Published on: September 19, 2022

ವಿಶ್ವ ಡೈರಿ ಶೃಂಗಸಭೆ 2022ʼ

ವಿಶ್ವ ಡೈರಿ ಶೃಂಗಸಭೆ 2022ʼ

ಸುದ್ದಿಯಲ್ಲಿ ಏಕಿದೆ?

ಸುಮಾರು 48 ವರ್ಷಗಳ ನಂತರ ವಿಶ್ವ ಡೈರಿ ಶೃಂಗಸಭೆಯನ್ನು ಭಾರತದಲ್ಲಿ ಆಯೋಜಿಸಲಾಗುತ್ತಿದೆ. ಹಲವು ವಿಚಾರಗಳಿಂದ ವಿಶೇಷವಾಗಿರುವ ಈ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಗುಜರಾತ್​ನ ‘ಬನ್ನಿ’ ಎಮ್ಮೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಮುಖ್ಯಾಂಶಗಳು

  • ಎಲ್ಲಿ ನಡೆಯುತ್ತಿದೆ? ಗ್ರೇಟರ್ ನೋಯ್ಡಾದ `ಇಂಡಿಯಾ ಎಕ್ಸ್‌ಪೋ ಸೆಂಟರ್ ಮತ್ತು ಮಾರ್ಟ್ʼನಲ್ಲಿ ನಡೆಯಲಿದೆ.
  • ಶೃಂಗಸಭೆಯ ವಿಷಯ: ಸೆಪ್ಟೆಂಬರ್ 12ರಿಂದ 15ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಶೃಂಗಸಭೆಯು ‘ಪೌಷ್ಟಿಕಾಂಶ ಮತ್ತು ಜೀವನೋಪಾಯಕ್ಕಾಗಿ ಹೈನುಗಾರಿಕೆ’ ಎಂಬ ವಿಷಯವನ್ನು ಆಧರಿಸಿದೆ.
  • ಯಾರು ಭಾಗವಹಿಸಲಿದ್ದಾರೆ? ಕೈಗಾರಿಕೋದ್ಯಮಿಗಳು, ತಜ್ಞರು, ರೈತರು ಮತ್ತು ನೀತಿ ನಿರೂಪಕರು ಸೇರಿದಂತೆ ಜಾಗತಿಕ ಮತ್ತು ಭಾರತೀಯ ಡೈರಿವಲಯದವರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
  • ʻಐಡಿಎಫ್ ಡಬ್ಲ್ಯೂಡಿಎಸ್-2022ʼದಲ್ಲಿ 50 ದೇಶಗಳಿಂದ ಸುಮಾರು 1500 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇಂತಹ ಹಿಂದಿನ ಶೃಂಗಸಭೆಯು ಸುಮಾರು ಅರ್ಧ ಶತಮಾನದ ಹಿಂದೆ 1974ರಲ್ಲಿ ಭಾರತದಲ್ಲಿ ನಡೆದಿತ್ತು.

ಉಪಯೋಗ

  • ಈ ಶೃಂಗಸಭೆಯು ಭಾರತೀಯ ಹೈನುಗಾರರಿಗೆ ಜಾಗತಿಕವಾದ ಅತ್ಯುತ್ತಮ ಕಾರ್ಯವಿಧಾನಗಳ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ.
  • 4 ದಿನಗಳ ಈ ಸಮ್ಮೇಳನದಲ್ಲಿ ದೇಶ-ವಿದೇಶಗಳ ಖ್ಯಾತ ತಜ್ಞರು ರೈತರೊಂದಿಗೆ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಇದರೊಂದಿಗೆ ರೈತ ಬಂಧುಗಳಿಗೆ ಸಲಹೆ ಸೂಚನೆಗಳನ್ನು ನೀಡಲಿದ್ದು, ಇದರಿಂದ ಹಾಲಿನ ವ್ಯಾಪಾರದಿಂದ ಗರಿಷ್ಠ ಆದಾಯ ಗಳಿಸಬಹುದಾಗಿದೆ.

ಭಾರತೀಯ ಡೈರಿ ಉದ್ಯಮ

  • ಭಾರತೀಯ ಹೈನುಗಾರಿಕೆ ಉದ್ಯಮವು ಸಣ್ಣ ಮತ್ತು ಅತಿಸಣ್ಣ ಹೈನುಗಾರರನ್ನು, ವಿಶೇಷವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಸಹಕಾರಿ ಮಾದರಿಯನ್ನು ಆಧರಿಸಿರುವುದರಿಂದ ಅನನ್ಯವೆನಿಸಿದೆ.
  • ಕೇಂದ್ರ ಸರಕಾರವು ಹೈನುಗಾರಿಕೆ ಕ್ಷೇತ್ರದ ಸುಧಾರಣೆಗಾಗಿ ಅನೇಕ ಉಪಕ್ರಮಗಳನ್ನು ಕೈಗೊಂಡಿದ್ದು, ಇದರ ಪರಿಣಾಮವಾಗಿ ಕಳೆದ ಎಂಟು ವರ್ಷಗಳಲ್ಲಿ ಹಾಲಿನ ಉತ್ಪಾದನೆಯು ಶೇ.44 ಕ್ಕೂ ಅಧಿಕ ಪ್ರಮಾಣದಲ್ಲಿ ವೃದ್ಧಿಸಿದೆ. ಜಾಗತಿಕ ಹಾಲಿನ ಉತ್ಪಾದನೆಯಲ್ಲಿ ಸುಮಾರು 23 ಪ್ರತಿಶತದಷ್ಟಿರುವ, ವಾರ್ಷಿಕವಾಗಿ ಸುಮಾರು 210 ದಶಲಕ್ಷ ಟನ್‌ ಹಾಲು ಉತ್ಪಾದಿಸುವ ಮತ್ತು 8 ಕೋಟಿಗೂ ಹೆಚ್ಚು ಹೈನುಗಾರರನ್ನು ಸಬಲೀಕರಣಗೊಳಿತ್ತಿರುವ ಭಾರತೀಯ ಡೈರಿ ಉದ್ಯಮದ ಯಶೋಗಾಥೆಯನ್ನು ʻಐಡಿಎಫ್ ಡಬ್ಲ್ಯೂಡಿಎಸ್-2022ʼದಲ್ಲಿ ಪ್ರದರ್ಶಿಸಲಾಗುವುದು.

ಬನ್ನಿ ಎಮ್ಮೆಯ ವಿಶೇಷತೆ ಏನು?

  • ಬನ್ನಿ ಎಮ್ಮೆ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿಯೂ ಬದುಕಬಲ್ಲದು. ಬನ್ನಿ ಎಮ್ಮೆಗಳು ಕಚ್ ಮರುಭೂಮಿ ಮತ್ತು ಅಲ್ಲಿನ ಪರಿಸ್ಥಿತಿಗಳೊಂದಿಗೆ ಬೆರೆತುಕೊಂಡಿದ್ದು, ಕಚ್‌ನ ಪ್ರದೇಶಗಳಲ್ಲಿ ಹಗಲಿನಲ್ಲಿ ತೀವ್ರವಾದ ಸೂರ್ಯನ ಬೆಳಕು ಇರುತ್ತದೆ. ಇದರಿಂದ ತಾಪಮಾನ ಹೆಚ್ಚಿರುತ್ತದೆ, ಇಂತಹ ಪರಿಸ್ಥಿತಿಯಲ್ಲಿ ಬನ್ನಿ ಎಮ್ಮೆ ರಾತ್ರಿಯ ಕಡಿಮೆ ತಾಪಮಾನದಲ್ಲಿ ಮೇಯಲು ಹೊರಬರುತ್ತದೆ. ಆ ವೇಳೆ ದನ ಕಾಯುವವರು ಜೊತೆಗಿರುವುದಿಲ್ಲ. ಹೀಗಿದ್ದರೂ ಈ ಎಮ್ಮೆಗಳು ಹಳ್ಳಿಗಳ ಸಮೀಪವಿರುವ ಹುಲ್ಲುಗಾವಲುಗಳಿಗೆ ತಾವೇ ಹೋಗುತ್ತವೆ
  • ಮರುಭೂಮಿ ಪ್ರದೇಶಗಳಲ್ಲಿ ನೀರು ವಿರಳ, ಹೀಗಿರುವಾಗ ಈ ಜಾತಿಯ ಎಮ್ಮೆಗಳಿಗೆ ಕಡಿಮೆ ನೀರಿನ ಅವಶ್ಯಕತೆ ಇರುತ್ತದೆ. ಶುಷ್ಕ ವಾತಾವರಣದಲ್ಲಿಯೂ ಹೆಚ್ಚು ಹಾಲು ಉತ್ಪಾದಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಈ ಜಾತಿಯ ಎಮ್ಮೆ ಹೆಚ್ಚು ಚಳಿಗಾಲ ಮತ್ತು ಹೆಚ್ಚು ಶಾಖ ಎರಡನ್ನೂ ಸಹಿಸಿಕೊಳ್ಳಬಲ್ಲದು.

2021 ರಲ್ಲಿ ಐವಿಎಫ್ ತಂತ್ರಜ್ಞಾನದೊಂದಿಗೆ ಎಮ್ಮೆ ಮರಿ ಜನನ

  • ಗುಜರಾತಿನ ಕಚ್ ಪ್ರದೇಶದ ಪ್ರಮುಖ ಜಾತಿಯ ಎಮ್ಮೆ ‘ಬನ್ನಿ’ಯೊಂದು ಇಲ್ಲಿನ ಗಿರ್ ಸೋಮನಾಥ್ ಜಿಲ್ಲೆಯ ರೈತರೊಬ್ಬರ ಮನೆಯಲ್ಲಿ ಐವಿಎಫ್ ತಂತ್ರದ ಮೂಲಕ ಜನಿಸಿದೆ.