Published on: December 3, 2022
ಸುದ್ಧಿ ಸಮಾಚಾರ : 3 ಡಿಸೆಂಬರ್ 2022
ಸುದ್ಧಿ ಸಮಾಚಾರ : 3 ಡಿಸೆಂಬರ್ 2022
-
ಗುಜರಾತ್ ವಿಧಾನಸಭೆಗೆ ಚುನಾವಣೆಯಲ್ಲಿ ಸೌರಾಷ್ಟ್ರ, ಕಛ್, ದಕ್ಷಿಣ ಭಾಗ ಒಳಗೊಂಡ ಈ ಇದೇ ಮೊದಲ ಬಾರಿಗೆ ಗುಜರಾತ್ನ ಆಫ್ರಿಕನ್ ವಿಲೇಜ್ (ಆಫ್ರಿಕನ್ ಗ್ರಾಮ) ಎಂದು ಹೆಸರಾದ ಬುಡಕಟ್ಟು ಹಳ್ಳಿಯ ಜನರಿಗೆ ಮತದಾನದ ಹಕ್ಕನ್ನು ನೀಡಲಾಗಿದೆ. ಗುಜರಾತ್ನ ಜುನಾಗಡ್ ಜಿಲ್ಲೆಯ ಜಾಂಬೂರ್ ಎಂಬ ಹಳ್ಳಿಗುಜರಾತ್ನ ಆಫ್ರಿಕನ್ ವಿಲೇಜ್ ಎಂದು ಖ್ಯಾತಿಯಾಗಿದೆ.
- ಪ್ರಯಾಣಿಕರಿಗೆ ವಿಮಾನ ನಿಲ್ದಾಣದೊಳಗೆ ಹೆಚ್ಚು ಅಡೆತಡೆ ಇಲ್ಲದೆ ಪ್ರವೇಶ ಕಲ್ಪಿಸುವ ಹಾಗೂ ವಿಮಾನ ಹತ್ತುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿರುವ ‘ಡಿಜಿ ಯಾತ್ರಾ’ ಸೇವೆಗೆ ಚಾಲನೆ ನೀಡಲಾಗಿದೆ. ಇದು ಆ್ಯಪ್ ಆಧಾರಿತ ಸೇವೆಯಾಗಿದ್ದು, ಮುಖ ಗುರುತಿಸುವಿಕೆ ತಂತ್ರಜ್ಞಾನ (ಫೇಸಿಯಲ್ ರೆಕಗ್ನೈಸೇಷನ್) ಒಳಗೊಂಡಿರಲಿದೆ.
- ಗಡಿ ಭಾಗದಲ್ಲಿ ಪಾಕಿಸ್ತಾನದ ಸೇನೆ ಮತ್ತು ಉಗ್ರರು ಡ್ರೋನ್ ಮೂಲಕ ಉಗ್ರರಿಗೆ ನೆರವಾಗುತ್ತಿರುವ ಚಟುವಟಿಕೆ ಭಾರತಕ್ಕೆ ತಲೆನೋವಾಗಿದೆ. ಇದನ್ನು ನಿವಾರಿಸಲು ಭಾರತೀಯ ಪಡೆಯು ಹದ್ದು ಮತ್ತು ನಾಯಿಗಳಿಗೆ ತರಬೇತಿ ನೀಡುತ್ತಿದೆ. ಬ್ಲ್ಯಾಕ್ ಈಗಲ್, ಫ್ಯಾಲ್ಕನ್ ಪ್ರಭೇದದ ಪಕ್ಷಿಗಳಿಗೆ ಸೇನೆಯಿಂದ ತರಬೇತಿ ನೀಡಲಾಗುತ್ತಿದೆ. ಮೀರತ್ನ ರೆಮೌಂಟ್ ವೆಟರ್ನರಿ ಕೋರ್ (ಆರ್ವಿಸಿ) ಕೇಂದ್ರದಲ್ಲಿ ಪಕ್ಷಿಗಳಿಗೆ ಶತ್ರುಪಡೆಯ ಡ್ರೋನ್ ಗುರುತಿಸಲು ನಿತ್ಯ ತಾಲೀಮು ಮಾಡಿಸಲಾಗುತ್ತಿದೆ.
- ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಜನವಸತಿ ಇಲ್ಲದ 21 ದ್ವೀಪಗಳಿಗೆ ದೇಶದ ಅತ್ಯುತ್ತಮ ಸೇನಾ ಪ್ರಶಸ್ತಿಯಾದ ಪರಂವೀರ ಚಕ್ರ ಪ್ರಶಸ್ತಿ ಸ್ವೀಕರಿಸಿದ ಸೈನಿಕರ ಹೆಸರನ್ನು ಕೇಂದ್ರ ಸರ್ಕಾರ ಹೆಸರಿಸಿದೆ.
- ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ವಿಶ್ವವಿದ್ಯಾಲಯಗಳ ಮೌಲ್ಯಮಾಪನ ನಡೆಸಿ, ಗುಣಮಟ್ಟವನ್ನು ಶ್ರೇಣೀಕರಿಸುವ ಸ್ವತಂತ್ರ ಸಂಸ್ಥೆಯಾದ ‘ಕ್ವಕ್ಕ್ವಾರೆಲಿ ಸೈಮಂಡ್ಸ್ (ಕ್ಯು.ಎಸ್.) ಇತ್ತೀಚೆಗೆ ಪ್ರಕಟಿಸಿರುವ ‘ವಿಶ್ವ ವಿಶ್ವವಿದ್ಯಾಲಯ ರ್ಯಾಂಕಿಂಗ್’ನಲ್ಲಿ ಮೈಸೂರು ವಿಶ್ವವಿದ್ಯಾಲಯವು 110ನೇ ಸ್ಥಾನ ಪಡೆದಿದೆ’.
- ಎಮಿಸರಿ ಆಫ್ ಪೀಸ್’ ಪ್ರಶಸ್ತಿ : ಮೆಂಫಿಸ್ ನಗರದ ನ್ಯಾಷನಲ್ ಸಿವಿಲ್ ರೈಟ್ಸ್ ಮೂಸಿಯಂ, ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಅವರಿಗೆ ‘ದಿ ಎಮಿಸರಿ ಆಫ್ ಪೀಸ್‘ (ಶಾಂತಿಯ ರಾಯಭಾರಿ) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ‘ಜಾಗತಿಕ ಮಾನವತಾವಾದಿಯಾಗಿರುವ ಜಗತ್ತಿನ 180 ದೇಶಗಳ ಕೋಟಿ ಕೋಟಿ ಜನರನ್ನು ತತಲುಪಿದ್ದಕ್ಕಾಗಿ. ಹಾಗೂ ಯುದ್ಧವನ್ನು ತಡೆಯಲು ಇವರು ಪ್ರತಿಪಾದಿಸುವ ಉಪಕ್ರಮಗಳಿಗಾಗಿ ಈ ಪ್ರಶಸ್ತಿಯನ್ನುನೀಡಲಾಗಿದೆ’. ಶ್ರೀ ಶ್ರೀ ರವಿಶಂಕರ್ ಅವರು ‘ಐ ಸ್ಟ್ಯಾಂಡ್ ಫಾರ್ ಪೀಸ್’ ಎನ್ನುವ ಜಾಗತಿಕ ಪ್ರಯಾಣವನ್ನು ಕೈಗೊಂಡಿದ್ದಾರೆ. ಈ ಪ್ರಯಾಣದ ಭಾಗವಾಗಿ ಅವರು ಮೆಂಫಿಸ್ ನಗರವನ್ನು ತಲುಪಿದ್ದರು. ನವೆಂಬರ್ ಮೊದಲ ವಾರ ಅಟ್ಲಾಂಟಾದಲ್ಲಿ ಗುರೂಜಿ ಅವರಿಗೆ ’ಗಾಂಧಿ ಪೀಸ್ ಪಿಲಿಗ್ರಿಮ್’ ಪ್ರಶಸ್ತಿ ನೀಡಲಾಗಿತ್ತು.
- ಟಾಟಾ ಸಮೂಹ ಒಡೆತನದ ಏರ್ ಇಂಡಿಯಾದೊಂದಿಗೆ ವಿಸ್ತಾರಾ ಏರ್ ಲೈನ್ಸ್ ಅನ್ನು ವಿಲೀನಗೊಳಿಸಲಾಗುವುದು ಎಂದು ಸಿಂಗಾಪುರ್ ಏರ್ಲೈನ್ಸ್ ಘೋಷಿಸಿದೆ. ಟಾಟಾ ಸಮೂಹವು ವಿಸ್ತಾರಾದಲ್ಲಿ ಶೇ. 51 ರಷ್ಟು ಪಾಲನ್ನು ಹೊಂದಿದೆ ಮತ್ತು ಉಳಿದ ಶೇಕಡಾ 49 ರಷ್ಟು ಷೇರುಗಳು ಸಿಂಗಾಪುರ್ ಏರ್ಲೈನ್ಸ್(ಎಸ್ಐಎ) ನಲ್ಲಿದೆ.
- ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು 5 ವಿಕೆಟ್ ಅಂತರದಿಂದ ಮಣಿಸಿ ಸೌರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
- ಕೆನರಾ ಬ್ಯಾಂಕ್ಗೆ ‘ಬ್ಯಾಂಕರ್ಸ್ ಬ್ಯಾಂಕ್ ಆಫ್ ದಿ ಇಯರ್’ ಪ್ರಶಸ್ತಿ :ಲಂಡನ್ನಿನಲ್ಲಿ ಈಚೆಗೆ ನಡೆದ ಜಾಗತಿಕ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಕೆನರಾ ಬ್ಯಾಂಕ್ಗೆ ಭಾರತ ವಿಭಾಗದಲ್ಲಿ 2022ನೆಯ ಸಾಲಿನ ‘ಬ್ಯಾಂಕರ್ಸ್ ಬ್ಯಾಂಕ್ ಆಫ್ ದಿ ಇಯರ್’ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪ್ರಶಸ್ತಿಯು ಬ್ಯಾಂಕಿಂಗ್ ಉದ್ಯಮದ ಪಾಲಿಗೆ ಆಸ್ಕರ್ ಪ್ರಶಸ್ತಿ ಇದ್ದಂತೆ. ಪ್ರಶಸ್ತಿಯ ಮೂಲಕ ಕೆನರಾ ಬ್ಯಾಂಕ್ಅನ್ನು 2022ನೆಯ ಸಾಲಿನಲ್ಲಿ ಭಾರತದ ಅತ್ಯುತ್ತಮ ಬ್ಯಾಂಕ್ ಎಂದು ಪರಿಗಣಿಸಿದಂತಾಗಿದೆ.
- ಜಲ ತಜ್ಞ ಚಂದ್ರಶೇಖರ್ ಅಯ್ಯರ್ ಅವರು ‘ಕೇಂದ್ರ ಜಲ ಆಯೋಗದ’ (CWC) ಮುಂದಿನ ಅಧ್ಯಕ್ಷರಾಗಿ ನಿಯುಕ್ತಿಯಾಗಿದ್ದಾರೆ. ಚಂದ್ರಶೇಖರ್ ಅವರು ಜಲ ಆಯೋಗದ ಅಧ್ಯಕ್ಷ ಹುದ್ದೆಯ ಜೊತೆ ‘ಅಣೆಕಟ್ಟುಗಳ ರಕ್ಷಣೆ ರಾಷ್ಟ್ರೀಯ ಪ್ರಾಧಿಕಾರ’ದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.
- ಚೀನಾ ಮೂಲದ ಹುವೈ ಮತ್ತು ಝೆಡ್ಟಿಇ ಕಂಪನಿ ತಯಾರಿಸಿರುವ ಎಲ್ಲ ಮಾದರಿಯ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಉಪಕರಣಗಳ ಮಾರಾಟ ಮತ್ತು ಬಳಕೆಗೆ ಅಮೆರಿಕ ನಿಷೇಧ ಹೇರಿದೆ. ಚೀನಾ ಮೂಲದ ಉಪಕರಣಗಳ ಬಳಕೆ ದೇಶದ ಭದ್ರತೆಗೆ ಅಪಾಯ ತರಬಲ್ಲದು, ಹೀಗಾಗಿ ಅವುಗಳನ್ನು ಬಳಸಬಾರದು ಎಂದು ಸರ್ಕಾರ ಹೇಳಿದೆ.
- ಸಲಿಂಗ ವಿವಾಹದ ಫೆಡರಲ್ ಮಾನ್ಯತೆಯನ್ನು ರಕ್ಷಿಸುವ ಮಸೂದೆಯನ್ನು ಅಮೆರಿಕದ ಸೆನೆಟ್ ಅಂಗೀಕರಿಸಿದೆ.
ಅಮೆರಿಕದಲ್ಲಿ 2015ರಲ್ಲೇ ಸಲಿಂಗ ವಿವಾಹವನ್ನು ರಾಷ್ಟ್ರವ್ಯಾಪಿ ಕಾನೂನುಬದ್ಧಗೊಳಿಸಲಾಗಿದ್ದು, ಇದನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಮಸೂದೆ ಜಾರಿ ಮಾಡಲಾಗಿದೆ.