Published on: January 6, 2022

ವಿದೇಶಿ ದೇಣಿಗೆ

ವಿದೇಶಿ ದೇಣಿಗೆ

ಸುದ್ಧಿಯಲ್ಲಿ ಏಕಿದೆ ? ಖ್ಯಾತ ಪವಿತ್ರ ಯಾತ್ರಾತಾಣ ತಿರುಮಲ ತಿರುಪತಿ ದೇವಸ್ಥಾನ( ಟಿಟಿಡಿ)ಗೆ ಕೇಂದ್ರ ಸರ್ಕಾರ ಎಫ್‌ಸಿಆರ್‌ಎ ಪರವಾನಗಿ ನವೀಕರಿಸದೇ ವಿದೇಶಿ ದೇಣಿಗೆಯನ್ನು ರದ್ದುಮಾಡಲಾಗಿದೆ.

ಹಿನ್ನಲೆ

  • ಧಾರ್ಮಿಕ ದತ್ತಿ ಸಂಸ್ಥೆಗಳು ವಿದೇಶಿ ದೇಣಿಗೆ ಸಂಗ್ರಹಿಸಲು ಕೇಂದ್ರ ಗೃಹ ಸಚಿವಾಲಯದ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ ಸಿ ಆರ್‌ ಎ) ಪರವಾನಗಿ ಕಡ್ಡಾಯವಾಗಿದ್ದು, ಒಮ್ಮೆ ಅರ್ಜಿ ಸಲ್ಲಿಸಿದರೆ, ಪರವಾನಗಿ ದೊರೆತರೆ ಪರವಾನಗಿ ಐದು ವರ್ಷಗಳ ಕಾಲ ಮುಂದುವರೆಯಲಿದೆ.
  • ಮೂಲಗಳ ಪ್ರಕಾರ ಟಿಟಿಡಿ ಪರವಾನಗಿ ಅವಧಿ ಡಿಸೆಂಬರ್ 2020 ರೊಳಗೆ ಮುಕ್ತಾಯಗೊಂಡಿದ್ದು, ಪರವಾನಗಿ ನವೀಕರಣಗೊಳಿಸಿಕೊಳ್ಳಲು ಕಳೆದೊಂದು ವರ್ಷದಿಂದ ಟಿಟಿಡಿ ಹಲವಾರು ಪ್ರಯತ್ನ ಮಾಡಿದೆ. ಆದರೆ, ತಿದ್ದುಪಡಿ ನಿಯಮಗಳಂತೆ ಪರವಾನಗಿ ನವೀಕರಣಗೊಳಿಸಿಕೊಳ್ಳಲು ಟಿಟಿಡಿಗೆ ಸಾಧ್ಯವಾಗಿಲ್ಲ.
  • ದೇಶಾದ್ಯಂತ 18,778 ಸಂಸ್ಥೆಗಳ ಪರವಾನಗಿ ಡಿಸೆಂಬರ್ 31 ರಂದು ಮುಕ್ತಾಯಗೊಂಡಿದೆ. 12,989 ಸಂಸ್ಥೆಗಳು ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರೆ, 5,789 ಸಂಸ್ಥೆಗಳು ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ.

ಎಫ್ ಸಿಆರ್ ಎ ಪರವಾನಗಿ ಅವಧಿ ಮುಕ್ತಾಯಗೊಂಡಿರುವ ಇತರೆ ಸಂಸ್ಥೆಗಳು 

  • ಇನ್ನು ಟಿಟಿಡಿ ಮಾತ್ರವಲ್ಲದೇ ದೇಶದ ಹಲವು ಸಂಸ್ಥೆಗಳ ಎಫ್ಸಿಆರ್ಎ ಪರವಾನಗಿ ಅವಧಿ ಮುಕ್ತಾಯಗೊಂಡಿದೆ. ಆಂಧ್ರ ಪ್ರದೇಶದ ಪುಟ್ಟಪರ್ತಿಯ ಪ್ರಶಾಂತಿ ನಿಲಯದಲ್ಲಿರುವ ಶ್ರೀ ಸತ್ಯಸಾಯಿ ವೈದ್ಯಕೀಯ ಟ್ರಸ್ಟ್, ಚಿರಂಜೀವಿ ಚಾರಿಟಬಲ್ ಟ್ರಸ್ಟ್ ಮತ್ತು ಜಿವಿಕೆ ತುರ್ತು ಸಂಶೋಧನಾ ಸಂಸ್ಥೆ, ತೆಲಂಗಾಣದ ಮಿಷನ್ ಕಾಕತೀಯ ಟ್ರಸ್ಟ್, ಜಾಮಿಯಾ ಮಿಲಿಯಾ ಇಸಾಮಿಯಾ, ಆಕ್ಸ್‌ಫ್ಯಾಮ್ ಇಂಡಿಯಾ, ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಎಫ್‌ಸಿಆರ್‌ಎ ನೋಂದಣಿ ಅವದಿ ಮುಕ್ತಾಯಗೊಂಡಿದೆ.
  • ಇದಲ್ಲದೆ ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಯ ಎಫ್‌ಸಿಆರ್‌ಎ ಪರವಾನಗಿಯನ್ನು ನವೀಕರಿಸಲು MHA ನಿರಾಕರಿಸಿದ ಕೆಲವೇ ದಿನಗಳ ನಂತರ ಈ ವಿಚಾರ ಬಹಿರಂಗವಾಗಿದೆ.

ವಿದೇಶಿ ದೇಣಿಗೆ ಮತ್ತು ಎನ್ಜಿಓಗಳು

  • ದೇಶದಲ್ಲಿ ಎಫ್‌ಸಿಆರ್‌ಎ ಅಡಿಯಲ್ಲಿ ನೋಂದಣಿ ಆಗಿರುವ ಎನ್‌ಜಿಒಗಳ ಸಂಖ್ಯೆಯು 22 ಸಾವಿರಕ್ಕಿಂತಲೂ ಹೆಚ್ಚು.

ಆರೋಪವೇನು ?

  • ದೊಡ್ಡ ಎನ್‌ಜಿಒಗಳು ತಳ ಮಟ್ಟದಲ್ಲಿ ಕೆಲಸ ಮಾಡುವ ಸಣ್ಣ ಎನ್‌ಜಿಒಗಳಿಗೆ ಹಣ ವರ್ಗಾಯಿಸಿ ಅವರ ಮೂಲಕ ತಳಮಟ್ಟದಲ್ಲಿ ಕೆಲಸ ಮಾಡುವುದು ವಾಡಿಕೆ. ಈ ರೀತಿಯ ಕೆಲಸಗಳಿಗೆ ಹೊಸ ನಿಯಮವು ಅಡ್ಡಿ ಮಾಡಿದೆ ಎಂಬ ಆಕ್ಷೇಪ ಆಗ ಕೇಳಿ ಬಂದಿತ್ತು.

ವಿದೇಶಿ ದೇಣಿಗೆ ಹಣ ವರ್ಗಾಯಿಸುವಂತಿಲ್ಲ

  • ‘ವಿದೇಶಿ ದೇಣಿಗೆ (ತಿದ್ದುಪಡಿ) ಮಸೂದೆ 2020’ ಅನ್ನು 2020ರ ಸೆಪ್ಟೆಂಬರ್ 20ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ‘ವಿದೇಶಿ ದೇಣಿಗೆ (ತಿದ್ದುಪಡಿ) ಕಾಯ್ದೆ 2010’ರ ಕೆಲವು ಅಂಶಗಳನ್ನು ಹೊಸ ಮಸೂದೆಯಲ್ಲಿ ಮಾರ್ಪಾಡು ಮಾಡಲಾಗಿತ್ತು. ವ್ಯಕ್ತಿಗಳು, ಸಂಸ್ಥೆಗಳು ಹಾಗೂ ಕಂಪನಿಗಳು ನೀಡಿದ ದೇಣಿಗೆಯ ಸ್ವೀಕಾರ ಹಾಗೂ ಬಳಕೆಯನ್ನು ಈ ಕಾಯ್ದೆ ನಿಯಂತ್ರಿಸುತ್ತದೆ.
  • ವಿದೇಶಿ ದೇಣಿಗೆ ಹಣವನ್ನು ಇತರರಿಗೆ ವರ್ಗಾಯಿಸುವಂತಿಲ್ಲ ಎಂಬ ನಿಯಮವನ್ನು ತಿದ್ದುಪಡಿ ಕಾಯ್ದೆಯಲ್ಲಿ ಅಡಕ ಮಾಡಲಾಗಿದೆ. ವಿದೇಶಿ ದೇಣಿಗೆ ಸ್ವೀಕರಿಸಲು ಅನುಮತಿ ಪಡೆದವರು ಅಥವಾ ನೋಂದಾಯಿಸಿಕೊಂಡವರು ಇತರ ವ್ಯಕ್ತಿಗಳು, ಸಂಸ್ಥೆಗಳು ಅಥವಾ ನೋಂದಾಯಿತ ಕಂಪನಿಗಳಿಗೆ ಹಣವನ್ನು ವರ್ಗ ಮಾಡುವಂತಿಲ್ಲ.

ಹೊಸ ತಿದ್ದುಪಡಿಯಲ್ಲಿ ಏನಿದೆ ?

  • ಕಾಯ್ದೆಯ ಪ್ರಕಾರ, ವಿದೇಶಿ ದೇಣಿಗೆ ಪಡೆಯಲು ಬಯಸುವವರು ‘ವಿದೇಶಿ ದೇಣಿಗೆ ಸ್ವೀಕರಿಸುವ ಉದ್ದೇಶ’ದಿಂದ ಒಂದೇ ಬ್ಯಾಂಕ್‌ ಖಾತೆ ತೆರೆಯಬೇಕು. ‘ಎಫ್‌ಸಿಆರ್‌ಎ ಖಾತೆ’ ಹೆಸರಲ್ಲಿ ನವದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ತೆರೆಯಬೇಕು. ಇದೇ ಖಾತೆಯಲ್ಲಿ ಮಾತ್ರ ವಿದೇಶಿ ದೇಣಿಗೆ ಸ್ವೀಕರಿಸಬೇಕು.
  • ವಿದೇಶಿ ದೇಣಿಗೆ ಹೊರತುಪಡಿಸಿ, ಯಾವುದೇ ಸ್ವರೂಪದ ಠೇವಣಿಯನ್ನು ಈ ಖಾತೆಯಲ್ಲಿ ಮಾಡುವಂತಿಲ್ಲ. ಯಾವುದಾದರೂ ಶೆಡ್ಯೂಲ್ಡ್ ಬ್ಯಾಂಕ್‌ನಲ್ಲಿ ಖಾತೆ ತೆರೆಯಬಹುದು ಎಂಬ 2010ರ ಕಾಯ್ದೆಯ ನಿಯಮವನ್ನು 2020ರಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ಖಾತೆಯಲ್ಲಿ ಸ್ವೀಕರಿಸಿದ ಹಣವನ್ನು ವಿನಿಯೋಗಿಸಲು ಯಾವುದಾದರೂ ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಯಬಹುದು.
  • ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ, ಪತ್ರಿಕೆಗಳ ಸಂಪಾದಕರು ಅಥವಾ ಪ್ರಕಾಶಕರು, ನ್ಯಾಯಾಧೀಶರು, ಶಾಸನಸಭೆಯ ಸದಸ್ಯರು, ರಾಜಕೀಯ ಪಕ್ಷಗಳ ಸದಸ್ಯರು ವಿದೇಶಿ ದೇಣಿಗೆ ಸ್ವೀಕರಿಸುವಂತಿಲ್ಲ.
  • 2020ರ ತಿದ್ದುಪಡಿ ಕಾಯ್ದೆಯು ಸರ್ಕಾರಿ ನೌಕರರು ದೇಣಿಗೆ ಸ್ವೀಕರಿಸುವಂತಿಲ್ಲ ಎಂದು ಹೇಳಿದೆ. ಸರ್ಕಾರಿ ಕೆಲಸದಲ್ಲಿರುವ ಅಥವಾ ಸರ್ಕಾರದ ವೇತನ ಪಡೆಯುವ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಕೆಲಸ ನಿರ್ವಹಿಸಿದ್ದಕ್ಕಾಗಿ ಗೌರವಧನ ಪಡೆಯುವವರು ಈ ವ್ಯಾಪ್ತಿಯಲ್ಲಿ ಬರುತ್ತಾರೆ.
  • ವಿದೇಶಿ ದೇಣಿಗೆ ಪಡೆಯುವವರು ಅನುಮತಿ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು. ಹೊಸದಾಗಿ ಅರ್ಜಿ ಸಲ್ಲಿಸುವರು, ಅನುಮತಿ ಪಡೆಯುವವರು ಅಥವಾ ನವೀಕರಣಕ್ಕೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಆಧಾರ್ ಸಂಖ್ಯೆ ಒದಗಿಸಬೇಕು. ಎಲ್ಲ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಾಹಕರ ಆಧಾರ್ ಸಂಖ್ಯೆಗಳನ್ನು ಒದಗಿಸಬೇಕು. ವಿದೇಶಿ ಪ್ರಜೆಯಾಗಿದ್ದರೆ, ಅವರು ತಮ್ಮ ಪಾಸ್‌ಪೋರ್ಟ್‌ ಅಥವಾ ಭಾರತದ ಸಾಗರೋತ್ತರ ನಾಗರಿಕ ಗುರುತಿನ ಕಾರ್ಡ್ ಒದಗಿಸಬೇಕು.
  • ವಿದೇಶಿ ದೇಣಿಗೆ ಬಳಕೆಯಲ್ಲಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ, ಬಳಕೆಯಾಗದೇ ಉಳಿದ ಹಣವನ್ನು ಬಳಸಲು ಅಥವಾ ಸ್ವೀಕರಿಸಬೇಕಿರುವ ಹಣವನ್ನು ಸ್ವೀಕರಿಸಲು ಕೇಂದ್ರ ಸರ್ಕಾರದ ಅನುಮತಿ ಅಗತ್ಯ. ಬಳಕೆಯಾಗದೇ ಉಳಿದಿರುವ ಹಣವನ್ನು ಬಳಕೆ ಮಾಡುವುದರ ಮೇಲೆ ಸರ್ಕಾರ ನಿರ್ಬಂಧ ವಿಧಿಸಬಹುದು. ಅಂದರೆ ಆ ವ್ಯಕ್ತಿಯ ವಿರುದ್ಧ ತನಿಖೆ ನಡೆಯುತ್ತಿದ್ದು ವಿಚಾರಣೆ ಬಾಕಿಯಿದ್ದರೆ ಅಥವಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಇದ್ದರೆ, ಸರ್ಕಾರ ನಿರ್ಬಂಧ ವಿಧಿಸಬಹುದು.
  • ವಿದೇಶಿ ದೇಣಿಗೆ ಪಡೆಯುವ ಪರವಾನಗಿ ಅವಧಿ ಮುಗಿಯುವ ಆರು ತಿಂಗಳ ಒಳಗೆ ನವೀಕರಣ ಮಾಡಿಕೊಳ್ಳಬೇಕು. ನವೀಕರಣ ಮಾನ್ಯ ಮಾಡುವ ಮುನ್ನ ಸರ್ಕಾರವು ಅರ್ಜಿದಾರರ ಮೇಲೆ ತನಿಖೆ ನಡೆಸಬಹುದು. ಸಂಸ್ಥೆ ಅಥವಾ ವ್ಯಕ್ತಿಯು ಬೇನಾಮಿ ಅಲ್ಲ; ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುವುದಕ್ಕಾಗಿ ಅಥವಾ ಮತಾಂತರ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಕಾನೂನು ಕ್ರಮಕ್ಕೆ ಒಳಗಾಗಿಲ್ಲ; ಹಣ ದುರುಪಯೋಗ ವಿಚಾರದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿಲ್ಲ – ಎಂಬುದನ್ನು ಸರ್ಕಾರ ಖಚಿತಪಡಿಸಿಕೊಂಡ ಬಳಿಕ ನವೀಕರಣಕ್ಕೆ ಅನುಮತಿ ನೀಡಬಹುದು.
  • ವಿದೇಶಿ ದೇಣಿಗೆ ಹಣವನ್ನು ಆಡಳಿತಾತ್ಮಕ ಉದ್ದೇಶಕ್ಕೆ ಬಳಸುವುದರ ಮೇಲೆ ಇದ್ದ ಪ್ರಮಾಣದ ಮಿತಿಯನ್ನು ಇಳಿಸಲಾಗಿದೆ. 2010ರ ತಿದ್ದುಪಡಿ ಕಾಯ್ದೆಯಲ್ಲಿ ಶೇ 50ರಷ್ಟು ಹಣವನ್ನು ಆಡಳಿತಾತ್ಮಕ ಉದ್ದೇಶಕ್ಕೆ ಬಳಸಲು ಅನುಮತಿ ಇತ್ತು. ಈ ಪ್ರಮಾಣವನ್ನು 2020ರ ತಿದ್ದುಪಡಿ ಕಾಯ್ದೆಯಲ್ಲಿ ಶೇ 20ಕ್ಕೆ ನಿಗದಿಪಡಿಸಲಾಗಿದೆ.