Published on: November 4, 2022

ಸುದ್ಧಿ ಸಮಾಚಾರ – 04 ನವೆಂಬರ್ 2022

ಸುದ್ಧಿ ಸಮಾಚಾರ – 04 ನವೆಂಬರ್ 2022

  • ಹೆದ್ದಾರಿಗಳಲ್ಲಿ ಅಪಘಾತಗಳು, ವಾಹನಗಳಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಘಟನೆಗಳನ್ನು ತಪ್ಪಿಸಲು ಶಾಲಾ ವಾಹನಗಳೂ ಸೇರಿದಂತೆ ಸುಮಾರು 6.87 ಲಕ್ಷ ಸಾರ್ವಜನಿಕ ಸಾರಿಗೆ ವಾಹನಗಳಿಗೆ ವಾಹನ ಚಲನೆ ನಿಗಾ ಉಪಕರಣಗಳು (ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್) ಮತ್ತು ಪ್ಯಾನಿಕ್ ಬಟನ್ ಅಳವಡಿಸಲು ಸರ್ಕಾರ ತೀರ್ಮಾನಿಸಿದೆ.
  • ರಾಜ್ಯದಲ್ಲಿ ಬಂಡವಾಳ ಹೂಡಿಕೆಗಿರುವ ತೊಡಕುಗಳನ್ನು ತ್ವರಿತಗತಿಯಲ್ಲಿ ನಿವಾರಿಸಿ, ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡುವ ‘ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ’ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
  • ಭಾರತ ಮತ್ತು ಚೀನಾ ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಪಹರೆ ಕಾಯುವ ಇಂಡೊ ಟಿಬೇಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿಗೆ ಶಸ್ತ್ರಾಸ್ತ್ರ ರಹಿತವಾದಂತಹ ಆಕ್ರಮಣಕಾರಿ ಯುದ್ಧ ತಂತ್ರಗಳ ಕುರಿತು ತರಬೇತಿ ನೀಡಲು ನಿರ್ಧರಿಸಲಾಗಿದೆ.
  • ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಡಿಆರ್ಡಿಒ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್(ಬಿಎಂಡಿ) ಇಂಟರ್ಸೆಪ್ಟರ್ ಎಡಿ-1 ಕ್ಷಿಪಣಿಯ ಎರಡನೇ ಹಂತದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.
  • ಕೋಟಕ್ ಕನ್ಯಾ ಸ್ಕಾಲರ್‌ಷಿಪ್: ಕೋಟಕ್ ಮಹೀಂದ್ರಾ ಗ್ರೂಪ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್) ಯೋಜನೆಯಡಿಯಲ್ಲಿ, ಕೋಟಕ್ ಎಜುಕೇಶನ್ ಫೌಂಡೇಶನ್‌ನಿಂದ 12 ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗಾಗಿ ಈ ಸ್ಕಾಲರ್‌ಷಿಪ್‌ ಕಾರ್ಯಕ್ರಮವನ್ನು ರೂಪಿಸಿದೆ. ಸಮಾಜದ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿನಿಯರು  ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ವೃತ್ತಿಪರ ಪದವಿ ಕೋರ್ಸ್‌ ಕಲಿಯಲು ನೆರವಾಗುವುದು.‌ ಅರ್ಹತೆ: ಅರ್ಜಿದಾರರು 12ನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ ಶೇ 75 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ಕುಟುಂಬದ ವಾರ್ಷಿಕ ವರಮಾನ ₹20 ಲಕ್ಷ ಮೀರಬಾರದು.
  • ಜಲಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಡೆನ್ಮಾರ್ಕ್ ಜತೆಗಿನ ಒಡಂಬಡಿಕೆಗೆ (ಎಂಒಯು) ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
  • ಉಕ್ರೇನ್‌ನಿಂದ ಆಹಾರ ಧಾನ್ಯ ಸುಗಮ ರಫ್ತಿಗೆ ಅವಕಾಶ ಕಲ್ಪಿಸುವ ವಿಶ್ವಸಂಸ್ಥೆ ಮಧ್ಯಸ್ಥಿಕೆಯ ಯುದ್ಧಕಾಲದ ಒಪ್ಪಂದದಿಂದಹೊರಗುಳಿಯುವ ಬೆದರಿಕೆ ಹಾಕಿದ್ದ ರಷ್ಯಾ ತನ್ನ ನಿಲುವನ್ನು ಬದಲಿಸಿದೆ. ಟರ್ಕಿಯೆ ಮಧ್ಯಸ್ಥಿಕೆ ವಹಿಸಿದ ಪರಿಣಾಮ ಈ ಮಹತ್ವದ ಬೆಳವಣಿಗೆ ನಡೆದಿದೆ.

ರಷ್ಯಾದ ಮಿಲಿಟರಿ ಉಪಗ್ರಹ ಉಡಾವಣೆ ಮಾಸ್ಕೊ (ರಾಯಿಟರ್ಸ್‌): ಮಿಲಿಟರಿ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಸೇರಿಸಲು ಸೋಯುಜ್ ರಾಕೆಟ್ ಅನ್ನು ರಷ್ಯಾ ಉಡಾವಣೆ ಮಾಡಿದೆ. ಸೋಯುಜ್ -2.1ಬಿ ಮಧ್ಯಮ ವರ್ಗದ ಉಡಾವಣಾ ರಾಕೆಟ್‌ ಅನ್ನು ಪ್ಲೆಸೆಟ್‌ಸ್ಕ್‌ ಕಾಸ್ಮೊಡ್ರೋಮ್‌ನಿಂದ ಬಾಹ್ಯಾಕಾಶಕ್ಕೆ ಹಾರಿಸಲಾಯಿತು ಎಂದು ರಕ್ಷಣಾ ಸಚಿವಾಲಯದ ಮಾಹಿತಿ ಉಲ್ಲೇಖಿಸಿ ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಈ ಉಪಗ್ರಹದ ಉದ್ದೇಶದ ಬಗ್ಗೆ ಸಚಿವಾಲಯ ವಿವರ ನೀಡಿಲ್ಲ.