Published on: December 21, 2021

ರೈ ತೂಫಾನು

ರೈ ತೂಫಾನು

ಸುದ್ಧಿಯಲ್ಲಿ ಏಕಿದೆ? ಫಿಲಿಪ್ಪೀನ್ಸ್‌ನಲ್ಲಿ ಭೀಕರ ಗಾಳಿಯನ್ನು ತರುತ್ತಿರುವ ರೈ ತೂಫಾನು ನೂರಾರು ಮಂದಿಯನ್ನು ಬಲಿ ತೆಗೆದುಕೊಂಡಿದೆ. ಮನೆಗಳು, ಕಟ್ಟಡಗಳು ತೂಫಾನಿನ ಹೊಡೆತಕ್ಕೆ ನೆಲಸಮವಾಗಿವೆ. ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ.

ಚಂಡಮಾರುತ ಎಂದರೇನು?

  • ಹವಾಮಾನಕ್ಕೆ ಸಂಬಂಧಿಸಿದ ಒಂದು ವಿದ್ಯಮಾನ. ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಗಾಳಿ ಜೋರಾಗಿ ಪ್ರದಕ್ಷಿಣೆ ಇಲ್ಲವೇ ಅಪ್ರದಕ್ಷಿಣಾ ಪಥದಲ್ಲಿ ಸುರುಳಿ ಸುತ್ತುತ್ತಾ ಕಡಿಮೆ ಒತ್ತಡ ಇರುವ ಪ್ರದೇಶದತ್ತ ಮುನ್ನುಗ್ಗುವುದೇ ಚಂಡಮಾರುತ.

ಸೈಕ್ಲೋನ್‌, ಹರಿಕೇನ್‌, ಟೈಫೂನ್‌ ಬೇರೆ ಬೇರೇನಾ?

  • ಎಲ್ಲವೂ ಒಂದೇ. ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಅದಕ್ಕೆ ಬೇರೆ ಬೇರೆ ಹೆಸರು.
  • ಅಟ್ಲಾಂಟಿಕ್‌ ಸಾಗರ: ಹರಿಕೇನ್‌
  • ಫೆಸಿಫಿಕ್‌ ಸಾಗರ: ಟೈಫೂನ್‌
  • ಹಿಂದೂ ಮಹಾಸಾಗರ: ಸೈಕ್ಲೋನ್‌

ನಾಮಕರಣ ಹೇಗೆ?

  • ಜಾಗತಿಕ ಪವನಶಾಸ್ತ್ರ ಸಂಘಟನೆ(ಡಬ್ಲ್ಯುಎಂಒ)ಯಡಿ ಬರುವ, ಜಗತ್ತಿನೆಲ್ಲೆಡೆ ಹರಡಿರುವ 11 ಮುನ್ನೆಚ್ಚರಿಕಾ ಕೇಂದ್ರಗಳಲ್ಲಿ ತಮ್ಮ ತಮ್ಮ ಭಾಗಕ್ಕೆ ಅನ್ವಯವಾಗುವಂತೆ ಹೆಸರನ್ನು ಸೂಚಿಸಲು ಅವಕಾಶವಿದೆ. ಅವೆಲ್ಲವನ್ನೂ ಜಾಗತಿಕ ಹವಾಮಾನ ಸಂಘಟನೆಯ ಪ್ರಾದೇಶಿಕ ಉಷ್ಣವಲಯ ಚಂಡಮಾರುತ ಸಮಿತಿ(ಆಗ್ನೇಯ ಪೆಸಿಫಿಕ್‌)ಯ ಅಂತಿಮ ಒಪ್ಪಿಗೆಗೆ ಸಲ್ಲಿಸಬೇಕಾಗುತ್ತದೆ. ಈ ಸಮಿತಿಗೆ ಶಿಫಾರಸನ್ನು ಒಪ್ಪುವ, ತಿರಸ್ಕರಿಸುವ, ಬೇರೆಯದೇ ಹೆಸರು ಸೂಚಿಸುವ ಅಧಿಕಾರ ಹೊಂದಿದೆ. ಹೆಸರು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಆಯಾ ಭಾಗದ ಹಲವಾರು ರಾಷ್ಟ್ರಗಳು ಒಳಗೊಳ್ಳುತ್ತವೆ. ಅಂತಿಮವಾಗಿ ಜನಮತಗಣನೆಯ ಆಧಾರದಲ್ಲಿ ಹೆಸರು ಅಂತಿಮಗೊಳಿಸಲಾಗುತ್ತದೆ.

ಹೆಚ್ಚು ಅಪಾಯ ಸೃಷ್ಟಿಸಿದರೆ ನಿವೃತ್ತಿ!

  • ಯಾವುದೇ ಚಂಡಮಾರುತ ಭಾರಿ ಪ್ರಮಾಣ ಜೀವಹಾನಿ, ನಾಶ-ನಷ್ಟವನ್ನು ಉಂಟು ಮಾಡಿದರೆ ಆದರ ಹೆಸರನ್ನು ನಿವೃತ್ತಿಗೊಳಿಸಿ ಹೊಸ ಹೆಸರು ಇಡಲಾಗುತ್ತದೆ. ಆ ಹೆಸರನ್ನು ಮುಂದಿನ ಹತ್ತು ವರ್ಷಗಳ ಕಾಲ ಮತ್ತೆ ಇಡುವ ಹಾಗಿಲ್ಲ. ಇದು ಮೃತರಿಗೆ ಗೌರವ ಎಂಬುದು ಕಲ್ಪನೆ.

ಹಿಂದೂ ಸಾಗರದಲ್ಲಿ 2000ದಿಂದ ನಾಮಕರಣ

  • ಹಿಂದೂ ಮಹಾಸಾಗರದಲ್ಲಿ ಹುಟ್ಟುವ ಚಂಡಮಾರುತಗಳಿಗೆ ಹೆಸರಿಡುವ ಪ್ರಕ್ರಿಯೆ ಆರಂಭವಾಗಿದ್ದು 2000ನೇ ಇಸವಿಯಿಂದ. ಅದಕ್ಕೊಂದು ಸೂತ್ರ ರೂಪಿಸಿದ್ದು 2004ರಲ್ಲಿ.
  • ಹಿಂದೂ ಸಾಗರಕ್ಕೆ ಸಂಬಂಧಿಸಿದ ಭಾರತ, ಬಾಂಗ್ಲಾ ದೇಶ, ಮಾಲ್ದೀವ್ಸ್‌, ಮ್ಯಾನ್ಮಾರ್‌, ಒಮಾನ್‌, ಪಾಕಿಸ್ತಾನ, ಶ್ರೀಲಂಕಾ ಮತ್ತು ಥೈಲಂಡ್‌ಗಳು ನಾಮಕರಣ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತವೆ. ಕ್ರಮ ಪ್ರಕಾರವಾಗಿ ಅವುಗಳಿಗೆ ಅಧಿಕಾರ ದೊರೆಯುತ್ತದೆ.
  • ಭಾರತ ಕೊಟ್ಟ ಹೆಸರುಗಳು: ಅಗ್ನಿ, ಆಕಾಶ್‌, ಬಿಜಲಿ, ಜಲ್‌.

ಸೈಕ್ಲೋನ್‌ ವರ್ಗೀಕರಣ ಹೇಗೆ?

ಹಿಂದೂ ಮಹಾ ಸಾಗರದಲ್ಲಿ ಹುಟ್ಟುವ ಚಂಡಮಾರುತಗಳನ್ನು ಗಾಳಿಯ ವೇಗಕ್ಕೆ ಅನುಗುಣವಾಗಿ ಹೀಗೆ ವಿಂಗಡಿಸಬಹುದು.

  • ವಾಯುಭಾರ ಕುಸಿತ: ಗಂಟೆಗೆ 31-49 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದರೆ
  • ತೀವ್ರ ವಾಯುಭಾರ ಕುಸಿತ: ಗಾಳಿಯ ವೇಗ 50-61 ಕಿ.ಮೀ/ಗಂಟೆಗೆ
  • ಚಂಡಮಾರುತ: ಗಾಳಿಯ ವೇಗ ಗಂಟೆಗೆ 62ರಿಂದ 88 ಕಿಮೀಯೊಂದಿಗೆ ತೀವ್ರ ವಾಯುಭಾರ ಕುಸಿತವಿದ್ದರೆ ಅದು ಚಂಡಮಾರುತ.
  • ಗಂಭೀರ ಚಂಡಮಾರುತ: ಗಾಳಿಯ ವೇಗ 89-117 ಕಿ.ಮೀ/ಗಂಟೆಗೆ
  • ಅತಿ ತೀವ್ರ ಚಂಡಮಾರುತ: ಗಾಳಿಯ ವೇಗ 118-166 ಕಿ.ಮೀ./ಗಂಟೆಗೆ
  • ಅತ್ಯಂತ ಗಂಭೀರ ಚಂಡಮಾರುತ: 166-221 ಕಿ.ಮೀ/ಗಂಟೆ ವೇಗದ ಗಾಳಿ
  • ಸೂಪರ್‌ ಸೈಕ್ಲಾನಿಕ್‌ ಸ್ಟಾರ್ಮ್‌: 222 ಕಿ.ಮೀ.ಗಿಂತಲೂ ವೇಗವಾಗಿ ಗಾಳಿ ಬೀಸಿದರೆ