ವಿಶ್ವ ಶ್ರವಣ ದಿನ 2023
ವಿಶ್ವ ಶ್ರವಣ ದಿನ 2023
ಸುದ್ದಿಯಲ್ಲಿ ಏಕಿದೆ? ಪ್ರತಿ ವರ್ಷ ಮಾ.3 ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ.
ಮುಖ್ಯಾಂಶಗಳು
- ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ವಿಶ್ವದಾದ್ಯಂತ 430 ದಶ ಲಕ್ಷ ಜನರು ಶ್ರವಣ ದೋಷದಿಂದ ಬಳಲುತ್ತಿದ್ದಾರೆ. 2050 ರ ವೇಳೆಗೆ ಈ ಸಂಖ್ಯೆ 700 ದಶಲಕ್ಷ ದಾಟುವ ಆತಂಕವಿದೆ.
- ಕಾರ್ಯಕ್ರಮಗಳನ್ನು ಹೊರತುಪಡಿಸಿ, ಶ್ರವಣ ನಷ್ಟಕ್ಕೊಳಗಾದವರ ಸಂಖ್ಯೆ ತಿಳಿಯಲು ಹಾಗೂ ಅಗತ್ಯವಿರುವ ಸಹಾಯ ನೀಡುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆ ವರದಿಯನ್ನು ತಯಾರಿಸುತ್ತದೆ. ಶ್ರವಣ ಯಂತ್ರಗಳು ದುಬಾರಿಯಾಗಿರುತ್ತವೆ. ಅಗತ್ಯವಿರುವ ಜನರಿಗೆ ಇದನ್ನು ಕಡಿಮೆ ದರದಲ್ಲಿ ನೀಡುವುದು ಕೂಡ ಈ ವರದಿಯ ಹಾಗೂ ಈ ದಿನಾಚರಣೆಯ ಉದ್ದೇಶವಾಗಿದೆ.
- ಧ್ಯೇಯ ವಾಕ್ಯ : ‘ಬನ್ನಿ ಕಿವಿ ಮತ್ತು ಶ್ರವಣ ಆರೈಕೆಯನ್ನು ಎಲ್ಲರಿಗಾಗಿ ವಾಸ್ತವವಾಗಿಸೋಣ’
ಉದ್ದೇಶ
- ಶ್ರವಣದೋಷವನ್ನು ತಡೆಗಟ್ಟುವುದು ಮತ್ತು ಜಾಗೃತಿ ಮೂಡಿಸುವುದು. ಜನರಿಗೆ ಕಿವಿ ಸಮಸ್ಯೆ ಬಗ್ಗೆ ಶಿಕ್ಷಣ ನೀಡುವುದು ಮತ್ತು ಅವರ ಹಕ್ಕುಗಳ ಬಗ್ಗೆ ಅವರಿಗೆ ಕಲಿಸುವುದು.
ಕಿವುಡುತನಕ್ಕೆ ಕಾರಣ :
- ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಶ್ರವಣ ಸಮಸ್ಯೆಗೆ ಮುಖ್ಯ ಕಾರಣವೆಂದರೆ ದೀರ್ಘಕಾಲದವರೆಗೆ ದೊಡ್ಡ ಧ್ವನಿಯಲ್ಲಿ,ಇಯರ್ ಫೋನ್ ಮೂಲಕ ಸಂಗೀತವನ್ನು ಕೇಳುವುದು. ಜಗತ್ತಿನಾದ್ಯಂತ ಶೇಕಡಾ 60ರಷ್ಟು ಯುವಕರಲ್ಲಿ ಈ ಸಮಸ್ಯೆ ಕಂಡು ಬರುತ್ತಿದೆ.
- ಜೆನೆಟಿಕ್ಸ್, ಜೋರಾದ ಶಬ್ದ, ಸೋಂಕು, ದೀರ್ಘಕಾಲದ ಕಾಯಿಲೆಗಳು ( ಟಿ.ಬಿ, ಕ್ಯಾನ್ಸರ್), ಗರ್ಭಿಣಿಯರಲ್ಲಿ ಉಂಟಾಗುವ ಸೋಂಕುಗಳು, ದೀರ್ಘ ಕಾಲ ತೆಗೆದುಕೊಳ್ಳುವ ಔಷಧಿಗಳಿಂದ, ರಕ್ತ ಸಂಬಂಧದಲ್ಲಿ ಮದುವೆ, ಹೆರಿಗೆ ವೇಳೆ ಸಮಸ್ಯೆ, ಅವಧಿಪೂರ್ವ ಜನನ, ವಯಸ್ಸಿಗೆ ತಕ್ಕಂತೆ ಆಗದ ಬೆಳವಣಿಗೆ, ಜೋರಾದ ಪೆಟ್ಟು ಬೀಳುವುದರಿಂದ, ಕಿವಿಯೊಳಗೆ ಅನವಶ್ಯಕವಾಗಿ ಕಡ್ಡಿಯಂತಹ ವಸ್ತುಗಳನ್ನು ಹಾಕುವುದು.
- ಸಿಗರೇಟ್ ಮತ್ತು ಆಲ್ಕೋಹಾಲ್ ನಿಂದ ಶ್ರವಣ ದೋಷ : ಹೊಸ ಸಂಶೋಧನೆಯ ಪ್ರಕಾರ, ಸಿಗರೇಟ್ ಮತ್ತು ಆಲ್ಕೋಹಾಲ್ ಸಹ ಕಳಪೆ ಶ್ರವಣ ಸಾಮರ್ಥ್ಯಕ್ಕೆ ಕಾರಣವಾಗಬಹುದು.
ಅಮೇರಿಕನ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯಲ್ಲಿ ಸಿಗರೇಟ್ ಸೇವನೆಯು ಶ್ರವಣ ದೋಷದ ಮೇಲೆ ನೇರವಾಗಿ ಪರಿಣಾಮ ಬೀರಬಹುದು ಎಂದು ತಿಳಿದುಬಂದಿದೆ. ಚಿಕ್ಕ ವಯಸ್ಸಿನಲ್ಲಿ ಧೂಮಪಾನ ಮಾಡಿದರೆ, ಕಿವುಡುತನದ ಸಮಸ್ಯೆಯನ್ನು ಯೌವನದಲ್ಲಿಯೇ ಎದುರಿಸಬೇಕಾಗುತ್ತದೆ ಎಂದು ಅಧ್ಯಯನವು ತಿಳಿಸಿದೆ. ಈ ಅಧ್ಯಯನವನ್ನು 15.34 ಲಕ್ಷ ಜನರ ಮೇಲೆ ನಡೆಸಲಾಗಿದ್ದು, ಇವರಲ್ಲಿ 2760 ಜನರು ಕಿವುಡುತನಕ್ಕೆ ಬಲಿಯಾಗಿದ್ದರು. ಶ್ರವಣ ದೋಷಕ್ಕೆ ಬಲಿಯಾದವರಲ್ಲಿ ಹೆಚ್ಚಿನವರು ಸಿಗರೇಟ್ ಸೇದುವವರಾಗಿದ್ದರು
ಶ್ರವಣ ದೋಷ
- ಶ್ರವಣ ದೋಷ ಅಥವಾ ಕಿವುಡುತನವೆಂದ್ರೆ ಒಬ್ಬ ವ್ಯಕ್ತಿ, ಕೇಳುವ ಸಾಮರ್ಥ್ಯವನ್ನು ಕಳೆದುಕೊಳ್ಳುವ ಸ್ಥಿತಿ.
20 ಡಿಎಲ್ ಗಳಿಗಿಂತ ಕಡಿಮೆ ಶಬ್ದವನ್ನು ಯಾರಿಗೆ ಕೇಳಲಾಗುವುದಿಲ್ಲವೋ ಅವರಿಗೆ ಶ್ರವಣ ದೋಷದ ಸಾಧ್ಯತೆ ಇರುತ್ತದೆ. ಯಾವುದೇ ವಯಸ್ಸಿನಲ್ಲಿ ಶ್ರವಣ ದೋಷವು ವಿವಿಧ ಕಾರಣಗಳಿಂದ ಸಂಭವಿಸಬಹುದು.
ಶ್ರವಣ ದೋಷ ಹೇಗೆ ತಡೆಗಟ್ಟುವುದು?
- ನಿಯಮಿತ ಶ್ರವಣ ಪರೀಕ್ಷೆ, ನವಜಾತ ಶಿಶುಗಳಿಗೆ ಶ್ರವಣ ಪರೀಕ್ಷೆ, ಗರ್ಭಿಣಿಯರಿಗೆ ಶ್ರವಣ ಪರೀಕ್ಷೆ, ವಯಸ್ಕರು ಹೆಚ್ಚು ಶಬ್ದವನ್ನು ನಿರಂತರವಾಗಿ ಕೇಳುವುದನ್ನು ಕಡಿಮೆ ಮಾಡುವುದರಿಂದ, ಹೆಚ್ಚು ಶಬ್ದ ಇರುವಲ್ಲಿ (ಕಾರ್ಖಾನೆ] ಕಿವಿಗಳಿಗೆ ಹಿಯರ್ ಪ್ಯಾಡ್ಸ್ ಅಳವಡಿಕೆ, ರಕ್ತ ಸಂಬಂಧದಲ್ಲಿ ಮದುವೆಯಾಗಬಾರದು, ಪ್ರಾಥಮಿಕ ಹಂತದಲ್ಲಿ ಕಿವಿಯ ತೊಂದರೆಗಳನ್ನು ಗುರುತಿಸಿ ಚಿಕಿತ್ಸೆ, ಯಾವುದೇ ಔಷಧಿಗಳನ್ನು ವೈದ್ಯರ ಸಲಹೆಯಿಂದಲೇ ಪಡೆಯುವುದು, ಧೀರ್ಘ ಕಾಲದ ಚಿಕಿತ್ಸಾವಧಿಯಲ್ಲಿ ನಿಯಮಿತವಾಗಿ ಶ್ರವಣ ಪರೀಕ್ಷೆ ಮಾಡಿಸಿಕೊಳ್ಳುವುದು,
ಶ್ರವಣ ದೋಷಕ್ಕೆ ಸರಿಯಾದ ಚಿಕಿತ್ಸೆ
- ಪ್ರಾರಂಭಿಕ ಹಂತದಲ್ಲೇ ಶ್ರವಣ ದೋಷ ಪರೀಕ್ಷೆ, ಗುಗ್ಗೆ ಮತ್ತು ಇತರೆ ಸೋರಿಕೆಯಿದ್ದಲ್ಲಿ ಕಿವಿಯನ್ನು ಸ್ವಚ್ಛಗೊಳಿಸುವುದು ಮತ್ತು ಚಿಕಿತ್ಸೆ ನೀಡುವುದು, ಗಂಟಿನ ತೊಂದರೆ, ಕಿವಿಯ ತಮಟೆಗೆ ಪೆಟ್ಟಾಗಿದ್ದಲ್ಲಿ ಚಿಕಿತ್ಸೆ ನೀಡುವುದು, ಸೋಂಕು ಅಥವಾ ಉರಿಯೂತ ಇದ್ದಲ್ಲಿ ಚಿಕಿತ್ಸೆ ನೀಡುವುದರಿಂದ ಶ್ರವಣ ದೋಷಕ್ಕೆ ಚಿಕಿತ್ಸೆ ಪಡೆಯಬೇಕಿದೆ.
ವಿಶ್ವ ಶ್ರವಣ ದಿನದ ಇತಿಹಾಸ : ಮಾರ್ಚ್ 3, 2007 ರಂದು ಮೊದಲ ಬಾರಿಗೆ ವಿಶ್ವ ಶ್ರವಣ ದಿನವನ್ನು ಆಚರಿಸಲಾಯಿತು. ಆದರೆ ಮೊದಲು ಇದನ್ನು ಅಂತರಾಷ್ಟ್ರೀಯ ಕಿವಿ ಆರೈಕೆ ದಿನ (Ear Care Day) ವೆಂದು ಕರೆಯಲಾಗಿತ್ತು. 2016 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ,ವಿಶ್ವ ಶ್ರವಣ ದಿನ ಎಂದು ಘೋಷಿಸಲು ನಿರ್ಧರಿಸಿತು.
ಶ್ರವಣ ದೋಷ ನಿವಾರಣೆಯಲ್ಲಿ ಕರ್ನಾಟಕ
- ಈ ವಿಶ್ವ ಶ್ರವಣ ದಿನದಂದು, ಎಲ್ಲಾ ಜಿಲ್ಲೆಗಳಲ್ಲಿ ಶ್ರವಣ ತಪಾಸಣಾ ಶಿಬಿರ ನಡೆಸಿ ಚಿಕಿತ್ಸೆ ಒದಗಿಸಲಾಗುವುದು.
- ಕರ್ನಾಟಕ ರಾಜ್ಯ ಸರ್ಕಾರದ ಕಾಕ್ಲಿಯಾರ್ ಇಂಪ್ಲಾಂಟ್ ಯೋಜನೆಯಡಿ, ಇದೇ ವರ್ಷ 115 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇಂತಹ ಕ್ರಮಗಳ ಮೂಲಕ ಕಿವಿಯ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಗಿದೆ.
- ರಾಜ್ಯದಲ್ಲಿ 2008-09 ರಲ್ಲಿ ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ ಜಾರಿಯಾಗಿದ್ದು, ಉಪಕರಣ ಮತ್ತು ಶಸ್ತ್ರಚಿಕಿತ್ಸೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ತರಬೇತಿ ನೀಡಲಾಗುತ್ತಿದೆ.
- ಕಳೆದ 5 ವರ್ಷಗಳಲ್ಲಿ ಎನ್.ಪಿ.ಪಿ.ಸಿ.ಡಿ ಕಾರ್ಯಕ್ರಮ ವಿಭಾಗದಿಂದ, 2,00,305 ಶ್ರವಣ ದೋಷವುಳ್ಳವರನ್ನು ಹಾಗೂ 35,418 ಗಂಭೀರ ಶ್ರವಣ ದೋಷವುಳ್ಳವರನ್ನು ಗುರುತಿಸಲಾಗಿದೆ.
- 5 ವರ್ಷದೊಳಗಿನ 2,381 ಮಕ್ಕಳಲ್ಲಿ ಗಂಭೀರ ಶ್ರವಣ ದೋಷವಿದೆ. ರಾಜ್ಯದ ಎಲ್ಲಾ ಇ.ಎನ್.ಟಿ ತಜ್ಞರ ಸಹಾಯದಿಂದ ಕಿವಿಯ ಸಮಸ್ಯೆಗಳಿಗೆ 10,213 ಶಸ್ತ್ರಚಿಕಿತ್ಸೆ ಮಾಡಲಾಗಿದೆ. 11,857 ಫಲಾನುಭವಿಗಳಿಗೆ ಶ್ರವಣ ಸಾಧನ ನೀಡಲಾಗಿದೆ.
ಕಾಕ್ಲಿಯರ್ ಇಂಪ್ಲಾಂಟ್ ಯೋಜನೆ
- ಎಲ್ಲಾ ಆರೋಗ್ಯ ಕಾರ್ಯಕರ್ತೆಯರಿಗೆ, ಕಿವಿಯ ಆರೈಕೆ, ಪ್ರಥಮ ಚಿಕಿತ್ಸೆ ಹಾಗೂ ತಪಾಸಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಈ ಮೂಲಕ ಕಿವಿಯ ಆರೈಕೆ ಹಾಗೂ ಶ್ರವಣ ಆರೈಕೆಯನ್ನು ಪ್ರಾಥಮಿಕ ಆರೋಗ್ಯ ಸೇವೆಗಳಲ್ಲಿ ವಿಲೀನಗೊಳಿಸಲಾಗುತ್ತಿದೆ.
- 6 ವರ್ಷದೊಳಗಿನ ಮಕ್ಕಳಲ್ಲಿನ ಗಂಭೀರ ಸ್ವರೂಪದ ಶ್ರವಣ ದೋಷದ ನಿವಾರಣೆಗೆ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆ ತರಲಾಗಿದೆ. ಇದರಲ್ಲಿ, ಈ ವರ್ಷ 115 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಉಳಿದ 577 ಫಲಾನುಭವಿಗಳಿಗೆ ವಿವಿಧ ಹಂತದಲ್ಲಿ ಕಾಕ್ಲಿಯಾರ್ ಶಸ್ತ್ರಚಿಕಿತ್ಸೆಗಾಗಿ ತಯಾರಿ ನಡೆಸಲಾಗಿದೆ.