Published on: December 13, 2022
ವನ್ಯಜೀವಿ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ, 2021
ವನ್ಯಜೀವಿ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ, 2021
ಸುದ್ದಿಯಲ್ಲಿ ಏಕಿದೆ? ಸಂರಕ್ಷಿತ ಅರಣ್ಯ ಪ್ರದೇಶದ ನಿರ್ವಹಣೆಯನ್ನು ಉತ್ತಮಗೊಳಿಸುವುದಕ್ಕಾಗಿ ಸಿದ್ಧಪಡಿಸಲಾಗಿರುವ ವನ್ಯಜೀವಿ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ, 2021 ಅನ್ನು ರಾಜ್ಯಸಭೆ ಅಂಗೀಕರಿಸಿದೆ.
ಮುಖ್ಯಾಂಶಗಳು
- ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
- ಲೋಕಸಭೆಯು ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನು ಅಂಗೀಕರಿಸಿತ್ತು. ಸಂಸದೀಯ ಸಮಿತಿಯು ಈ ಮಸೂದೆಯ ಪರಿಶೀಲನೆ ನಡೆಸಿದೆ.
- ಮಸೂದೆಯಲ್ಲಿರುವ ಪರಿಕಲ್ಪನೆಗಳು: ‘ಸಂರಕ್ಷಣೆ’ ಹಾಗೂ ‘ನಿರ್ವಹಣೆ’
ಮಸೂದೆಯಲ್ಲಿರುವ ಅಂಶಗಳು
- ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಜಾನುವಾರುಗಳನ್ನು ಮೇಯಿಸಲು ಮತ್ತು ಅರಣ್ಯ ಪ್ರದೇಶದಿಂದ ಕುಡಿಯಲು ಹಾಗೂ ಮನೆಬಳಕೆಗೆ ನೀರು ಪಡೆದುಕೊಳ್ಳಲು ಮಸೂದೆಯಲ್ಲಿ ಅವಕಾಶ ನೀಡಲಾಗಿದೆ.
- ವನ್ಯಜೀವಿ (ಸಂರಕ್ಷಣೆ) ಕಾಯ್ದೆ 1972ರ ಪ್ರಕಾರ ಮಾಡಲಾದ ಸಸ್ಯ ಪ್ರಭೇದ ಹಾಗೂ ಪ್ರಾಣಿಗಳ ಪಟ್ಟಿಯನ್ನು ತರ್ಕಬದ್ಧವಾದ ರೀತಿಯಲ್ಲಿ ಮರುರೂಪಿಸಲು ವನ್ಯಜೀವಿ (ಸಂರಕ್ಷಣೆ) ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ಕೊಡಲಾಗಿದೆ.
- ಕಾಡಿಗೆ ಮಾರಕವಾಗಿರುವ ವಿದೇಶಿ ಪ್ರಭೇದದ ಸಸ್ಯಗಳನ್ನು ನಿಯಂತ್ರಿಸಲು ಹಾಗೂ ಕೇಂದ್ರ ಸರ್ಕಾರವು ನಿಗದಿ ಮಾಡಿರುವ ಷರತ್ತುಗಳಿಗೆ ಅನುಗುಣವಾಗಿ ಪ್ರಮಾಣಪತ್ರ ಪಡೆದಿರುವ ಆನೆಯ ಮಾಲೀಕರು ಆನೆಗಳನ್ನು ಸಾಗಿಸಲು ಅವಕಾಶ ನೀಡುವ ಅಂಶವೂ ಮಸೂದೆಯಲ್ಲಿ ಇದೆ.
- ಅಳಿವಿನಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯಗಳ ಅಂತರರಾಷ್ಟ್ರೀಯ ವ್ಯಾಪಾರವನ್ನು ನಿಯಂತ್ರಿಸುವ ಸಲುವಾಗಿ ಮೂಲ ಕಾಯ್ದೆಗೆ ಹೊಸ ಭಾಗ ‘5ಬಿ’ ಅನ್ನು ಸೇರಿಸಲಾಗಿದೆ.
- ರಾಜ್ಯಗಳು ಈ ಕುರಿತು ಸ್ಥಾಯಿ ಸಮಿತಿಗಳನ್ನು ರಚಿಸಿಕೊಳ್ಳಬಹುದಾಗಿದೆ.
ಉದ್ದೇಶ
- ಈ ರೀತಿಯ ಪರಿಷ್ಕರಣೆಯು ಸಸ್ಯ ಹಾಗೂ ಪ್ರಾಣಿಗಳ ಸಂರಕ್ಷಣೆಯ ಕಾರ್ಯವನ್ನು ಹೆಚ್ಚು ಪರಿಣಾಮಕಾರಿ ಮಾಡಲಿದೆ.
ವನ್ಯಜೀವಿ ಸಂರಕ್ಷಣೆ ಎಂದರೆ :
- ವನ್ಯಜೀವಿ ಸಂರಕ್ಷಣೆಯು ವನ್ಯಜೀವಿಗಳನ್ನು ನಾಶವಾಗದಂತೆ ರಕ್ಷಿಸುವ ಕ್ರಿಯೆಯನ್ನು ಸೂಚಿಸುತ್ತದೆ. ವನ್ಯಜೀವಿ ಸಂರಕ್ಷಣೆಯ ಪ್ರಾಮುಖ್ಯತೆ :
- ಪಕ್ಷಿಗಳು ಪರಿಸರ ವ್ಯವಸ್ಥೆಯಲ್ಲಿ ಕೀಟಗಳ ಜನಸಂಖ್ಯೆಯನ್ನು ನಿಯಂತ್ರಿಸುತ್ತವೆ. ಅದಕ್ಕಾಗಿಯೇ ನಮ್ಮ ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡಿಕೊಳ್ಳಲು ವನ್ಯಜೀವಿಗಳ ಸಂರಕ್ಷಣೆ ಮುಖ್ಯವಾಗಿದೆ. ಈ ಭೂಮಿಯ ಮೇಲಿನ ಪ್ರತಿಯೊಂದು ಜೀವಿಯು ನೈಸರ್ಗಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಕೃತಿಗೆ ಸಹಾಯ ಮಾಡಲು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತದೆ
ಪ್ರಾಣಿಗಳನ್ನು ರಕ್ಷಿಸುವ ಕಾನೂನುಗಳು :
- ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ – ಪ್ರಾಣಿಗಳ ಮೇಲಿನ ಅನಾವಶ್ಯಕ ನೋವು ಅಥವಾ ಸಂಕಟವನ್ನು ತಡೆಗಟ್ಟಲು ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆಗೆ ಸಂಬಂಧಿಸಿದ ಕಾನೂನುಗಳನ್ನು ತಿದ್ದುಪಡಿ ಮಾಡಲು 1960 ರಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯನ್ನು ಜಾರಿಗೊಳಿಸಲಾಯಿತು.
- ವನ್ಯಜೀವಿ ಸಂರಕ್ಷಣಾ ಕಾಯಿದೆ – ಭಾರತ ಸರ್ಕಾರವು ಈ ದೇಶದ ವನ್ಯಜೀವಿಗಳನ್ನು ಪರಿಣಾಮಕಾರಿಯಾಗಿ ರಕ್ಷಿಸುವ ಉದ್ದೇಶದಿಂದ ವನ್ಯಜೀವಿ (ರಕ್ಷಣೆ) ಕಾಯಿದೆ 1972 ಅನ್ನು ಜಾರಿಗೊಳಿಸಿತು. ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿಗಳು ಮತ್ತು ಪರಿಸರ ವಿಜ್ಞಾನದ ಪ್ರಮುಖ ಸಂರಕ್ಷಿತ ಪ್ರದೇಶಗಳಿಗೆ ರಕ್ಷಣೆ ಒದಗಿಸುವುದು ಉದ್ದೇಶವಾಗಿದೆ.