Published on: January 3, 2022
ಸಾವಿತ್ರಿಬಾಯಿ ಫುಲೆ
ಸಾವಿತ್ರಿಬಾಯಿ ಫುಲೆ
ಸುದ್ಧಿಯಲ್ಲಿ ಏಕಿದ್ದಾರೆ ? ಭಾರತೀಯ ಮಹಿಳೆ ಸ್ಮರಿಸಬೇಕಾದ ಎರಡು ಮುಖ್ಯ ದಿನಾಚರಣೆಗಳೆಂದರೆ, ಮಾರ್ಚ್ 8 ಮತ್ತು ಜನವರಿ 3. ಅಂತರರಾಷ್ಟ್ರೀಯ ಮಟ್ಟದಲ್ಲಿ, ಮಹಿಳಾ ಹಕ್ಕು ಮತ್ತು ಸ್ವಅರಿವಿನ ಜಾಗೃತಿ ಹುಟ್ಟಿಸಿದ ಚಳವಳಿಯ ದ್ಯೋತಕವಾಗಿ ಮಾರ್ಚ್ 8 ವಿಶ್ವ ಮಹಿಳಾ ದಿನವಾಗಿ ಆಚರಿಸಲ್ಪಟ್ಟರೆ, ದೇಶದ ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರದ ದಾರಿದೀಪ ತೋರಿಸಿದ ‘ಭಾರತದ ಮೊದಲ ಶಿಕ್ಷಕಿ’ ಸಾವಿತ್ರಿಬಾಯಿ ಫುಲೆಯವರ ಜನ್ಮದಿನವಾದ ಜನವರಿ 3, ಅಷ್ಟೇ ಆತ್ಮೀಯವಾಗಿ ನೆನಪಿಸಿಕೊಳ್ಳ ಬೇಕಾದ ದಿನ.
ಸಾವಿತ್ರಿಬಾಯಿ ಬಗ್ಗೆ
- 1831ರ ಜನವರಿ 3ರಂದು ಮಹಾರಾಷ್ಟ್ರದ ನಾಯಗಾಂವ್ನಲ್ಲಿ ಹಿಂದುಳಿದ ಮಾಲಿ ಸಮುದಾಯದ ರೈತ ಕುಟುಂಬದಲ್ಲಿ ಜನಿಸಿದ ಸಾವಿತ್ರಿಬಾಯಿ, ಇಂದು ದೇಶದಾದ್ಯಂತ ಪರಿಚಿತ ಹೆಸರಾಗಲು ಅವರ ಪತಿ, ಧೀಮಂತ ಸಮಾಜ ಸುಧಾರಕ, ಜ್ಯೋತಿರಾವ್ ಫುಲೆ ಅವರ ಕೊಡುಗೆ ವಿಶಿಷ್ಟವಾದುದು. ಶಿಕ್ಷಣದ ಮೂಲಕ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಬಹುದೆಂಬ ತಮ್ಮ ನಂಬಿಕೆಯನ್ನು ಜ್ಯೋತಿಬಾ,ಅನಕ್ಷರಸ್ಥೆಯಾಗಿದ್ದ ಪತ್ನಿಗೆ ಮನೆಯವರ ವಿರೋಧದ ನಡುವೆಯೂ ಅಕ್ಷರಾಭ್ಯಾಸ ಮಾಡಿಸುವುದರ ಮೂಲಕ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದರು.
- ಜ್ಯೋತಿಬಾ ಬೆಂಬಲದೊಂದಿಗೆ ಪುಣೆಯ ಶಿಕ್ಷಕ ತರಬೇತಿ ಸಂಸ್ಥೆ ಸೇರಿದ ಸಾವಿತ್ರಿಬಾಯಿ, ಆನಂತರ ತಮ್ಮ ಮನೆಯಿಂದಲೇ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲಾರಂಭಿಸಿದರು. ಬಳಿಕ ದಂಪತಿ 1848ರಲ್ಲಿ ಭಿಡೆವಾಡದಲ್ಲಿ ‘ಭಾರತದ ಪ್ರಥಮ ಬಾಲಕಿಯರ ಶಾಲೆ’ಯನ್ನು ಸ್ಥಾಪಿಸಿದರು. ಶಾಲೆಗೆ ಮಕ್ಕಳನ್ನು ಸೆಳೆಯುವ ವಿನೂತನ ಯೋಜನೆಯಾಗಿ ವಿದ್ಯಾರ್ಥಿ ವೇತನ ನೀಡಲಾರಂಭಿಸಿದರು.
- ಅವರ ಶಿಕ್ಷಣ ಸೇವೆಯನ್ನು ಗುರುತಿಸಿದ ಆಗಿನ ಬ್ರಿಟಿಷ್ ಸರ್ಕಾರವು ಸಾವಿತ್ರಿಬಾಯಿ ಅವರನ್ನು 1852ರಲ್ಲಿ ‘ಅತ್ಯುತ್ತಮ ಶಿಕ್ಷಕಿ’ಯೆಂದು ಗೌರವಿಸಿತು. ಆನಂತರ ಫುಲೆ ದಂಪತಿ, ಕೃಷಿ ಮತ್ತು ಕಾರ್ಮಿಕ ವರ್ಗದವರಿಗಾಗಿ ರಾತ್ರಿ ಶಾಲೆಯನ್ನು ಆರಂಭಿಸಿದರು. ವಿದ್ಯಾರ್ಜನೆಗೆ ಆರ್ಥಿಕ ಸಮಸ್ಯೆ ಅಡ್ಡಿಯಾಗಬಾರದೆಂದು, ಮಹಾರಾಷ್ಟ್ರದಾದ್ಯಂತ 52 ಉಚಿತ ವಸತಿ ನಿಲಯಗಳನ್ನು ಸ್ಥಾಪಿಸಿದರು.
- ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಮಾಜಿಕ ಅನಿಷ್ಟ ಗಳನ್ನು ನಿರ್ಮೂಲನ ಮಾಡುವಲ್ಲಿಯೂ ಫುಲೆ ದಂಪತಿ ಬಹಳಷ್ಟು ಕೆಲಸ ಮಾಡಿದ್ದಾರೆ. ‘ಸತ್ಯಶೋಧಕ ಸಮಾಜ’ವೆಂಬ ಸಂಸ್ಥೆಯನ್ನು ಆರಂಭಿಸಿ, ಶಿಕ್ಷಣ ಮತ್ತು ಸಮಾನತೆಯ ಅರಿವು, ವರದಕ್ಷಿಣೆ ವಿರೋಧಿ ಸರಳ ವಿವಾಹ, ಅಸ್ಪೃಶ್ಯರಿಗೆ ಕುಡಿಯುವ ನೀರಿನ ವ್ಯವಸ್ಥೆಯಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರು.
- ಮಹಿಳಾ ಸೇವಾ ಮಂಡಳಿಗಳನ್ನು ಸ್ಥಾಪಿಸಿದ ಸಾವಿತ್ರಿಬಾಯಿ, ಬಾಲ್ಯವಿವಾಹ, ಹೆಣ್ಣುಭ್ರೂಣ ಹತ್ಯೆ ಹಾಗೂ ಸತಿ ಪದ್ಧತಿ ವಿರುದ್ಧ ಜಾಗೃತಿ ಅಭಿಯಾನ ಸಂಘಟಿಸಿದರು. ‘ಬಾಲ್ಯತಾ ಪ್ರತಿಬಂಧಕ್ ಗೃಹ್’ ಎಂಬ ಕೇಂದ್ರವನ್ನು ವಿಧವೆಯರು, ಅತ್ಯಾಚಾರಕ್ಕೆ ಒಳಗಾದವರು ಹಾಗೂ ಅವರ ಮಕ್ಕಳ ಸುರಕ್ಷತೆಗಾಗಿ ಸ್ಥಾಪಿಸಿದರು. ವಿಧವೆಯರ ಪುನರ್ವಿವಾಹಕ್ಕೆ ಬೆಂಬಲ ಕೊಟ್ಟರು.
- ಕವಯಿತ್ರಿಯಾಗಿದ್ದ ಸಾವಿತ್ರಿಬಾಯಿ ಎರಡು ಕಾವ್ಯಸಂಗ್ರಹವನ್ನು ಪ್ರಕಟಿಸಿದ್ದಲ್ಲದೆ, ಜ್ಯೋತಿಬಾ ಅವರ ಭಾಷಣಗಳ ಸಂಗ್ರಹವನ್ನು ಸಂಪಾದಿಸಿ ಪ್ರಕಟಿಸಿದರು.