Published on: December 16, 2021

ಸೆಮಿಕಂಡಕ್ಟರ್ ನೀತಿ

ಸೆಮಿಕಂಡಕ್ಟರ್ ನೀತಿ

ಸುದ್ಧಿಯಲ್ಲಿ ಏಕಿದೆ ? ದೇಶದಲ್ಲಿ ಸೆಮಿಕಂಡಕ್ಟರ್‌ ಚಿಪ್‌ಗಳ ವಿನ್ಯಾಸ ಮತ್ತು ಉತ್ಪಾದನೆ ಹೆಚ್ಚಿಸಲು 76 ಸಾವಿರ ಕೋಟಿ ರೂ.ಗಳ ನೂತನ ಸೆಮಿಕಂಡಕ್ಟರ್‌ ನೀತಿಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಈ ನೀತಿಯಿಂದಾಗುವ ಪ್ರಯೋಜನಗಳು

  • ಈ ನಿರ್ಧಾರದಿಂದ ಸೆಮಿಕಂಡಕ್ಟರ್‌ ವಿನ್ಯಾಸ ಮತ್ತು ಉತ್ಪಾದನೆಗೆ ಪ್ರೋತ್ಸಾಹ ದೊರೆಯಲಿದೆ. ಆತ್ಮನಿರ್ಭರ ಭಾರತ ಅಭಿಯಾನವನ್ನು ಬಲಪಡಿಸಲಿದೆ
  • ಎಲೆಕ್ಟ್ರಾನಿಕ್ಸ್‌ಗಳು ದಿನ ನಿತ್ಯದ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಸೆಮಿಕಂಡಕ್ಟರ್‌ ಚಿಪ್‌ಗಳು ಇದಕ್ಕೆ ನಿರ್ಣಾಯಕವಾಗಿದೆ. ಇದರಿಂದಾಗಿ ಭಾರತದಲ್ಲಿ ಎಲೆಕ್ಟ್ರಾನಿಕ್ಸ್‌ ಉತ್ಪಾದನೆಯ ಹೊಸ ಯುಗ ಆರಂಭವಾಗಲಿದೆ. ಸೆಮಿಕಂಡಕ್ಟರ್‌ ವಲಯದ ಕಂಪನಿಗಳಿಗೆ ಭಾರತ ಆಕರ್ಷಕ ತಾಣವೆನಿಸಲಿದೆ

ನೀತಿಯಲ್ಲಿ ಏನಿರಲಿದೆ ?

  • ಸೆಮಿಕಂಡಕ್ಟರ್‌ ಘಟಕಗಳನ್ನು ಸ್ಥಾಪಿಸುವ ಅರ್ಹ ಕಂಪನಿಗಳಿಗೆ ಯೋಜನೆಯ ವೆಚ್ಚದಲ್ಲಿ ಅರ್ಧ ಮೊತ್ತವನ್ನು ಸರಕಾರ ಭರಿಸಲಿದೆ. ಹೈಟೆಕ್‌ ಕ್ಲಸ್ಟರ್‌ಗಳನ್ನು ರೂಪಿಸಲು ಕೇಂದ್ರ ಸರಕಾರವು ರಾಜ್ಯಗಳ ಜತೆಗೆ ಸಂಪರ್ಕದಲ್ಲಿದೆ. ಕನಿಷ್ಠ ಎರಡು ಗ್ರೀನ್‌ಫೀಲ್ಡ್‌ ಸೆಮಿಕಂಡಕ್ಟರ್‌ ಫ್ಯಾಬ್‌ಗಳನ್ನು ಮತ್ತು 2 ಡಿಸ್‌ಪ್ಲೇ ಫ್ಯಾಬ್‌ಗಳನ್ನು ಸ್ಥಾಪಿಸಲು ರಾಜ್ಯ ಸರಕಾರಗಳ ಜತೆಗೆ ಕೇಂದ್ರ ಸಮಾಲೋಚಿಸುತ್ತಿದೆ.
  • ಸೆಮಿಕಂಡಕ್ಟರ್‌ ಲ್ಯಾಬೊರೇಟರಿಗಳ (ಎಸ್‌ಸಿಎಲ್‌) ಆಧುನೀಕರಣ, ಸೆಮಿಕಂಡಕ್ಟರ್‌ ಎಟಿಎಂಪಿ, ಒಎಸ್‌ಎಟಿ ಸೌಲಭ್ಯಗಳನ್ನೂ ಯೋಜನೆಯ ಮೂಲಕ ಕೈಗೊಳ್ಳಲಾಗುವುದು. ಇಂಥ ಕನಿಷ್ಠ 15 ಘಟಕಗಳ ಸ್ಥಾಪನೆಗೆ ಸರಕಾರ ಮುಂದಾಗಲಿದೆ.
  • ಮುಂದಿನ 5 ವರ್ಷಗಳಲ್ಲಿ 1,500 ಕೋಟಿ ರೂ. ವಹಿವಾಟು ನಡೆಸಬಲ್ಲ ಸಾಮರ್ಥ್ಯ ಇರುವ ಸೆಮಿಕಂಡಕ್ಟರ್‌ ಕಂಪನಿಗಳಿಗೆ ನೆರವು ಸಿಗಲಿದೆ. ಒಟ್ಟಾರೆಯಾಗಿ ಭಾರತವನ್ನು ಎಲೆಕ್ಟ್ರಾನಿಕ್ಸ್‌ ಉತ್ಪಾದನೆ ಮತ್ತು ಸೆಮಿಕಂಡಕ್ಟರ್‌ ಚಿಪ್‌ ಅಭಿವೃದ್ಧಿಯ ಪ್ರಮುಖ ತಾಣವನ್ನಾಗಿಸಲು 2.30 ಲಕ್ಷ ಕೋಟಿ ರೂ.ಗಳನ್ನು ಒದಗಿಸಲು ಕೇಂದ್ರ ಸರಕಾರ ಬದ್ಧವಾಗಿದೆ.

ಹೊಸ ನೀತಿಯ ಅಗತ್ಯ ಏನು?

  • ಕೋವಿಡ್‌ ಬಿಕ್ಕಟ್ಟಿನ ನಡುವೆ ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್‌ ಚಿಪ್‌ಗಳ ಕೊರತೆಯ ಪರಿಣಾಮ ಭಾರತ ಸೇರಿದಂತೆ ನಾನಾ ರಾಷ್ಟ್ರಗಳಲ್ಲಿ ಸಮಸ್ಯೆ ಬಿಗಡಾಯಿಸಿತ್ತು. ಆಟೊಮೊಬೈಲ್‌ ವಲಯದಲ್ಲಿ ಕಾರುಗಳು, ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನೆಗೆ ತೀವ್ರ ಅಡ್ಡಿಯಾಗಿತ್ತು. ಹಬ್ಬದ ಸೀಸನ್‌ನಲ್ಲಿ ಆಟೊಮೊಬೈಲ್‌ ವಲಯಕ್ಕೆ ಬೇಡಿಕೆ ಇದ್ದರೂ, ಪೂರೈಸಲು ಸಾಧ್ಯವಾಗಿರಲಿಲ್ಲ.
  • ಚಿಪ್‌ ಕೊರತೆಯಿಂದಾಗಿ ಆಟೊಮೊಬೈಲ್‌ ಮಾತ್ರವಲ್ಲದೆ ಟಿ.ವಿ, ಸ್ಮಾರ್ಟ್‌ಫೋನ್‌, ನಾನಾ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯ ಆಗಿತ್ತು. ಭಾರತ ಸೆಮಿಕಂಡಕ್ಟರ್‌ ಚಿಪ್‌ಗಳ ವಿನ್ಯಾಸ, ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದರೂ, ಉತ್ಪಾದನೆಯಲ್ಲಿ ಹಿಂದುಳಿದಿದೆ. ಈ ಅಂತರವನ್ನು ಕಡಿಮೆ ಮಾಡುವುದು ಅನಿವಾರ್ಯವಾಗಿದೆ. ಏಕೆಂದರೆ ಚಿಪ್‌ಗಳು ಭಾರತ ಆಮದನ್ನು ಅವಲಂಬಿಸಿದೆ.