Published on: March 25, 2023
ವಿಶ್ವ ಕ್ಷಯ ರೋಗ ದಿನ
ವಿಶ್ವ ಕ್ಷಯ ರೋಗ ದಿನ
ಸುದ್ದಿಯಲ್ಲಿ ಏಕಿದೆ? ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 24ರಂದು ವಿಶ್ವ ಕ್ಷಯ ರೋಗ ದಿನವನ್ನು ಆಚರಿಸಲಾಗುತ್ತದೆ.
ಏನಿದು ಕ್ಷಯ ರೋಗ?
- ಟಿಬಿ ಎಂದು ಕರೆಸಿಕೊಳ್ಳುವ ಕ್ಷಯರೋಗವು ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ಹೆಚ್ಚಾಗಿ ಶ್ವಾಸಕೋಶಕ್ಕೆ ಹಾನಿ ಮಾಡುವ ಇದನ್ನು ಪಲ್ಮನರಿ ಕ್ಷಯರೋಗ ಎಂದು ಕರೆಯಲಾಗುತ್ತದೆ. ದೇಹದ ಇತರ ಭಾಗಗಳಿಗೂ ಇದು ಹರಡುತ್ತದೆ. ಎಚ್ಐವಿ/ಏಡ್ಸ್ ಹೊರತುಪಡಿಸಿದರೆ ಅತಿ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಳ್ಳುವ ಕಾಯಿಲೆಯಾಗಿದೆ.
ಕಂಡು ಹಿಡಿದವರು
- ಜರ್ಮನ್ನ ರಾಬರ್ಟ್ ಕಾಕ್ ಕ್ಷಯರೋಗ ಕಂಡು ಹಿಡಿದರು. 1843ರಲ್ಲಿ ಜನಿಸಿದ ರಾಬರ್ಟ್, ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವಾಗ ಅವರಿದ್ದ ಪ್ರದೇಶದಲ್ಲಿ ಕುರಿಗಳು ವಿಚಿತ್ರ ರೋಗದಿಂದ ಸಾಯಲಾರಂಭಿಸಿದವು. ರಾಬರ್ಟ್ ಕುರಿಗಳ ಗಲ್ಮವನ್ನು ಸೂಕ್ಷ್ಮದರ್ಶಕ ಯಂತ್ರದಲ್ಲಿ ಪರೀಕ್ಷಿಸಿದಾಗ ಕಟ್ಟೆಯಾಕಾರದ ಅಸಂಖ್ಯಾತ ಸೂಕ್ಷ್ಮಕಣಗಳು ವಿಭಜನೆಗೊಂಡು ವೃದ್ಧಿಯಾಗುತ್ತಿರುವುದನ್ನು ಗಮನಿಸಿ ಅದಕ್ಕೆ ಅಂಥ್ರಾಕ್ಸ್ ಬ್ಯಾಸಿಲೈ ಎಂದು ನಾಮಕರಣ ಮಾಡಿದರು. ರಾಬರ್ಟ್ 1882ರ ಮಾರ್ಚ್ 24ರಂದು ಬರ್ಲಿನ್ನಿನ ಫಿಸಿಯೋಲಾಜಿಕಲ್ ಸೊಸೈಟಿ ವತಿಯಿಂದ ನಡೆದ ವಿಜ್ಞಾನಗೋಷ್ಠಿಯಲ್ಲಿ ವಿಶಿಷ್ಟ ಬಗೆಯ ಕ್ರಿಮಿಯಿಂದ ಕ್ಷಯರೋಗ ಉಂಟಾಗುತ್ತದೆ ಎಂದು ಪ್ರಯೋಗಸಮ್ಮತವಾಗಿ ಸಾಬೀತು ಮಾಡಿ ತೋರಿಸಿದರು. ರಾಬರ್ಟ್ ತಾವು ಕಂಡುಹಿಡಿದ ಬ್ಯಾಕ್ಟೀರಿಯಾಕ್ಕೆ ಮೈಕ್ರೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್ ಎಂದು ನಾಮಕರಣ ಮಾಡಿದರು.
ರೋಗ ಹೇಗೆ ಹರಡುತ್ತದೆ
- ಶ್ವಾಸಕೋಶದ ಕ್ಷಯದಿಂದ ನರಳುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ, ಉಗುಳಿದಾಗ ಹೊರಬರುವ ಸೂಕ್ಷ ್ಮ ದ್ರವ ತುಂತುರುಗಳ ಮೂಲಕ ಸೂಕ್ಷ್ಮ ಜೀವಿಗಳು ಇನ್ನೊಬ್ಬನ ದೇಹಕ್ಕೆ ಸೇರಿ ಆರೋಗ್ಯವಂತ ವ್ಯಕ್ತಿಗೆ ಸೋಂಕು ತಗಲುತ್ತದೆ.
- ಮಕ್ಕಳಲ್ಲಿ, ಮದ್ಯವ್ಯಸನಿಗಳಿಗೆ, ಏಡ್ಸ್ ಸೋಂಕು ಇರುವ ವ್ಯಕ್ತಿಗಳಲ್ಲಿ, ಮಧುಮೇಹ ರೋಗ ಇರುವವರಿಗೆ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
- ಬಡತನ, ಅಪೌಷ್ಟಿಕತೆ, ಕಾಯಿಲೆ ಬಗ್ಗೆ ಅಜ್ಞಾನ, ಪರಿಸರ ಮಾಲಿನ್ಯ, ವಿವೇಚನೆ ಇಲ್ಲದೆ ಎಲ್ಲೆಂದರಲ್ಲಿ ಉಗುಳುವ, ಸೀನುವ, ಕೆಮ್ಮುವ ಅಭ್ಯಾಸ, ಕಾಯಿಲೆಯನ್ನು ಒಪ್ಪಿಕೊಳ್ಳದಿರುವುದು,ಜೀವನ ಶೈಲಿ, ಕೈಗಾರಿಕೀಕರಣ, ಗಣಿಗಾರಿಕೆ, ಬೀಡಿ ಸಿಗರೇಟು ಸೇವನೆ ಕೂಡ ಕ್ಷಯ ರೋಗಕ್ಕೆ ಪ್ರಮುಖ ಕಾರಣಗಳಾಗಿವೆ.
ರೋಗ ಲಕ್ಷಣಗಳು
- ಸಂಜೆ ವೇಳೆ ಜ್ವರ, ಎರಡು ವಾರ ಅಥವಾ ಅದಕ್ಕೂ ಹೆಚ್ಚಿನ ದಿನದಿಂದ ಕಫ ಸಹಿತ ಕೆಮ್ಮು, ಹಸಿವಿಲ್ಲದೇ ದೇಹದ ತೂಕ ಕಡಿಮೆಯಾಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ . ಸಮರ್ಪಕ ಹಾಗೂ ನಿರಂತರ ವೈದ್ಯಕೀಯ ಚಿಕಿತ್ಸೆಯನ್ನು ಪಡೆದರೆ ಇದು ಸಂಪೂರ್ಣವಾಗಿ ಗುಣಪಡಿಸಬಹುದಾದ ಕಾಯಿಲೆಯಾಗಿದೆ .