Published on: January 6, 2023

ಸ್ವದೇಶ್ ದರ್ಶನ್ ಯೋಜನೆ: ಹಂಪಿ ಹಾಗೂ ಮೈಸೂರು

ಸ್ವದೇಶ್ ದರ್ಶನ್ ಯೋಜನೆ: ಹಂಪಿ ಹಾಗೂ ಮೈಸೂರು

ಸುದ್ದಿಯಲ್ಲಿ ಏಕಿದೆ?  ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಸ್ವದೇಶ್ ದರ್ಶನ್ ಯೋಜನೆ ಆರಂಭಿಸಿದ್ದು, ಈ ಸ್ವದೇಶ್ ದರ್ಶನ್ 2.0 ಯೋಜನೆಗೆ ಹಂಪಿ ಹಾಗೂ ಮೈಸೂರು ಆಯ್ಕೆಯಾಗಿವೆ.

ಮುಖ್ಯಾಂಶಗಳು

ಸ್ವದೇಶ್ ದರ್ಶನ್ 2.0 ಯೋಜನೆಗೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ್, ಚಂಡೀಗಢ, ಗೋವಾ, ಗುಜರಾತ್, ಕೇರಳ ರಾಜ್ಯಗಳ ತಲಾ ಎರಡು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಕರ್ನಾಟಕದ ಹಂಪಿ ಹಾಗೂ ಮೈಸೂರು ಆಯ್ಕೆಯಾಗಿದೆ.

ಸ್ವದೇಶ್ ದರ್ಶನ್ ಯೋಜನೆ

  • ದೇಶದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಮೂಲ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು ಸ್ವದೇಶ್ ದರ್ಶನ್ ಯೋಜನೆ ಆರಂಭಿಸಿದೆ.
  • ಸಚಿವಾಲಯ :ಕೇಂದ್ರಪ್ರವಾಸೋದ್ಯಮಮತ್ತುಸಂಸ್ಕೃತಿ
  • ಪ್ರಾರಂಭ :2014-15
  • ಯೋಜನೆ: ಪ್ರವಾಸೋದ್ಯಮ ವರ್ತುಲ ಯೋಜನೆ
  • ವಿಭಿನ್ನ ವಿಷಯದ ಪ್ರವಾಸಿ ಸರ್ಕ್ಯೂಟ್‌ಗಳನ್ನು ಸಂಯೋಜಿಸುವ ಮೂಲಕ ಒಟ್ಟಾರೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಯೋಜನೆಯನ್ನು ಪ್ರಾರಂಭಿಸಲಾಗಿದೆ.

ಯೋಜನೆಯ ಉದ್ದೇಶಗಳು:

  • ಪ್ರವಾಸೋದ್ಯಮದ ಮೂಲಕ ಆರ್ಥಿಕ ಬೆಳವಣಿಗೆ. ಜೊತೆಗೆ ಉದ್ಯೋಗ ಸೃಷ್ಟಿ.
  • ಸಂಭಾವ್ಯ ಪ್ರವಾಸಿ ತಾಣಗಳ ಯೋಜಿತ ಮತ್ತು ಆದ್ಯತೆಯ ಅಭಿವೃದ್ಧಿ.
  • ಪ್ರವಾಸಿ ಕೇಂದ್ರಗಳ ಆಕರ್ಷಣೆಯನ್ನು ಹೆಚ್ಚಿಸುವುದು ಮತ್ತು ಮೂಲಸೌಕರ್ಯ ಅಭಿವೃದ್ಧಿ.
  • ಸಮುದಾಯ ಆಧಾರಿತ ಅಭಿವೃದ್ಧಿ. ಪ್ರವಾಸಿ ಕೇಂದ್ರಗಳ ಅಭಿವೃದ್ಧಿ ಮೂಲಕ ಬಡವರ ಆರ್ಥಿಕ ಅಭಿವೃದ್ಧಿ.
  • ಪ್ರವಾಸೋದ್ಯಮದ ಮಹತ್ವದ ಬಗ್ಗೆ ಸ್ಥಳೀಯ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಮತ್ತು ಸ್ಥಳೀಯರ ಆರ್ಥಿಕ ಅಭಿವೃದ್ಧಿ ಮತ್ತು ಜೀವನಮಟ್ಟ ಸುಧಾರಣೆ.
  • ವಿಷಯಾಧಾರಿತ ಪ್ರವಾಸೋದ್ಯಮದ ಅಭಿವೃದ್ಧಿಯ ಮೂಲಕ ದೇಶದ ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುವುದು.
  • ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಲು ಪ್ರವಾಸಿ ಕೇಂದ್ರಗಳಲ್ಲಿ ಸೇವಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು.
  • ವಿವಿಧ ಕ್ಷೇತ್ರಗಳೊಂದಿಗೆ ಸಿನರ್ಜಿ ನಿರ್ಮಿಸಲು ಪ್ರವಾಸೋದ್ಯಮ ಕ್ಷೇತ್ರವನ್ನು ಪ್ರಮುಖವಾಗಿರಿಸುವ ಕಲ್ಪನೆಯೊಂದಿಗೆ ಸ್ವಚ್ಛ ಭಾರತ ಅಭಿಯಾನ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮುಂತಾದ ಇತರ ಯೋಜನೆಗಳೊಂದಿಗೆ ಸಂಯೋಜಿಸಲು ಈ ಯೋಜನೆಯನ್ನು ರೂಪಿಸಲಾಗಿದೆ. ಆಯಾ ನಗರಗಳಲ್ಲಿ ಪ್ರವಾಸೋದ್ಯಮವನ್ನ ಉತ್ತೇಜಿಸಲು ಹಾಗೂ ಅಭಿವೃದ್ದಿಗೊಳಿಸಲು ಇದು ಬಹಳ ಅನುಕೂಲವಾಗಲಿದೆ.

ಆರ್ಥಿಕ ನೆರವು

  • ಸ್ವದೇಶ್ ದರ್ಶನ್ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಯೋಗದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಈ ಯೋಜನೆಯು ಶೇ.100 ರಷ್ಟು ಕೇಂದ್ರ ಪುರಸ್ಕೃತವಾಗಿದೆ.
  • ರಾಜ್ಯ ಸರ್ಕಾರವು ಇತರ ಯೋಜನೆಗಳೊಂದಿಗೆ ‘ಸಿಎಸ್‌ಆರ್’ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಮೂಲಕವೂ ನಿಧಿಯನ್ನು ಸಂಗ್ರಹಿಸಬಹುದು.
  • ಯೋಜನೆಗೆ ಹಣಕಾಸು ಒದಗಿಸಲು ಸರ್ಕಾರಿ- ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿಯೂ ಹೂಡಿಕೆ ಮಾಡಬಹುದು.

ಪ್ರವಾಸಿ ಸರ್ಕ್ಯೂಟ್

  • ಕನಿಷ್ಠ ಮೂರು ಪ್ರಮುಖ ಪ್ರವಾಸಿ ಸ್ಥಳಗಳನ್ನು ಹೊಂದಿರುವ ಮಾರ್ಗಕ್ಕೆ ಪ್ರವಾಸಿ ಸರ್ಕ್ಯೂಟ್ ಎಂದು ವ್ಯಾಖ್ಯಾನಿಸಲಾಗಿದೆ. ಪ್ರವಾಸಿಗರು ಆರಾಮದಾಯಕ ಪ್ರಯಾಣ ಮತ್ತು ಪ್ರವಾಸಿ ಸ್ಥಳದ ಆಕರ್ಷಣೆಯನ್ನು ಆನಂದಿಸಬಹುದು. ಸರ್ಕ್ಯೂಟ್ ಒಂದು ರಾಜ್ಯಕ್ಕೆ ಸೀಮಿತವಾಗಿರಬಹುದು ಅಥವಾ ಹಲವಾರು ರಾಜ್ಯಗಳಿಗೆ ವಿಸ್ತರಿಸಬಹುದು.