Published on: June 21, 2023
ಸಿಕಲ್ ಸೆಲ್ ಕಾಯಿಲೆ
ಸಿಕಲ್ ಸೆಲ್ ಕಾಯಿಲೆ
ಸುದ್ದಿಯಲ್ಲಿ ಏಕಿದೆ? ಕುಡಗೋಲು ಕಣ ರೋಗದ ಜಾಗೃತಿ ದಿನ (ವರ್ಲ್ಡ್ ಸಿಕಲ್ ಸೆಲ್ ಜಾಗೃತಿ ದಿನ) ವನ್ನು ಪ್ರತಿ ವರ್ಷ ಜೂನ್ 19 ರಂದು ಆಚರಿಸಲಾಗುತ್ತದೆ.
ಈ ರೋಗ ಹೇಗೆ ಉಂಟಾಗುತ್ತದೆ?
- ಸಿಕಲ್ ಸೆಲ್ ಕಾಯಿಲೆ ಒಂದು ಆನುವಂಶಿಕ ರೋಗವಾಗಿದ್ದು, ಸಿಕಲ್ ಸೆಲ್ ಕಾಯಿಲೆ / ರಕ್ತಹೀನತೆ ಹಿಮೋಗ್ಲೋಬಿನ್ ಬೆಟಾ ಜೀನ್ ನಲ್ಲಿನ ರೂಪಾಂತರದಿಂದ ಉಂಟಾಗುತ್ತದೆ. ಸಾಮಾನ್ಯ ಹಿಮೋಗ್ಲೋಬಿನ್ ( HbA ) ಹೊಂದಿರುವ ಕೆಂಪು ರಕ್ತ ಕಣಗಳು ನಯವಾದ ಮತ್ತು ದುಂಡಾಗಿರುತ್ತವೆ. ಕುಡಗೋಲು ಕೋಶ ರಕ್ತಹೀನತೆಯ ರೋಗಿಗಳಲ್ಲಿ ಅಸಹಜ ಹಿಮೋಗ್ಲೋಬಿನ್ ಅಣುಗಳನ್ನು ಹೊಂದಿರುತ್ತಾರೆ ( HbS ) ಇದು ಅವರ ಕೆಂಪು ರಕ್ತ ಕಣಗಳನ್ನು ಕುಡಗೋಲು ಆಕಾರ ಅಥವಾ ಅರ್ಧಚಂದ್ರಾಕಾರದ ಆಕಾರವಾಗಿಸುತ್ತದೆ. ಈ ಆಕಾರದ ಕೆಂಪು ರಕ್ತ ಕಣಗಳು ಅಕಾಲಿಕವಾಗಿ ಸಾಯುತ್ತವೆ, ಬಳಿಕ ಇದು ರಕ್ತಹೀನತೆಗೆ ಕಾರಣವಾಗಬಹುದು. ಇದರಿಂದ ಕೆಂಪು ರಕ್ತ ಕಣಗಳು ರಕ್ತ ಮತ್ತು ಆಮ್ಲಜನಕದ ಪ್ರಮಾಣವನ್ನು ನಿಧಾನಗೊಳಿಸುವ ಸಣ್ಣ ರಕ್ತನಾಳಗಳಲ್ಲಿ ಸಿಲುಕುತ್ತವೆ, ಇದು ತೀವ್ರ ನೋವು, ಕಾಮಾಲೆ, ರಕ್ತಹೀನತೆ ಮತ್ತು ಪುನರಾವರ್ತಿತ ಸೋಂಕುಗಳಿಗೆ ಕಾರಣವಾಗುತ್ತದೆ.
ರೋಗ ಲಕ್ಷಣಗಳು
- ಸಿಕಲ್ ಸೆಲ್ ಕಾಯಿಲೆ ಒಂದು ಆನುವಂಶಿಕ ರಕ್ತ ಅಸ್ವಸ್ಥತೆಯಾಗಿದ್ದು, ನೋವು, ಆಯಾಸ, ರಿಟಾರ್ಡ್ ಬೆಳವಣಿಗೆ, ದೇಹದ ನೋವು, ಎದೆ ನೋವು ಇವೆಲ್ಲವೂ ಈ ರೋಗದ ಲಕ್ಷಣಗಳಾಗಿವೆ.
ಇತಿಹಾಸ:
- ವಿಶ್ವ ಕುಡಗೋಲು ಕಣ ರೋಗದ ಜಾಗೃತಿ ದಿನವು ಡಿಸೆಂಬರ್ 22, 2008 ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು. ಈ ನಿರ್ಣಯವು ಕುಡಗೋಲು ಕೋಶ ರೋಗವನ್ನು ಜಾಗತಿಕ ಆರೋಗ್ಯ ಕಾಳಜಿಯೆಂದು ಗುರುತಿಸಿತು ಮತ್ತು ವಿಶ್ವಾದ್ಯಂತ ರೋಗದ ಬಗ್ಗೆ ಜಾಗೃತಿ ಮೂಡಿಸಲು ಜೂನ್ 19 ರಂದು ಅಧಿಕೃತ ದಿನವೆಂದು ಘೋಷಿಸಿತು.
ಈ ದಿನದ ಉದ್ದೇಶ
- ಈ ಜಾಗೃತಿ ದಿನದ ಉದ್ದೇಶವು ಕುಡಗೋಲು ಕಣ ಕಾಯಿಲೆ ಇರುವ ವ್ಯಕ್ತಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವುದು ಮತ್ತು ಸುಧಾರಿತ ಆರೋಗ್ಯ ಸೇವೆಗಳಿಗಾಗಿ ಸಲಹೆ ನೀಡುವುದು, ಆರಂಭಿಕ ರೋಗನಿರ್ಣಯ ಮತ್ತು ಪರಿಣಾಮಕಾರಿ ಚಿಕಿತ್ಸಾ ಆಯ್ಕೆಗಳು.
- ರೋಗದ ಮೇಲಿರುವ ಕಳಂಕ ಮತ್ತು ತಪ್ಪು ಕಲ್ಪನೆಗಳನ್ನು ಕಡಿಮೆ ಮಾಡುವುದು, ಪೀಡಿತರಿಗೆ ಸಹಾನುಭೂತಿ, ಬೆಂಬಲ ಮತ್ತು ಧೈರ್ಯ ನೀಡುವುದು ಈ ದಿನದ ಉದ್ದೇಶವಾಗಿದೆ. ಈ ಬಗ್ಗೆ ನಡೆಯುವ ಸಂಶೋಧನೆ ಮತ್ತು ಚಿಕಿತ್ಸೆಗಳನ್ನು ಪ್ರೋತ್ಸಾಹಿಸುವುದು.
ನಿಮಗಿದು ತಿಳಿದಿರಲಿ
- ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು 2, 75,000 ಶಿಶುಗಳು ಕುಡಗೋಲು ಕೋಶ ರಕ್ತಹೀನತೆಯಿಂದ ಜನಿಸುತ್ತಾರೆ. ಇದು ಭಾರತದಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಯಾಗಿದ್ದು, ಹೆಚ್ಚಾಗಿ ಬುಡಕಟ್ಟು ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಚತ್ತಿಸ್ಗಢ, ಒಡಿಶಾ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ, ಆಂಧ್ರಪ್ರದೇಶ ಮತ್ತು ತಮಿಳುನಾಡು ಹಾಗೂ ಕೇರಳದ ಕೆಲವು ಭಾಗಗಳಲ್ಲಿಯೂ ಕಂಡು ಬಂದಿದೆ.
- ಆದಿವಾಸಿ ಸಮುದಾಯದವರಲ್ಲಿಹೆಚ್ಚಾಗಿ ಕಂಡು ಬರುವ ಸಿಕಲ್ ಸೆಲ್ (ಕುಡುಗೋಲು) ಕಾಯಿಲೆಯನ್ನು 2047ರೊಳಗೆ ನಿರ್ಮೂಲನೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.