Published on: October 12, 2021
ಸೈಬರ್ ಕ್ರೈಂನಲ್ಲಿ ಬೆಂಗಳೂರೇ ನಂಬರ್ ವನ್
ಸೈಬರ್ ಕ್ರೈಂನಲ್ಲಿ ಬೆಂಗಳೂರೇ ನಂಬರ್ ವನ್
ಸುದ್ಧಿಯಲ್ಲಿ ಏಕಿದೆ? ಸೈಬರ್ ಅಪರಾಧ ಪ್ರಕರಣಗಳಲ್ಲಿ ಬೆಂಗಳೂರು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.
- ಎನ್‌ಸಿಆರ್‌ಬಿ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಂತೆ ದೇಶದಲ್ಲಿ 2020ರಲ್ಲಿ 18,657 ಸೈಬರ್ ಅಪರಾಧ ಪ್ರಕರಣ ದಾಖಲಾಗಿದೆ. ಅವುಗಳಲ್ಲಿ ಶೇ.47ರಷ್ಟು, ಅಂದರೆ 8892 ಪ್ರಕರಣಗಳು ಬೆಂಗಳೂರು ನಗರದಲ್ಲೇ ದಾಖಲಾಗಿವೆ. 2020ರಲ್ಲಿ ನಗರದಲ್ಲಿ ಒಂದೇ ಒಂದು ಪ್ರಕರಣದಲ್ಲೂ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ.
ಅಪರಾಧ ಹೆಚ್ಚಳಕ್ಕೆ ಕಾರಣಗಳು
- ಇಂತಹ ಅಪರಾಧಗಳನ್ನು ಹತ್ತಿಕ್ಕಲು ನಗರದಲ್ಲಿ ಹೊಸದಾಗಿ 8 ಸೈಬರ್ ಮತ್ತು ಆರ್ಥಿಕ ಅಪರಾಧ (ಸೆನ್) ಪೊಲೀಸ್ ಠಾಣೆಗಳನ್ನು ಸ್ಥಾಪಿಸಿ ಎರಡು ವರ್ಷಗಳಾಗುತ್ತಾ ಬಂದರೂ ಸರಕಾರ ಅವುಗಳಿಗೆ ಮೂಲಸೌಕರ‍್ಯ, ಅಗತ್ಯ ಸಿಬ್ಬಂದಿ ನೇಮಿಸಲು ಮುತುವರ್ಜಿ ತೋರಿಲ್ಲ.
- ಸೈಬರ್ ಅಪರಾಧ ಪ್ರಕರಣಗಳಲ್ಲಿ ದೂರು ನೀಡಿದರೆ ಅವು ಬೇಗ ಪತ್ತೆಯಾಗುತ್ತಿಲ್ಲ. ಸುಮಾರು 26 ಸಾವಿರಕ್ಕೂ ಅಧಿಕ ಪ್ರಕರಣಗಳಲ್ಲಿ ತನಿಖೆ ಬಾಕಿ ಇದೆ. ಆ ಠಾಣೆಗಳಲ್ಲಿ ಹಾಲಿ ಕಾರ‍್ಯನಿರ್ವಹಿಸುತ್ತಿರುವ ಸಿಬ್ಬಂದಿ ಅಧಿಕ ಕಾರ‍್ಯಭಾರದಿಂದ ಬಳಲುತ್ತಿರುವುದಲ್ಲದೆ ತಾಂತ್ರಿಕ ಪರಿಣತಿ, ಅಗತ್ಯ ಸಾಧನಗಳ ಕೊರತೆ ಎದುರಿಸುತ್ತಿದ್ದಾರೆ.
- ಸಿಬ್ಬಂದಿ ಕೊರತೆ: ಪ್ರತಿಯೊಂದು ಸೈಬರ್ ಪೊಲೀಸ್ ಠಾಣೆಗಳಿಗೂ 30 ಸಿಬ್ಬಂದಿ ಇರಬೇಕೆಂದು ಶಿಫಾರಸು ಮಾಡಲಾಗಿದೆ. ಆದರೆ ಸದ್ಯ ಪ್ರತಿ ಠಾಣೆಯಲ್ಲಿ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್, ಒಬ್ಬ ಸಬ್ ಇನ್ಸಪೆಕ್ಟರ್, ಆರು ಪೇದೆಗಳು ಸೇರಿ 8 ಸಿಬ್ಬಂದಿ ಮಾತ್ರ ಇದ್ದಾರೆ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು. ಈ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಮಾತ್ರವಲ್ಲ ಸಾಧನ, ಸಲಕರಣೆ, ಯಂತ್ರೋಪಕರಣಗಳ ಕೊರತೆಯೂ ಇದೆ.
ಎಷ್ಟುಪ್ರಕರಣ?
ಬೆಂಗಳೂರಿನಲ್ಲಿ ದಾಖಲಾಗಿರುವ ಸೈಬರ್ ಅಪರಾಧ
ವರ್ಷ | ಪ್ರಕರಣಗಳ ಸಂಖ್ಯೆ |
2018 | 5253 |
2019 | 10,555 |
2020 | 8892 |