Published on: October 15, 2021
ವೈದ್ಯಕೀಯ ಗರ್ಭಪಾತ ಅವಧಿ
ವೈದ್ಯಕೀಯ ಗರ್ಭಪಾತ ಅವಧಿ
ಸುದ್ಧಿಯಲ್ಲಿ ಏಕಿದೆ? ಕೆಲವು ವರ್ಗಗಳ ಮಹಿಳೆಯರಿಗೆ ಗರ್ಭಪಾತದ ಅವಧಿಯನ್ನು 20 ರಿಂದ 24 ವಾರಗಳಿಗೆ ಹೆಚ್ಚಿಸುವ ಹೊಸ ನಿಯಮಗಳನ್ನೊಳಗೊಂಡ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ.
ಯಾವ ಮಹಿಳೆಯರಿಗೆ ಇದು ಅನ್ವಯಿಸುತ್ತದೆ?
- ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ನಿಯಮಗಳು, 2021 ಕಾಯ್ದೆ ಪ್ರಕಾರ, ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ, ಅಪ್ರಾಪ್ತ ವಯಸ್ಕರು, ಗರ್ಭಾವಸ್ಥೆಯ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಬದಲಾವಣೆ ಆದ ಮಹಿಳೆಯರು (ವಿಧವೆ ಮತ್ತು ವಿಚ್ಛೇದನ) ಮತ್ತು ದೈಹಿಕ ಅಂಗವಿಕಲರಿಗೆ ಗರ್ಭಪಾತದ ಅವಧಿಯನ್ನು 24 ವಾರಗಳಿಗೆ ಹೆಚ್ಚಿಸಲಾಗಿದೆ.
- ಮಾನಸಿಕ ಅಸ್ವಸ್ಥ ಮಹಿಳೆಯರು, ಭ್ರೂಣದ ವಿರೂಪತೆಯ ಪ್ರಕರಣಗಳು ಮತ್ತು ಸರ್ಕಾರ ಘೋಷಿಸಿದ ತುರ್ತು ಪರಿಸ್ಥಿತಿ ಸಂದರ್ಭ ಗರ್ಭ ಧರಿಸಿದವರೂ ಸಹ ಈ ಹೊಸ ನಿಯಮದಡಿಯಲ್ಲಿ ಬರಲಿದ್ದಾರೆ.
- ಮಾರ್ಚ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕಾರ ಪಡೆದ ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಕಾಯಿದೆ, 2021 ರ ಅಡಿಯಲ್ಲಿ ಹೊಸ ನಿಯಮಗಳು ಬರಲಿವೆ.
- ಹೊಸ ನಿಯಮಗಳ ಪ್ರಕಾರ, ಭ್ರೂಣದ ವಿರೂಪತೆಯ ಪ್ರಕರಣಗಳಲ್ಲಿ 24 ವಾರಗಳ ನಂತರ ಗರ್ಭಾವಸ್ಥೆಯನ್ನು ಕೊನೆಗೊಳಿಸಬಹುದೇ ಎಂಬುದನ್ನು ನಿರ್ಧರಿಸಲು ರಾಜ್ಯ ಮಟ್ಟದ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಲಾಗುವುದು. ಮಹಿಳೆ ವೈದ್ಯಕೀಯ ಗರ್ಭಪಾತಕ್ಕೆ ಕೋರಿದರೆ ಆಕೆಯ ಮೆಡಿಕಲ್ ವರದಿಗಳನ್ನು ಪರೀಕ್ಷಿಸುವುದು. ಗರ್ಭಪಾತದ ಬಗ್ಗೆ ಮೂರು ದಿನಗಳಲ್ಲಿ ನಿರ್ಣಯೊಸುವುದು ವೈದ್ಯಕೀಯ ಮಂಡಳಿಯ ಕಾರ್ಯವಾಗಿರುತ್ತದೆ.
ತಿದ್ದುಪಡಿಯ ಅಗತ್ಯವೇನು?
- 2015ರಲ್ಲಿ ಭಾರತೀಯ ವೈದ್ಯಕೀಯ ನೀತಿ ಪತ್ರಿಕೆಯ ವರದಿ ಪ್ರಕಾರ ದೇಶದಲ್ಲಿನ ಶೇ 10-13ರಷ್ಟು ತಾಯ್ತನದ ಸಾವುಗಳು ಅಸುರಕ್ಷಿತ ಗರ್ಭಪಾತದಿಂದ ಸಂಭವಿಸುತ್ತದೆ. ಹಾಗೆಯೇ ಭಾರತದಲ್ಲಿನ ತಾಯ್ತನದ ವೇಳೆಯ ಸಾವುಗಳಲ್ಲಿ ಮೂರನೇ ಅತಿ ದೊಡ್ಡ ಕಾರಣವೆಂದರೆ ಅಸುರಕ್ಷಿತ ಗರ್ಭಪಾತ.
- ಪ್ರಸ್ತುತ ಗರ್ಭಾವಸ್ಥೆಯಲ್ಲಿ 20 ವಾರಗಳನ್ನು ಕಳೆದ ಮಹಿಳೆಯರು ಬಹುದೊಡ್ಡ ಕಾನೂನಾತ್ಮಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಇದು ಮಹಿಳೆಯರ ಪುನರ್ ಉತ್ಪತ್ತಿ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಎನ್ನುತ್ತದೆ ಕಾನೂನು. ಪ್ರಸೂತಿ ತಜ್ಞರು ಹೇಳುವಂತೆ ಅಸುರಕ್ಷಿತ ಗರ್ಭಪಾತ ಸೇವೆ ಒದಗಿಸುವ ಸ್ಥಳಗಳು ತಾಯಂದಿರ ಸಾವುಗಳಿಗೂ ಕಾರಣವಾಗುತ್ತಿವೆ.
- ಮೂಲ ಕಾನೂನಿನ ಪ್ರಕಾರ, ಅಪ್ರಾಪ್ತ ವಯಸ್ಸಿನವರು ತಮ್ಮ ಗರ್ಭ ತೆರವುಗೊಳಿಸಲು ಬಯಸಿದ್ದರೆ ಅವರ ಪೋಷಕರಿಂದ ಲಿಖಿತ ಸಮ್ಮತಿ ಅಗತ್ಯವಾಗಿದೆ. ಈಗ ಪ್ರಸ್ತಾಪಿಸಿರುವ ತಿದ್ದುಪಡಿಯು ಈ ನಿಯಮವನ್ನು ತೆಗೆದುಹಾಕಿದೆ.
ಮಸೂದೆ ತಿದ್ದುಪಡಿಗೆ ಕಾರಣಗಳು
- ಎಂಟಿಪಿ ಕಾಯ್ದೆ 1971ರ ಸೆಕ್ಷನ್ 3 (2)ರ ಪ್ರಕಾರ ನೋಂದಾಯಿತ ವೈದ್ಯಕೀಯ ಪರಿಣತರು ಮಾತ್ರ ಗರ್ಭಪಾತ ಕ್ರಿಯೆ ನಡೆಸಬೇಕು.
- ಒಂದು ವೇಳೆ ಗರ್ಭಧಾರಣೆಯ ಅವಧಿ 12 ವಾರಗಳನ್ನು ಕಳೆದಿದ್ದರೆ ಮತ್ತು 20 ವಾರಗಳಿಗೂ ಮೀರದೆ ಇದ್ದರೆ ಹಾಗೂ ಗರ್ಭಪಾತ ಅಗತ್ಯವಾಗಿದ್ದರೆ ಗರ್ಭಾವಸ್ಥೆಯನ್ನು ಮುಂದುವರಿಸುವುದು ಗರ್ಭಿಣಿಯ ಜೀವಕ್ಕೆಅಪಾಯಕಾರಿ (ಮಾನಸಿಕ ಅಥವಾ ದೈಹಿಕ) ಆಗುವ ಸಾಧ್ಯತೆ ಅಥವಾ ಒಂದು ವೇಳೆ ಮಗು ಜನಿಸಿದರೆ ಅದು ದೈಹಿಕ ಅಥವಾ ಮಾನಸಿಕ ಅಸಹಜತೆಯನ್ನು ಹೊಂದಿ ಗಂಭೀರ ಅಂಗವೈಕಲ್ಯಕ್ಕೆ ಎಡೆಮಾಡಿಕೊಡುವ ಅಪಾಯವಿರುವ ಸಾಧ್ಯತೆ ಇರುವುದರಿಂದ ಕನಿಷ್ಠ ಇಬ್ಬರು ನೋಂದಾಯಿತ ವೈದ್ಯಕೀಯ ತಜ್ಞರ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕು. ಇದು ಗರ್ಭಪಾತದ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ. ಅದರೆ ಎಂಟಿಪಿ ಕಾಯ್ದೆ 1971 ಹಳೆಯದಾಗಿದ್ದು, ಗರ್ಭಾವಸ್ಥೆಯ ಹೆಚ್ಚಿನ ಅವಧಿ ಪೂರ್ಣಗೊಳಿಸಿದ ನಂತರವೂ ಭ್ರೂಣವನ್ನು ತೆಗೆದುಹಾಕಲು ಈಗ ಇರುವ ವೈದ್ಯಕೀಯ ತಂತ್ರಜ್ಞಾನಗಳನ್ನು ಪರಿಗಣಿಸಿಲ್ಲ.
ತಿದ್ದುಪಡಿ ಮಸೂದೆಯ ಅಪಾಯಗಳು
- 20 ವಾರಗಳಿಗಿಂತ ತಡವಾಗಿಯೂ ಗರ್ಭಪಾತಕ್ಕೆ ಅವಕಾಶ ನೀಡುವುದು ಭ್ರೂಣದ ಜೀವದ ಕುರಿತಾದ ಸಂಘರ್ಷಕ್ಕೆ ಕಾರಣವಾಗಲಿದೆ. ಏಕೆಂದರೆ ಈ ಅವಧಿಯಲ್ಲಿ ಭ್ರೂಣವು ಗರ್ಭದ ಆಚೆಗೂ ಬೆಳೆಯುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತದೆ. ಇದು ಒಂದು ಜೀವವನ್ನು ತೆಗೆದುಹಾಕಿದಂತೆ ಆಗಲಿದೆ.
- ಗಂಡು ಮಗುವಿಗೆ ಆದ್ಯತೆ ನೀಡಲು ಲಿಂಗ ಪರೀಕ್ಷೆ ನಡೆಸುವ ಕೇಂದ್ರಗಳಿಗೆ ಕಾನೂನು ಅಂಕುಶ ಹಾಕಿದೆ. ಅದರ ನಡುವೆಯೂ ಅಕ್ರಮವಾಗಿ ಈ ರೀತಿಯ ಚಟುವಟಿಕೆಗಳು ನಡೆಯುತ್ತಿವೆ. ಈಗ ಗರ್ಭಪಾತದ ಅವಧಿಯ ಕಾನೂನಾತ್ಮಕ ವಿಸ್ತರಣೆಯು ಲಿಂಗ ಪತ್ತೆ ಮಾಡಿ ಗರ್ಭಪಾತಕ್ಕೆ ಮುಂದಾಗುವ ಕೃತ್ಯಗಳಿಗೆ ಮತ್ತಷ್ಟು ಅವಕಾಶ ನೀಡಿದಂತೆ ಆಗುತ್ತದೆ.