Published on: August 15, 2022

ಲಂಪಿ ರೋಗ

ಲಂಪಿ ರೋಗ

ಸುದ್ದಿಯಲ್ಲಿ ಏಕಿದೆ?

ರಾಜಸ್ಥಾನದಲ್ಲಿ ಲಂಪಿ ವೈರಸ್‌ನಿಂದ ಉಂಟಾಗುವ ಚರ್ಮಗಂಟು ಸೋಂಕಿನಿಂದ 12,800 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿದ್ದು, ರಾಜ್ಯ ಸರ್ಕಾರ ಪ್ರಾಣಿಗಳ ಸಂತೆ, ಅಥವಾ ಜಾತ್ರೆ ನಡೆಸುವುದನ್ನು ನಿಷೇಧಿಸಿದೆ.

ಮುಖ್ಯಾಂಶಗಳು

  • ರೋಗ ಹರಡುವುದನ್ನು ನಿಯಂತ್ರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಐದು ಜಿಲ್ಲೆಗಳಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ” ಎಂದು ರಾಜಸ್ಥಾನ ಪಶುಸಂಗೋಪನೆ ಇಲಾಖೆ ವರದಿ ಮಾಡಿದೆ.
  • ಇಲಾಖೆಯ ಪ್ರಕಾರ, ಒಟ್ಟು 2,81,484 ಪ್ರಾಣಿಗಳು ಈ ರೋಗದಿಂದ ಬಳಲುತ್ತಿವೆ ಮತ್ತು 2,41,685 ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗಿದೆ.
  • ರಾಜ್ಯದಲ್ಲಿ ರೋಗ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ರಾಜಸ್ಥಾನದಲ್ಲಿ ಪ್ರಾಣಿ ಸಂತೆ, ಜಾತ್ರೆ ಆಯೋಜಿಸುವುದನ್ನು ನಿಷೇಧಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಅಲ್ಲದೆ ಮೃತ ಜಾನುವಾರುಗಳ ಸುರಕ್ಷಿತ ವಿಲೇವಾರಿಗೆ ರಾಜ್ಯ ಸರ್ಕಾರವೂ ನಿರ್ದೇಶನ ನೀಡಿದೆ.

ರೋಗ ಲಕ್ಷಣಗಳು

  • ಜಾನುವಾರಗಳ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ . ಜಾನುವಾರುಗಳು ಮೇವು ತಿನ್ನುವುದಿಲ್ಲ. ಜ್ವರ ಕಂಡು ಬರುತ್ತದೆ, ಮೈ ಮೇಲೆ ಗುಳ್ಳೆ ಆಗುತ್ತದೆ. ತಾಪಮಾನ ಹೆಚ್ಚಳವಾಗುತ್ತದೆ. ಮಾರಣಾಂತಿಕ ಕಾಯಿಲೆ ಅಲ್ಲವಾಗಿದ್ದರೂ ಜೀವ ಹಿಂಡುವ ಕೆಲಸ ಮಾಡುತ್ತದೆ.

ಚಿಕಿತ್ಸೆ

  • ಕಡ್ಡಾಯವಾಗಿ ಜಾನುವಾರುಗಳಿಗೆ ಐದು ದಿನ ಚಿಕಿತ್ಸೆ ನೀಡಲಾಗುತ್ತಿದೆ. ಪೇನ್‌ ಕಿಲ್ಲರ್‌ ಇಂಜೆಕ್ಷನ್‌, ಬಿಕಾಂಪ್ಲೆಕ್ಸ್‌, ಆ್ಯಂಟಿಬಯೋಟಿಕ್‌ ಇಂಜೆಕ್ಷನ್‌ ಸೇರಿದಂತೆ ಇನ್ನಿತರ ಔಷಧಿಗಳನ್ನು ನೀಡುವ ಮೂಲಕ ರೋಗ ಪೀಡಿತ ದನಗಳಲ್ಲಿ ರೋಗ ನಿರೋಧಕ ಹೆಚ್ಚಿಸುವಂತ ಕೆಲಸ ಮಾಡಲಾಗುತ್ತಿದೆ. ಇದೊಂದು ವೈರಲ್‌ ಕಾಯಿಲೆ ಆಗಿರುವ ಪರಿಣಾಮ ಇಂತಹದ್ದೇ ಚಿಕಿತ್ಸೆ ನೀಡಬೇಕೆಂಬ ಯಾವುದೇ ರೀತಿ ನಿಖರವಾದ ಔಷಧಿ ಇಲ್ಲಎನ್ನುತ್ತಾರೆ ತಜ್ಞ ವೈದ್ಯರು.