Published on: January 19, 2022

ಸ್ಮಾರ್ಟ್ಸಿಟಿ ಕಾಮಗಾರಿ

ಸ್ಮಾರ್ಟ್ಸಿಟಿ ಕಾಮಗಾರಿ

ಸುದ್ಧಿಯಲ್ಲಿ ಏಕಿದೆ ? ರಾಜ್ಯದ 7 ಜಿಲ್ಲೆಗಳಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಅನುದಾನದ ಸಮಸ್ಯೆ ಇಲ್ಲದಿದ್ದರೂ ಕೊರೊನಾ ಕುಂಟು ನೆಪ ಹೇಳಿ ಕಾಮಗಾರಿಯ ಅಂತಿಮ ಗಡುವನ್ನು ವಿಸ್ತರಿಸಿಕೊಳ್ಳಲಾಗಿದೆ.

ಮುಖ್ಯಾಂಶಗಳು

  • ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿರುವ ದೇಶದ 100 ನಗರಗಳಲ್ಲಿ ರಾಜ್ಯದ ಬೆಂಗಳೂರು, ತುಮಕೂರು, ಮಂಗಳೂರು, ಶಿವಮೊಗ್ಗ,, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ದಾವಣಗೆರೆ ನಗರಗಳು ಸೇರಿವೆ.
  • 2015ರ ಜುಲೈ 25ರಂದು ಸ್ಮಾರ್ಟ್‌ಸಿಟಿ ಯೋಜನೆಗೆ ಚಾಲನೆ ನೀಡಲಾಯಿತು. ರಾಜ್ಯದಲ್ಲಿ 3 ಹಂತಗಳಲ್ಲಿ ಕಾಮಗಾರಿಯನ್ನು ಆರಂಭಿಸಲಾಯಿತು. 2021ಕ್ಕೆ ಎಲ್ಲಾ ಕಾಮಗಾರಿಗಳನ್ನು ಮುಗಿಸುವ ಗುರಿ ಹೊಂದಲಾಗಿತ್ತು. ಆದರೆ, ಇದೀಗ 2023ಕ್ಕೆ ಕಾಮಗಾರಿ ಗಡುವು ವಿಸ್ತರಿಸಲಾಗಿದೆ.

ಸಚಿವರಿಗೆ ಹೊಣೆಗಾರಿಕೆ ನೀಡಿಲ್ಲ

  • ಸ್ಮಾರ್ಟ್‌ ಸಿಟಿ ಯೋಜನೆ ಕೇಂದ್ರ ಸರಕಾರದ್ದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ರಾಜ್ಯದ ಯಾವ ಸಚಿವರಿಗೂ ಯೋಜನೆಯ ಜವಾಬ್ದಾರಿ ಹಾಗೂ ಅಧಿಕಾರವನ್ನು ಕೇಂದ್ರ ವಹಿಸಿಲ್ಲ. ಪ್ರಗತಿ ಪರಿಶೀಲನೆ ಅಧಿಕಾರವನ್ನೂ ಸಚಿವರಿಗೆ ನೀಡಿಲ್ಲ. ಸ್ಥಳೀಯ ಶಾಸಕರಿಗೂ ಯಾವುದೇ ರೀತಿಯ ಪ್ರಬಲ ಅಧಿಕಾರ ಸ್ಮಾರ್ಟ್‌ಸಿಟಿ ಯೋಜನೆಗೆ ಸಂಬಂಧಿಸಿದಂತೆ ಇಲ್ಲ. ಇದು ಕೂಡ ಸ್ಮಾರ್ಟ್‌ ಸಿಟಿ ಕಾಮಗಾರಿಗಳ ವಿಳಂಬಕ್ಕೆ ಪ್ರಮುಖ ಕಾರಣ.

ವಿಳಂಬ ಏಕೆ?

  • ಇಚ್ಛಾಶಕ್ತಿ ಕೊರತೆ, ಸ್ಮಾರ್ಟ್‌ ಸಿಟಿ ಹಗರಣಗಳ ಕೂಪವೆಂಬ ಆರೋಪ
  • ರಾಜ್ಯ ಸರಕಾರದ ಸಚಿವರಿಗೆ ಜವಾಬ್ದಾರಿ ನೀಡದಿರುವುದು
  • ಎಸ್‌ಸಿಎಂ, ಪಿಪಿಪಿ, ಕನ್ವರ್ಜೆನ್ಸ್‌ ಅಡಿ ಸಮನ್ವಯತೆ ಕೊರತೆ
  • ಅಧಿಕಾರಿಗಳ ಅಸಡ್ಡೆ, ನಿರ್ಲಕ್ಷ್ಯಧೋರಣೆ
  • ಸ್ಮಾರ್ಟ್‌ಸಿಟಿ ಅಧಿಕಾರಿಗಳು ಮಹಾನಗರ ಪಾಲಿಕೆ ಸದಸ್ಯರಿಗೇ ಮಾಹಿತಿ ನೀಡದೆ ಅವರನ್ನು ಬದಿಗಿಟ್ಟು ಕೆಲಸದ ಆರೋಪ.
  • ಲಾಕ್‌ಡೌನ್‌ನಿಂದ ಕಾರ್ಮಿಕರು ಹಾಗೂ ಕಚ್ಚಾ ವಸ್ತುಗಳ ಸಮಸ್ಯೆ
  • ರಾಜ್ಯದಲ್ಲಿ ಕಳೆದ ವರ್ಷ ಕ್ವಾರಿಗಳಿಗೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಸ್ಮಾರ್ಟ್‌ ಸಿಟಿಗಳ ನಿರ್ಮಾಣಕ್ಕೆ ಅಗತ್ಯವಿರುವ ಕಲ್ಲುಗಳ ಪೂರೈಕೆ ಸ್ಥಗಿತ

ಕಾಮಗಾರಿ ವಿಳಂಬದಿಂದ ಸಮಸ್ಯೆಗಳೇನು?

  • ವಿಳಂಬ ಕಾಮಗಾರಿಗಳಿಂದಾಗಿ ಸವಾರರಿಗೆ ತೀವ್ರ ಫಜೀತಿ
  • ಧೂಳಿನ ಸಮಸ್ಯೆಯಿಂದ ಬೀದಿ ಬದಿ ವ್ಯಾಪಾರಸ್ಥರಿಗೆ ಸಮಸ್ಯೆ
  • ಪ್ರಮುಖ ನಗರಗಳಲ್ಲಿ ಏಕಮುಖ ಚಲನೆಯಿಂದಾಗಿ ಟ್ರಾಫಿಕ್‌ ಕಿರಿಕಿರಿ
  • ಫುಟ್‌ಪಾತ್‌ ವಿಸ್ತರಣೆಯಿಂದ ರಸ್ತೆ ಕಿರಿದಾಗುತ್ತಿರುವ ಆರೋಪ

ಏನಿದು ಸ್ಮಾರ್ಟ್‌ ಸಿಟಿ ಯೋಜನೆ?

  • ನಗರಗಳ ನವೀಕರಣ ಮತ್ತು ಆಧುನಿಕ ತಂತ್ರಜ್ಞಾನದ ಆಧಾರದಲ್ಲಿ ಅಭಿವೃದ್ಧಿ ಸ್ಪರ್ಶ ನೀಡಲು ಕೇಂದ್ರ ಸರಕಾರ 2015ರಲ್ಲಿ ರಾಷ್ಟ್ರೀಯ ಸ್ಮಾರ್ಟ್‌ ಸಿಟೀಸ್‌ ಮಿಷನ್‌ ಯೋಜನೆ ಆರಂಭಿಸಿತು. ದೇಶಾದ್ಯಂತ ಸ್ಮಾರ್ಟ್‌ ಸಿಟಿಗಳನ್ನು ರೂಪಿಸಿ ನಾಗರಿಕಸ್ನೇಹಿ ಮತ್ತು ಅಭಿವೃದ್ಧಿ ಹೊಂದಿದ ಪ್ರದೇಶಗಳನ್ನಾಗಿಸುವುದು ಮುಖ್ಯ ಉದ್ದೇಶವಾಗಿದೆ.
  • ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಸ್ಥಳೀಯ ಯೋಜನೆಗಳನ್ನು ಒಳಪಡಿಸಲಾಗಿದೆ. ಆರಂಭಿಕವಾಗಿ 100 ನಗರಗಳನ್ನು ಗುರುತಿಸಲಾಗಿದೆ. ರಾಜ್ಯದ 7 ಜಿಲ್ಲಾಕೇಂದ್ರಗಳು ಯೋಜನೆಯ ಲಾಭ ಪಡೆಯುತ್ತಿವೆ. 2015ರಲ್ಲಿ ಆರಂಭವಾದ ಈ ಮಿಷನ್‌ಗೆ ಮೊದಲು 2021ರ ಡೆಡ್‌ಲೈನ್‌ ನೀಡಲಾಗಿತ್ತು. ಕೋವಿಡ್‌ ಸೇರಿದಂತೆ ನಾನಾ ಕಾರಣಗಳಿಂದ 2023ಕ್ಕೆ ಡೆಡ್‌ಲೈನ್‌ ವಿಸ್ತರಣೆಯಾಗಿದೆ.