Published on: January 29, 2022
ಸುದ್ಧಿ ಸಮಾಚಾರ 29 ಜನವರಿ 2022
ಸುದ್ಧಿ ಸಮಾಚಾರ 29 ಜನವರಿ 2022
- ದಕ್ಷಿಣಭಾರತದ 10 ವಾಯುಮಾಲಿನ್ಯ ಪೀಡಿತ ನಗರಗಳ ಪಟ್ಟಿಯಲ್ಲಿ ರಾಜ್ಯದ ಮೂರು ನಗರಗಳು ಸ್ಥಾನಪಡೆದಿವೆ. ಪರಿಸರ ಕಾಳಜಿ ಕುರಿತು ಜಾಗೃತಿ ಮೂಡಿಸುವ ಸಂಸ್ಥೆ ಗ್ರೀನ್ ಪೀಸ್ ಇಂಡಿಯಾ ಈ ಮಾಹಿತಿಯನ್ನು ಹೊರಗೆಡವಿದೆ.
- ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಹಾಸನ ಜಿಲ್ಲೆಯ ತೆಂಗಿನ ಬೆಳೆ ಆಯ್ಕೆಯಾಗಿದೆ.
- ಮೈಸೂರು ಕೊಡಗಿನಾದ್ಯಂತ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 123ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
- ದೇಶದಲ್ಲೇ ಮೊದಲ ಬಾರಿಗೆ ನಿಮ್ಹಾನ್ಸ್ ಸಂಸ್ಥೆಯು ನೀತಿ ಆಯೋಗ ಹಾಗೂ ಆರೋಗ್ಯ ಇಲಾಖೆಯ ನೆರವಿನಲ್ಲಿ ‘ಕರ್ನಾಟಕ ಮೆದುಳು ಆರೋಗ್ಯ ಕಾರ್ಯಕ್ರಮ’ (ಕರ್ನಾಟಕ ಬ್ರೇನ್ ಹೆಲ್ತ್ ಇನೀಶಿಯೇಟಿವ್) ಜಾರಿ ಮಾಡಿದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿಮ್ಹಾನ್ಸ್ನಿಂದ ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಜಾರಿ ಮಾಡಿದ್ದು, ಮಾನಸಿಕ ರೋಗಗಳ ತಪಾಸಣೆ ಮಾಡುವ ಹಾಗೂ ಚಿಕಿತ್ಸೆ ನೀಡುವ ಕುರಿತು ವೈದ್ಯರಿಗೆ ತರಬೇತಿ ನೀಡಲಾಗುತ್ತದೆ.
- ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯಲ್ಲಿ ಉನ್ನತ ಗೌರವ ಪಡೆದಿದ್ದ ವಿರಾಟ್ ಎಂಬ ಹಿರಿಯ ಕುದುರೆಗೆ ಸುಮಾರು ಎರಡು ದಶಕಗಳ ಸೇವೆಯ ಬಳಿಕ ನಿವೃತ್ತಿ ನೀಡಲಾಯಿತು. ರಾಷ್ಟ್ರಪತಿಗಳ ಬಾಡಿಗಾರ್ಡ್ ಕಮಾಂಡೆಂಟ್ನ ಕಪ್ಪು ಕುದುರೆಯಾದ ವಿರಾಟ್, 13 ಬಾರಿ ಗಣರಾಜ್ಯೋತ್ಸವ ಪಥಸಂಚಲನಗಳಲ್ಲಿ ಭಾಗವಹಿಸಿತ್ತು. ಈ ಕುದುರೆ, ಜನವರಿ 15ರ ಸೇನಾ ದಿನದಂದು ಸೇನಾ ಸಿಬ್ಬಂದಿ ಕಮೆಂಡೇಷನ್ ಗೌರವ ಪಡೆದಿತ್ತು. ಈ ಗೌರವ ಪಡೆದ ಮೊದಲ ಕುದುರೆ ಎನಿಸಿತ್ತು. ಹಾನೋವೇರಿಯನ್ ತಳಿಯ ಈ ಕುದುರೆಯನ್ನು 2003ರಲ್ಲಿ ಅಂಗರಕ್ಷಕ ಪಡೆಗೆ ಸೇರ್ಪಡೆ ಮಾಡಲಾಗಿತ್ತು. ಇದಕ್ಕೆ ರಾಷ್ಟ್ರಪತಿ ಬಾಡಿಗಾರ್ಡ್ನ ‘ಚಾರ್ಜರ್’ ಎಂದೂ ಕರೆಯಲಾಗುತ್ತಿತ್ತು.
- ಧನ್ ಬಾದ್ ನಗರದ ಯುವಕರು ‘ನೇಕಿ ಕಿ ದೀವಾರ್’ ಎನ್ನುವ ಪರಿಕಲ್ಪನೆಯಡಿ ಗೋಡೆ ಮೇಲೆ ಸ್ವೆಟರ್ ಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.
- ಜಾಗತಿಕ ಮಟ್ಟದ ಶ್ರೀಮಂತ (ಬೆಲೆಬಾಳುವ) ಐಟಿ ಕಂಪನಿಗಳ ಟಾಪ್ 25 ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಭಾರತದ 6 ಕಂಪನಿಗಳು ಸ್ಥಾನಪಡೆದಿವೆ. ಮೊದಲನೇ ಸ್ಥಾನವನ್ನು ಅಕ್ಸೆಂಚರ್ ಕಂಪನಿ ತನ್ನದಾಗಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಇದ್ದರೆ, ಮೂರನೇ ಸ್ಥಾನದಲ್ಲಿ ಇನ್ಫೋಸಿಸ್ ಕಂಪನಿ ಸ್ಥಾನ ಪಡೆದಿದೆ. ಇನ್ನುಳಿದಂತೆ ವಿಪ್ರೊ (7), ಎಚ್ ಸಿ ಎಲ್ (8), ಟೆಕ್ ಮಹೀಂದ್ರ (15) ಮತ್ತು ಎಲ್ ಟಿ ಐ (22) ಕಂಪನಿಗಳು ಟಾಪ್ 25 ಶ್ರೀಮಂತ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
- ಡಿಸೆಂಬರ್ 7, 2021 ರಂದು ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಕೇಂದ್ರ ಸರ್ಕಾರ ಡಾ. ವಿ ಅನಂತ ನಾಗೇಶ್ವರನ್ ಅವರನ್ನು ನೇಮಕ ಮಾಡಿದೆ.
- ಕಳೆದ ಡಿಸೆಂಬರ್ ನಲ್ಲಿ ಸೇವೆಯಿಂದ ಅಧಿಕೃತವಾಗಿ ನಿವೃತ್ತಿ ಹೊಂದಿದ ಭಾರತೀಯ ನೌಕಾಪಡೆಯ ಮೊದಲ ಸ್ವದೇಶಿ ನಿರ್ಮಿತ ಕ್ಷಿಪಣಿ ಕಾರ್ವೆಟ್ ಐಎನ್ಎಸ್ ಖುಕ್ರಿಯನ್ನು ಶೀಘ್ರದಲ್ಲೇ ಮ್ಯೂಸಿಯಂ ಆಗಿ ಪರಿವರ್ತನೆ ಮಾಡಲಾಗುವುದು ಎಂದು ಸೇನಾ ಮೂಲಗಳು ಹೇಳಿವೆ.