,049 ಆನೆಗಳನ್ನು ಗುರುತಿಸಲಾಗಿದ್ದು, ರಾಜ್ಯದಲ್ಲಿ ಸದ್ಯ 6,500ಕ್ಕೂ ಹೆಚ್ಚಿನ ಆನೆಗಳಿರಬಹುದು ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಒಟ್ಟು 27,000 ಸಾವಿರ ಆನೆಗಳಿದ್ದು ಅದರ ಶೇಕಡಾ 25ರಷ್ಟು ಆನೆಗಳು ರಾಜ್ಯದಲ್ಲಿವೆ ಎಂಬುದು ವಿಶೇಷ.