Published on: October 30, 2022
ಸುದ್ಧಿ ಸಮಾಚಾರ – 30 ಅಕ್ಟೋಬರ್ 2022
ಸುದ್ಧಿ ಸಮಾಚಾರ – 30 ಅಕ್ಟೋಬರ್ 2022
- ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಭಾರತದ ಮೊದಲನೆಯ ‘ಫ್ಲೆಕ್ಸ್ ಇಂಧನ’ ಕೇಂದ್ರ ಆರಂಭವಾಗಲಿದೆ. ಈ ಫ್ಲೆಕ್ಸ್ ಇಂಧನ ಕೇಂದ್ರವು ಜೈವಿಕ ಸಿಎನ್ಜಿ, ಎಥೆನಾಲ್ ಮಿಶ್ರಿತ ಗ್ಯಾಸೋಲಿನ್ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಫ್ಲೆಕ್ಸ್ ಇಂಧನ ಅಥವಾ ಹೊಂದಿಕೊಳ್ಳುವ ಇಂಧನವು ಪರ್ಯಾಯ ಇಂಧನವಾಗಿದ್ದು, ಇದರಲ್ಲಿ ಗ್ಯಾಸೋಲಿನ್ ಅನ್ನು ಮೆಥನಾಲ್ ಅಥವಾ ಎಥೆನಾಲ್ನೊಂದಿಗೆ ಸಂಯೋಜಿಸಲಾಗುತ್ತದೆ.
- ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಹಾಗೂ ಹೆಚ್ಚು ಇಳುವರಿ ನೀಡುವ ಹೈಬ್ರಿಡ್ ಕುಲಾಂತರಿ (ಡಿಎಂಎಚ್–11) ಸಾಸಿವೆ ಬೆಳೆಯಲು ಕೇಂದ್ರ ಪರಿಸರ ಸಚಿವಾಲಯ ಅನುಮತಿ ನೀಡಿದೆ. ಇದು ವಾಣಿಜ್ಯ ಬಳಕೆಯ ಮೊದಲ ಕುಲಾಂತರಿ ಆಹಾರ ಬೆಳೆಯಾಗಿದೆ. ಬಿ.ಟಿ ಹತ್ತಿ ನಂತರ ಪರವಾನಗಿ ಪಡೆದ ಎರಡನೇ ವಾಣಿಜ್ಯ ಬೆಳೆಯಾಗಿದೆ.
- ಪುರುಷ ಕ್ರಿಕೆಟಗರಿಗೆ ನೀಡುವಷ್ಟೇ ಸಂಭಾವನೆ ಯನ್ನು ಮಹಿಳಾ ಕ್ರಿಕೆಟಿಗರಿಗೂ ನೀಡುವ ಐತಿಹಾಸಿಕ ತೀರ್ಮಾನವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ತೆಗೆದುಕೊಂಡಿದೆ. ಬಿಸಿಸಿಐ ಅಪೆಕ್ಸ್ ಸಮಿತಿ ತುರ್ತುಸಭೆಯಲ್ಲಿ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ.
- ಇಸ್ರೊ ತನ್ನ ಉಪಗ್ರಹಗಳ ಮೂಲಕ ರೂಪಿಸಿರುವ ದೇಶೀಯ ಮಾರ್ಗಸೂಚಿ ವ್ಯವಸ್ಥೆಯಾದ ‘ನಾವಿಕ್’ (NaVIC) ಅನ್ನು ನಾಗರಿಕ ವಲಯಗಳಿಗೂ ವಿಸ್ತರಿಸಲು ಮುಂದಾಗಿದೆ. ದೇಶದ ಗಡಿಗಳಿಂದ ದೂರಕ್ಕೆ ಸಾಗುವ ಹಡಗುಗಳು ಹಾಗೂ ವಿಮಾನಗಳಲ್ಲಿ ನಾವಿಕ್ ಬಳಸಲು ಅನುವಾಗುವಂತೆ ವಿಸ್ತರಣೆಯ ನಿರ್ಧಾರ ಕೈಗೊಳ್ಳಲಾಗಿದೆ.
- ಜಗತ್ತಿನ ಅತಿ ಎತ್ತರದ ಶಿವ ಪ್ರತಿಮೆ: ಜಗತ್ತಿನಲ್ಲಿಯೇ ಅತ್ಯಂತ ಎತ್ತರದು ಎನ್ನಲಾದ ಶಿವನ ವಿಗ್ರಹವನ್ನು ರಾಜಸ್ಥಾನದ ರಾಜಸಮಂದ್ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. 369 ಅಡಿ ಎತ್ತರದ ‘ವಿಶ್ವಾಸ್ ಸ್ವರೂಪಮ್’ ಶಿವನ ಪ್ರತಿಮೆಯನ್ನು ನತದ್ವಾರಾ ಪಟ್ಟಣದಲ್ಲಿ ಉದ್ಘಾಟಿಸಲಾಗುತ್ತದೆ. ಈ ವಿಗ್ರಹವು 250 ಕಿಮೀ ವೇಗದಲ್ಲಿ ಗಾಳಿ ಬೀಸಿದರೂ ತಡೆದುಕೊಳ್ಳಲಿದೆ ಎನ್ನಲಾಗಿದೆ. ಉದಯಪುರದಿಂದ ಸುಮಾರು 45 ಕಿಮೀ ದೂರದಲ್ಲಿರುವ ಪ್ರತಿಮೆಯನ್ನು ತತ್ ಪದಮ್ ಸಂಸ್ಥಾನ ನಿರ್ಮಿಸಿದೆ.
- ಮೆಕ್ಸಿಕೊದ ಗಡಿ ರಾಜ್ಯವಾದ ತಮೌಲಿಪಾಸ್ ಸಲಿಂಗ ವಿವಾಹಕ್ಕೆ ಒಪ್ಪಿಗೆ ನೀಡಿದೆ. ಸಲಿಂಗ ವಿವಾಹ ಕಾನೂನುಬದ್ಧಗೊಳಿಸುವ ಪರವಾಗಿ ಶಾಸಕರು ಮತ ಚಲಾಯಿಸಿದರು. ಇದರೊಂದಿಗೆ ಮೆಕ್ಸಿಕೊದ ಎಲ್ಲಾ 32 ರಾಜ್ಯಗಳಲ್ಲೂ ಸಲಿಂಗ ವಿವಾಹ ಕಾನೂನುಬದ್ಧವಾಗಿದೆ.