Published on: October 22, 2021
ಸುದ್ಧಿ ಸಮಾಚಾರ 22 ಅಕ್ಟೋಬರ್ 2021
ಸುದ್ಧಿ ಸಮಾಚಾರ 22 ಅಕ್ಟೋಬರ್ 2021
- ರಾಜ್ಯದ ವಿವಿಧ ಇಲಾಖೆಗಳು ಸಂಗ್ರಹಿಸಿರುವ ಡಿಜಿಟಲೀಕೃತ ದತ್ತಾಂಶಗಳನ್ನು ಹಂಚಿಕೊಳ್ಳುವ, ಒಪ್ಪಂದದ ಮೂಲಕ ವಿನಿಮಯ ಮತ್ತು ಮಾರಾಟ ಮಾಡುವ ದಾರಿಯೊಂದನ್ನು ತೆರೆಯುವತ್ತ ಕರ್ನಾಟಕ ಸರ್ಕಾರ ಹೆಜ್ಜೆ ಇಟ್ಟಿದೆ. ಇದಕ್ಕೆ ಪೂರಕವಾಗಿ ‘ಕರ್ನಾಟಕ ಮುಕ್ತ ದತ್ತಾಂಶ ನೀತಿ’ಯನ್ನು ಸರ್ಕಾರ ಪ್ರಕಟಿಸಿದೆ.
- ಬೆಂಗಳೂರು ನಗರದಲ್ಲಿ ಮಹಿಳೆಯರ ಸುರಕ್ಷತೆ ಹೆಚ್ಚಿಸುವ ಸಿಟಿ ಪ್ರಾಜೆಕ್ಟ್ ಅನ್ನು ಹನಿವೆಲ್ ಅಟೋಮೇಷನ್ ಇಂಡಿಯಾ ಸಂಸ್ಥೆ ತನ್ನದಾಗಿಸಿಕೊಂಡಿದೆ. ನಿರ್ಭಯಾ ನಿಧಿಯಡಿ ಈ ಪ್ರಾಜೆಕ್ಟ್ ರೂಪಿಸಲಾಗಿದ್ದು, ಪ್ರಾಜೆಕ್ಟ್ ಮೊತ್ತ 496.57 ಕೋಟಿ ರೂ. ಆಗಿದೆ.
- ದೇಶದಲ್ಲಿ 100 ಕೋಟಿ ಡೋಸ್ ಕೋವಿಡ್–19 ಲಸಿಕೆ ವಿತರಣೆಯನ್ನು ಸಂಭ್ರಮಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್ಐ) ತನ್ನ 100 ಪಾರಂಪರಿಕ ಸ್ಮಾರಕಗಳನ್ನು ರಾಷ್ಟ್ರ ಧ್ವಜದ ಬಣ್ಣದಲ್ಲಿ ಬೆಳಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
- ಜಾಗತಿಕ ಆಹಾರ ಭದ್ರತೆ (ಜಿಎಫ್ಎಸ್) ಸೂಚ್ಯಂಕದಲ್ಲಿ ಭಾರತವು 113 ದೇಶಗಳ ಪೈಕಿ 71ನೆಯ ಸ್ಥಾನ ಪಡೆದಿದೆ. ಕೈಗೆಟಕುವ ದರದಲ್ಲಿ ಆಹಾರ ಸಿಗುವ ವಿಚಾರದಲ್ಲಿ ಭಾರತವು ಶ್ರೀಲಂಕಾ ಮತ್ತು ಪಾಕಿಸ್ತಾನಕ್ಕಿಂತ ಹಿಂದೆ ಇದೆ ಎಂದು ವರದಿಯೊಂದು ಹೇಳಿದೆ.
- ಅರುಣಾಚಲ ಪ್ರದೇಶ ಗಡಿಗೆ ಹೊಂದಿಕೊಂಡಿರುವ ವಾಸ್ತವ ಗಡಿ ರೇಖೆ(ಎಲ್ಎಸಿ)ಯಲ್ಲಿ ಚೀನಿ ಸೇನೆ ಚಟುವಟಿಕೆಗಳು ಹೆಚ್ಚತೊಡಗಿವೆ. ಅರುಣಾಚಲ ಪ್ರದೇಶ ಗಡಿಗೆ ಭಾರತೀಯ ಸೇನೆ ಬೋಫೋರ್ಸ್ ಫಿರಂಗಿಯನ್ನು ನಿಯೋಜಿಸಿದೆ. ಗಡಿಯ ಮುಂಚೂಣಿ ಸೇನಾ ನೆಲೆಗಳಲ್ಲಿ ಬೋಫೋರ್ಸ್ ಫಿರಂಗಿಗಳನ್ನು ನಿಯೋಜಿಸಲಾಗಿದ್ದು, ಗಡಿ ಕಣ್ಗಾವಲನ್ನು ಕೂಡ ಹೆಚ್ಚಿಸಲಾಗಿದೆ.
- ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರು ತಮ್ಮ ಹುದ್ದೆಯನ್ನು ಜನವರಿಯಲ್ಲಿ ತೊರೆಯಲಿದ್ದಾರೆ, ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗಕ್ಕೆ ಮರಳಲಿದ್ದಾರೆ.
- ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯ ಸಿ.ಎ. ಆರ್. ಮೈದಾನದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿದರು.ಭಾರತದಲ್ಲಿ ಅಕ್ಟೋಬರ್ 21 ರಂದು ರಾಷ್ಟ್ರೀಯ ಪೊಲೀಸ್ ಸ್ಮರಣಾರ್ಥ ದಿನವನ್ನು ಆಚರಿಸಲಾಗುತ್ತದೆ. 1959 ರಲ್ಲಿ ಚೀನಾದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಹತ್ತು ಪೊಲೀಸರಿಗೆ ಈ ದಿನವನ್ನು ಅರ್ಪಿಸಲಾಗಿದೆ.
- ವಿಕ್ಷಿಪ್ತ, ವಿನೂತನ ಹಾಲಿವುಡ್ ಸಿನಿಮಾಗಳಿಗೆ ಹೆಸರಾದ ಭಾರತ ಮೂಲದ ನಿರ್ದೇಶಕ ನೈಟ್ ಶ್ಯಾಮಲನ್ ಪ್ರತಿಷ್ಟಿತ ಬರ್ಲಿನ್ ಚಿತ್ರೋತ್ಸವದ ಅಂತಾರಾಷ್ಟ್ರೀಯ ತೀರ್ಪುಗಾರರ ಸಮಿತಿಗೆ ಅಧ್ಯಕ್ಷರಾಗುತ್ತಿದ್ದಾರೆ. ಥ್ರಿಲ್ಲರ್ ಮತ್ತು ಹಾರರ್ ಪ್ರಕಾರದ ಸಿನಿಮಾಗಳಿಗೆ ಹೆಸರಾದ ನೈಟ್ ಶ್ಯಾಮಲನ್ ದಿ ಸಿಕ್ಸ್ಥ್ ಸೆನ್ಸ್, ಅನ್ ಬ್ರೇಕೆಬಲ್, ಸೈನ್ಸ್, ದಿ ವಿಲೇಜ್, ಸ್ಪ್ಲಿಟ್ ಮತ್ತು ಓಲ್ಡ್ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಬರೆದು ನಿರ್ದೇಶಿಸಿದ್ದಾರೆ.