Published on: November 15, 2021

ಸಿಬಿಐ, ಇ.ಡಿ ನಿರ್ದೇಶಕರ ಅವಧಿ

ಸಿಬಿಐ, ಇ.ಡಿ ನಿರ್ದೇಶಕರ ಅವಧಿ

ಸುದ್ಧಿಯಲ್ಲಿ ಏಕಿದೆ ? ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ನಿರ್ದೇಶಕರ ಅಧಿಕಾರ ಅವಧಿಯಲ್ಲಿ 5 ವರ್ಷಗಳವರೆಗೆ ವಿಸ್ತರಣೆ ಮಾಡುವ ಎರಡು ಸುಗ್ರೀವಾಜ್ಞೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

ಪ್ರಸ್ತುತ ನಿಯಮವೇನಿದೆ ?

  • ಪ್ರಸ್ತುತ ಈ ಎರಡೂ ತನಿಖಾ ಸಂಸ್ಥೆಗಳ ಮುಖ್ಯಸ್ಥರ ಅಧಿಕಾರ ಅವಧಿ ತಲಾ ಎರಡು ವರ್ಷಗಳಾಗಿವೆ. ಅವರನ್ನು ಈ ಎರಡು ವರ್ಷಗಳ ಅವಧಿ ಅಂತ್ಯಗೊಳ್ಳುವವರೆಗೂ ಅಧಿಕಾರದಿಂದ ತೆಗೆದು ಹಾಕಲು ಅವಕಾಶವಿಲ್ಲ. ಸರ್ಕಾರವು ಅವರನ್ನು ಹುದ್ದೆಯಲ್ಲಿ ಮುಂದುವರಿಸುವ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ.
  • 1997ಕ್ಕೂ ಮುನ್ನ ಸಿಬಿಐ ಮುಖ್ಯಸ್ಥರ ಅಧಿಕಾರ ಅವಧಿಯನ್ನು ನಿಗದಿಗೊಳಿಸಿರಲಿಲ್ಲ. ಅವರನ್ನು ಸರ್ಕಾರ ಯಾವುದೇ ಸಂದರ್ಭದಲ್ಲಿ ಹುದ್ದೆಯಿಂದ ಕಿತ್ತು ಹಾಕಬಹುದಾಗಿತ್ತು. ಆದರೆ ವಿನೀತ್ ರಂಜನ್ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಸಿಬಿಐ ನಿರ್ದೇಶಕರು ಸ್ವತಂತ್ರವಾಗಿ ಕೆಲಸ ಮಾಡುವುದರ ಜತೆಗೆ ಕನಿಷ್ಠ ಎರಡು ವರ್ಷ ಹುದ್ದೆಯನ್ನು ನಿಗದಿಗೊಳಿಸುವಂತೆ ಆದೇಶಿಸಿತ್ತು.

ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ (ತಿದ್ದುಪಡಿ) ಸುಗ್ರೀವಾಜ್ಞೆ 2021

  • ಕೇಂದ್ರ ಸರ್ಕಾರ ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ (ತಿದ್ದುಪಡಿ) ಸುಗ್ರೀವಾಜ್ಞೆ 2021 ಅನ್ನು ಪ್ರಕಟಿಸಿದೆ. ನಿಯಮಾವಳಿಗಳ ಅಡಿಯಲ್ಲಿನ ಸಮಿತಿಯ ಶಿಫಾರಸಿನ ಅನ್ವಯ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಜಾರಿ ನಿರ್ದೇಶನಾಲಯ ಕಚೇರಿ ಮುಖ್ಯಸ್ಥರ ಅಧಿಕಾರವನ್ನು ಆರಂಭಿಕ ನೇಮಕಾತಿಯಿಂದ ಒಂದು ಬಾರಿಗೆ ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ.
  • ಸಿಬಿಐ ನಿರ್ದೇಶಕರ ಅಧಿಕಾರ ಅವಧಿಯನ್ನು ದಿಲ್ಲಿ ವಿಶೇಷ ಪೊಲೀಸ್ ಸಂಸ್ಥಾಪನಾ ಕಾಯ್ದೆ, 1946ಕ್ಕೆ ತಿದ್ದುಪಡಿ ತರುವ ಮೂಲಕ ಬದಲಾವಣೆ ಮಾಡಲಾಗಿದೆ. ಇದೇ ರೀತಿ ಕೇಂದ್ರ ವಿಚಕ್ಷಣಾ ಆಯೋಗದ ಕಾಯ್ದೆ, 2003ಕ್ಕೆ ತಿದ್ದುಪಡಿ ತರುವ ಮೂಲಕ ಇ.ಡಿ ಮುಖ್ಯಸ್ಥರ ಅಧಿಕಾರ ಅವಧಿಯನ್ನು ಐದು ವರ್ಷಗಳವರೆಗೆ ವಿಸ್ತರಣೆ ಮಾಡಲಾಗಿದೆ. ಒಮ್ಮೆಲೆ ಒಂದು ವರ್ಷ ಅಧಿಕಾರ ವಿಸ್ತರಿಸುವ ಅವಕಾಶ ನೀಡಲಾಗಿದೆ.

ಪ್ರಕ್ರಿಯೆ ಹೇಗಿದೆ ?

  • ಗೆಜೆಟ್ ಅಧಿಸೂಚನೆ ಪ್ರಕಾರ ಸಿಬಿಐ ಮತ್ತು ಇಡಿ ನಿರ್ದೇಶಕರನ್ನು ಮೊದಲ ಎರಡು ವರ್ಷಗಳ ಅವಧಿಯವರೆಗೆ ನೇಮಕಾತಿ ಮಾಡಲಾಗುತ್ತದೆ. ಬಳಿಕ ವರ್ಷಕ್ಕೆ ಒಂದು ಬಾರಿಯಂತೆ ಮೂರು ಬಾರಿ ವಿಸ್ತರಣೆಯನ್ನು ನೀಡುವ ಮೂಲಕ ಐದು ವರ್ಷಗಳವರೆಗೆ ಅವರ ಅಧಿಕಾರವನ್ನು ವಿಸ್ತರಿಸಲು ಅವಕಾಶವಿದೆ. ಈ ವಿಸ್ತರಣೆಯನ್ನು ಪ್ರತಿ ವರ್ಷವೂ ಹೊಸದಾಗಿ ನೀಡಬೇಕಾಗುತ್ತದೆ. ಹಾಗೆಯೇ ಐದು ವರ್ಷಗಳ ಅವಧಿ ಬಳಿಕ ಮತ್ತೆ ವಿಸ್ತರಣೆಗೆ ಅವಕಾಶವಿಲ್ಲ.

ಸಿಬಿಐ ನಿರ್ದೇಶಕ

  • ಈ ವರ್ಷದ ಮೇ ತಿಂಗಳಲ್ಲಿ ಸಿಐಎಸ್‌ಎಫ್ ಮುಖ್ಯಸ್ಥ ಸುಬೋಧ್ ಜೈಸ್ವಾಲ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ಅವರು 1985ರ ಬ್ಯಾಚ್‌ನ ಮಹಾರಾಷ್ಟ್ರ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಜಾರಿ ನಿರ್ದೇಶನಾಲಯದ ಹಾಲಿ ಮುಖ್ಯಸ್ಥ

  • ಐಆರ್‌ಎಸ್ ಅಧಿಕಾರಿ ಸಂಜಯ್ ಕೆ ಮಿಶ್ರಾ ಅವರು ಜಾರಿ ನಿರ್ದೇಶನಾಲಯದ ಹಾಲಿ ಮುಖ್ಯಸ್ಥರಾಗಿದ್ದಾರೆ. ಕಳೆದ ವರ್ಷದ ನವೆಂಬರ್‌ನಲ್ಲಿ ಸಂಜಯ್ ಮಿಶ್ರಾ ಅವರ ಅಧಿಕಾರ ಅವಧಿಯನ್ನು ಒಂದು ವರ್ಷ ವಿಸ್ತರಣೆ ಮಾಡಲಾಗಿತ್ತು. 2018ರಲ್ಲಿ ಮಿಶ್ರಾ ಅವರ ನೇಮಕವಾಗಿತ್ತು. 2020ರ ನವೆಂಬರ್‌ನಲ್ಲಿ ಅವರ ಅಧಿಕಾರ ಅಂತ್ಯಗೊಳ್ಳಬೇಕಿತ್ತು. ಆದರೆ ಒಂದು ವರ್ಷ ವಿಸ್ತರಣೆ ನೀಡಲಾಗಿತ್ತು.