Published on: September 21, 2023
ವಿಶ್ವ ಪಾರಂಪರಿಕ ತಾಣಗಳ ಪಟ್ಟಿ
ವಿಶ್ವ ಪಾರಂಪರಿಕ ತಾಣಗಳ ಪಟ್ಟಿ
ಸುದ್ದಿಯಲ್ಲಿ ಏಕಿದೆ? ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಬೇಲೂರು ಚನ್ನಕೇಶವ ದೇವಾಲಯ, ಹಳೆಬೀಡು ಹೊಯ್ಸಳೇಶ್ವರ ದೇವಾಲಯ ಮತ್ತು ಮೈಸೂರು ಜಿಲ್ಲೆಯಲ್ಲಿರುವ ಸೋಮನಾಥಪುರದ ಚನ್ನಕೇಶವ ದೇವಾಲಯಗಳಿಗೆ ವಿಶ್ವ ಪರಂಪರೆಯ ಸ್ಥಾನಮಾನಗಳನ್ನು ನೀಡಿದೆ.
ಮುಖ್ಯಾಂಶಗಳು
- ಈ ತಾಣಗಳು ಈ ಹಿಂದೆ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿದ್ದವು. ಇದೀಗ ಅಧಿಕೃತವಾಗಿ ಘೋಷಿಸಲಾಗಿದೆ.
- ಬೇಲೂರಿನ ಚನ್ನಕೇಶವ ದೇವಾಲಯ ಮತ್ತು ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನಗಳು ಕ್ರಿಶ 1110ರಿಂದ 1142 ನಿರ್ಮಾಣಗೊಂಡಿವೆ.
- ರಾಜ್ಯದ ನಾಲ್ಕನೇ ತಾಣ: ಬೇಲೂರು, ಹಳೆಬೀಡು, ಸೋಮನಾಥಪುರ ದೇಗುಲಗಳು ಯುನೆಸ್ಕೋ ಪಟ್ಟಿಗೆ ನಾಲ್ಕನೇ ತಾಣವಾಗಿ ಸೇರ್ಪಡೆಗೊಂಡಿವೆ. ರಾಜ್ಯದ ಪಶ್ಚಿಮಘಟ್ಟ ಪ್ರದೇಶ, ಹಂಪೆ, ಪಟ್ಟದಕಲ್ಲು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
ಬೇಲೂರಿನಲ್ಲಿರುವ ಹೊಯ್ಸಳರ ಚೆನ್ನಕೇಶವ ದೇವಾಲಯ
- ದೇವಾಲಯವು ಸಂಕೀರ್ಣವಾದ ಕೆತ್ತನೆಗಳು, ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಯಗಚಿ ನದಿಯ ದಡದಲ್ಲಿರುವ ‘ಬೇಲೂರು’ ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇಲ್ಲಿ ದೊರೆತ ಶಾಸನಗಳ ಪ್ರಕಾರ, ಬೇಲೂರನ್ನು ಹಿಂದೆ ವೇಲಾಪುರಿ ಎಂದು ಕರೆಯಲಾಗುತ್ತಿತ್ತು.
- ಹೊಯ್ಸಳರು ಆರಂಭದಲ್ಲಿ ಚಾಲುಕ್ಯರ ನಿಯಂತ್ರಣದಲ್ಲಿದ್ದರು. ಚಾಲುಕ್ಯರ ಪತನದ ನಂತರ ತಮ್ಮದೇ ರಾಜ್ಯ ನಿರ್ಮಿಸಿಕೊಂಡರು. ಹೊಯ್ಸಳರು ಹಳೆಬೀಡನ್ನು ಸಹ ಮೊದಲು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಅಲ್ಲಿ ಅವರು 150 ವರ್ಷಗಳ ಕಾಲ ಆಳಿದರು. ಆದರೆ ಇದನ್ನು 14 ನೇ ಶತಮಾನದಲ್ಲಿ ಮಲಿಕ್ ಕಾಫೂರ್ ಆಕ್ರಮಿಸಿ, ಕೊಳ್ಳೆ ಹೊಡೆದನು. ಹೀಗಾಗಿ, ಹೊಯ್ಸಳರು ತಮ್ಮ ಆಡಳಿತವನ್ನು ಬೇಲೂರಿಗೆ ವರ್ಗಾಯಿಸಿದರು.
- ವಿಷ್ಣುವಿನ 24 ಅವತಾರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಈ ಭವ್ಯ ದೇವಾಲಯವನ್ನು ವಿಜಯನಾರಾಯಣನಿಗೆ ಅರ್ಪಿಸಲಾಗಿದೆ.
- ಕ್ರಿ.ಶ 1117ರಲ್ಲಿ ತಲಕಾಡಿನಲ್ಲಿ ಚೋಳರ ವಿರುದ್ಧ ಜಯ ಸಾಧಿಸಿದ್ದನ್ನು ಆಚರಿಸಲು ಇದನ್ನು ರಾಜ ವಿಷ್ಣುವರ್ಧನನು ನಿರ್ಮಿಸಿದನು. ದೇವಾಲಯವನ್ನು ಪೂರ್ಣಗೊಳಿಸಲು 103 ವರ್ಷಗಳು ಬೇಕಾದವು. ವಿಷ್ಣುವರ್ಧನ ಮೊಮ್ಮಗ ಎರಡನೇ ವೀರ ಬಲ್ಲಾಳ ಈ ಕೆಲಸವನ್ನು ಪೂರ್ಣಗೊಳಿಸಿದ.
- ನಕ್ಷತ್ರಾಕಾರದ ವೇದಿಕೆಯ ಮೇಲೆ ನಿಂತಿರುವ ಈ ದೇವಾಲಯಕ್ಕೆ ಮೂರು ದ್ವಾರಗಳಿವೆ. ಶ್ರೀ ಚೆನ್ನಕೇಶವನ ಪತ್ನಿ ಸೌಮ್ಯನಾಯಕಿ ಮತ್ತು ರಂಗನಾಯಕಿಗೆ ಇನ್ನೂ ಎರಡು ದೇವಾಲಯಗಳಿವೆ. ದೇವಾಲಯದಲ್ಲಿ ಪುಷ್ಕರ್ಣಿ ಸಹ ಇದ್ದು, ಪ್ರವೇಶದ್ವಾರದಲ್ಲಿ ದ್ರಾವಿಡ ಶೈಲಿಯ ರಾಜಗೋಪುರ ಇದೆ.
ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನ
- ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನವು ಒಂದು ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಳೇಬೀಡು ಪಟ್ಟಣದಲ್ಲಿರುವ ಶಿವನಿಗೆ ಅರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ.
- ಇತಿಹಾಸ:ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನವನ್ನು ಮುಖ್ಯ ವಾಸ್ತುಶಿಲ್ಪಿ ಕೇತಮಾಲ 12 ನೇ ಶತಮಾನದಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನ ಅವರ ಆದೇಶದ ಮೇರೆಗೆ ನಿರ್ಮಿಸಿದರು.
- ಹೊಯ್ಸಳೇಶ್ವರ ದೇವಸ್ಥಾನವನ್ನು ದ್ವಾರಸಮುದ್ರ ಎಂಬ ಮಾನವ ನಿರ್ಮಿತ ಸರೋವರದ ತೀರದಲ್ಲಿ ನಿರ್ಮಿಸಲಾಗಿದೆ. ದೆಹಲಿ ಸುಲ್ತಾನರ ಸೈನ್ಯದ ದಾಳಿಯಿಂದ ಹೊಯ್ಸಳೇಶ್ವರ ದೇವಸ್ಥಾನಕ್ಕೆ ಹಾನಿಯಾಯಿತು.
- ವಿನ್ಯಾಸ: ಹೊಯ್ಸಳೇಶ್ವರ ದೇವಸ್ಥಾನವು ಹೊಯ್ಸಳ ಶೈಲಿಯ ವಾಸ್ತುಶಿಲ್ಪದಲ್ಲಿದೆ, ನಂದಿ (ಶಿವನ ಅಧಿಕೃತ ವಾಹನ) ಪ್ರತಿಮೆಯು ದೇವಾಲಯವನ್ನು ಹೊರಗಿನಿಂದ ಕಾವಲು ಕಾಯುತ್ತದೆ. ಒಳಾಂಗಣದಲ್ಲಿ ಹೂವುಗಳು ಮತ್ತು ಪ್ರಾಣಿಗಳ ಚಿತ್ರಗಳು, ಹಿಂದೂ ಮಹಾಕಾವ್ಯಗಳ ಕೆತ್ತನೆಗಳು ಮತ್ತು ಶಿಲಾ ಬಾಲಿಕೆಯರ ಕೆತ್ತನೆಯಿದೆ.
ಸೋಮನಾಥಪುರ ಚೆನ್ನಕೇಶವ ದೇವಾಲಯ
- ಸೋಮನಾಥಪುರದಲ್ಲಿ ಕಾವೇರಿ ನದಿಯ ದಡದಲ್ಲಿರುವ ಚೆನ್ನಕೇಶವ ದೇವಾಲಯವು ದಕ್ಷಿಣ ಭಾರತದ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ.
- ಸೋಮನಾಥಪುರವು ಮೈಸೂರು ನಗರದಿಂದ 38 ಕಿಮೀ ದೂರದಲ್ಲಿದೆ. ಕ್ರಿ.ಶ 1258 ರಲ್ಲಿ, ಹೊಯ್ಸಳ ರಾಜ ನರಸಿಂಹ III ರ ಸೇನಾಪತಿಯಾದ ಸೋಮನಾಥರಿಂದ ನಿರ್ಮಿಸಲ್ಪಟ್ಟ ಈ ದೇವಾಲಯವು ಹೊಯ್ಸಳ ವಾಸ್ತುಶಿಲ್ಪಕ್ಕೆ ಒಂದು ಸೊಗಸಾದ ಉದಾಹರಣೆಯಾಗಿದೆ.
- ಕೇಶವ ದೇವಾಲಯ ಎಂದೂ ಕರೆಯಲ್ಪಡುವ ಇದು ವಿಷ್ಣುವಿನ ರೂಪಗಳಾದ ಜನಾರ್ದನ ಮತ್ತು ವೇಣುಗೋಪಾಲನ ಪ್ರತಿಮೆಯನ್ನು ಹೊಂದಿದೆ.