Published on: September 29, 2021

ಸುದ್ಧಿ ಸಮಾಚಾರ 29 ಸೆಪ್ಟೆಂಬರ್ 2021

ಸುದ್ಧಿ ಸಮಾಚಾರ 29 ಸೆಪ್ಟೆಂಬರ್ 2021

  • ರಾಜ್ಯದ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ಡಾ.ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯ ಶಿಫಾರಸ್ಸಿನಂತೆ ಜಾರಿಯಲ್ಲಿರುವ ‘ವಿಶೇಷ ಅಭಿವೃದ್ಧಿ ಯೋಜನೆ’ಯನ್ನು ಬದಲಿಸಿ, ನೀತಿ ಆಯೋಗ ಸೂಚಿಸಿರುವ 49 ಸೂಚಕಗಳನ್ನು ಅಳವಡಿಸಿ ‘ಪ್ರಾದೇಶಿಕ ಸಮತೋಲನ ಯೋಜನೆ’ ಎಂಬ ಹೆಸರಿನಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
  • ಪ್ರಧಾನಿ ನರೇಂದ್ರ ಮೋದಿ 35 ಬಗೆಯ ವಿವಿಧ ಬೆಳೆಗಳ ಸುಧಾರಿತ ತಳಿಯ ಬೀಜಗಳನ್ನು ದೇಶಕ್ಕೆ ಅರ್ಪಿಸಿದರು. ಈ ವಿಶೇಷ ತಳಿಗಳು ಹವಾಮಾನ ಬದಲಾವಣೆಗೆ ನಿರೋಧಕವಾಗಿರುವ ಜತೆಗೆ ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿರಲಿವೆ. ಅಂದರೆ, ಈ ತಳಿಗಳು ಹವಾಮಾನ ಬದಲಾವಣೆಯ ಪರಿಣಾಮಕ್ಕೆ ಒಳಪಡುವುದಿಲ್ಲ. ಈ ತಳಿಗಳನ್ನು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಅಭಿವೃದ್ಧಿಪಡಿಸಿದೆ.
  • ಜವಳಿ ಉದ್ಯಮಕ್ಕೆ ಈಚೆಗೆ ಘೋಷಿಸಲಾಗಿರುವ ₹10,683 ಕೋಟಿ ಮೊತ್ತದ ತಯಾರಿಕೆ ಆಧಾರಿತ ಉತ್ತೇಜನ (ಪಿಎಲ್ಐ) ಯೋಜನೆಯಲ್ಲಿ ಭಾರತದಲ್ಲಿ ನೋಂದಣಿ ಆಗಿರುವ ತಯಾರಿಕಾ ಕಂಪನಿಗಳು ಮಾತ್ರ ಪಾಲ್ಗೊಳ್ಳಬಹುದು ಎಂದು ಕೇಂದ್ರ ಜವಳಿ ಸಚಿವಾಲಯ ಹೇಳಿದೆ.
  • ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ರಕ್ಷಣಾ ಸಚಿವಾಲಯವು ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ (OFB) ವನ್ನು ರದ್ದುಪಡಿಸಿದ್ದು, ಮತ್ತು ಅಲ್ಲಿದ್ದ ಆಸ್ತಿ, ಉದ್ಯೋಗಿಗಳು ಮತ್ತು ನಿರ್ವಹಣೆಯನ್ನು ಏಳು ಸಾರ್ವಜನಿಕ ವಲಯದ ಘಟಕಗಳಿಗೆ (PSU) ವರ್ಗಾಯಿಸಿದೆ.
  • ಈಗ ಜಾರಿಯಲ್ಲಿ ಇರುವ ವಿದೇಶ ವ್ಯಾಪಾರ ನೀತಿಯನ್ನು (ಎಫ್ಟಿಪಿ) ಮಾರ್ಚ್ 31ರವರೆಗೂ ಮುಂದುವರಿಸಲಾಗುವುದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ. ಈ ನೀತಿಯು ಆರ್ಥಿಕ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿ ಹೆಚ್ಚಿಸುವ ಉದ್ದೇಶದಿಂದ ರಫ್ತು ಹೆಚ್ಚು ಮಾಡಲು ಮಾರ್ಗಸೂಚಿಗಳನ್ನು ಒದಗಿಸುತ್ತದೆ.
  • ಹೃದಯದ ಬಗ್ಗೆ ನಿಷ್ಕಾಳಜಿ ಬೇಡ, ಪುಟ್ಟ ಹೃದಯದ ಮಿಡಿತ ಚೆನ್ನಾಗಿರಬೇಕೆಂಬ ಸದುದ್ದೇಶದಿಂದಲೇ ಜಿನೇವಾದಲ್ಲಿರುವ ವಿಶ್ವ ಹಾರ್ಟ್ ಫೆಡರೇಶನ್ ಪ್ರತಿವರ್ಷ ಸೆ. 29 ರಂದು ಜಾಗತಿಕ ಮಟ್ಟದಲ್ಲಿ ವಿಶ್ವ ಹೃದಯ ದಿನವನ್ನಾಗಿ ಆಚರಿಸುತ್ತಿದೆ.