Published on: March 1, 2022
‘ಹಂಪಿ ಬೈ ನೈಟ್’
‘ಹಂಪಿ ಬೈ ನೈಟ್’
ಸುದ್ಧಿಯಲ್ಲಿ ಏಕಿದೆ ? ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿದ್ದ ಹಂಪಿ ಬೈ ನೈಟ್ ಕಾರ್ಯಕ್ರಮವನ್ನು ಮತ್ತೆ ಆರಂಭಿಸಲು ವಿಜಯನಗರ ಜಿಲ್ಲಾಡಳಿತ ನಿರ್ಧರಿಸಿದೆ.
- ವಿಶ್ವ ಪಾರಂಪರಿಕ ಕೇಂದ್ರಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಈ ನಿರ್ಧಾರ ಕೈಗೊಂಡಿದ್ದಾರೆ.
- ಇತ್ತೀಚೆಗೆ ಹಂಪಿಯಲ್ಲಿ ನಡೆದ ಭಾರತೀಯ ದೇಗುಲ ವಾಸ್ತುಶೈಲಿಯ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಜಿಲ್ಲಾಡಳಿತವು ವಿರೂಪಾಕ್ಷ ದೇವಾಲಯದ ಆವರಣದಲ್ಲಿ ಹಂಪಿ ಬೈ ನೈಟ್ ಕಾರ್ಯಕ್ರಮದ ಪ್ರಾಯೋಗಿಕ ಚಾಲನೆಯನ್ನು ನಡೆಸಿತು.
ಏನಿದು ಹಂಪಿ ಬೈ ನೈಟ್?
- ಹಂಪಿ ಬೈ ನೈಟ್ ಕಾರ್ಯಕ್ರಮವು ವರ್ಣರಂಜಿತ ದೀಪಗಳನ್ನು ಬಳಸಿ ರಾತ್ರಿಯ ಐತಿಹಾಸಿಕ ಸ್ಮಾರಕಗಳನ್ನು ಪ್ರದರ್ಶಿಸುತ್ತದೆ.
- ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಸ್ಮಾರಕಗಳ ಮಹತ್ವವನ್ನು ವಿವರಿಸುವ ಸಣ್ಣ ನಿರೂಪಣೆಯಿರುತ್ತದೆ.
- ರಾತ್ರಿ ಬೆಳಕಿನಲ್ಲಿ ಬಸವಣ್ಣ, ವಿಜಯ ವಿಠಲ ದೇವಸ್ಥಾನ, ಮಾತಂಗ ಬೆಟ್ಟ ಸೇರಿದಂತೆ ಪ್ರಮುಖ ಸ್ಮಾರಕಗಳನ್ನು ನೋಡಬಹುದು .
ಹಂಪೆ
- ಹಂಪೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಐತಿಹಾಸಿಕ ಸ್ಥಳ. ೧೩೩೬ರಿಂದ ೧೫೬೫ರವರೆಗೆ ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು.
- ಹಂಪೆಯ ಮೊದಲನೆ ಹೆಸರು ‘ಪಂಪಾ’ ಎಂದಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು ಕಳೆದಂತೆ ಇದು ‘ವಿಜಯನಗರ’ ಮತ್ತು ‘ವಿರುಪಾಕ್ಷಪುರ’ ಎಂದು ಕರೆಯಲ್ಪಟ್ಟಿತು. ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.
- ಕೃಷ್ಣದೇವರಾಯನ ರಾಜ್ಯಭಾರ ಮುಗಿದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬಂತು. ಕೊನೆಗೆ ತಾಳೀಕೋಟೆಯ ಯುದ್ಧದಲ್ಲಿ ಮುಸ್ಲಿಂ ಸಾಮ್ರಾಜ್ಯದಿಂದ ಬಂದ ಆಕ್ರಮಣವನ್ನು ತಡೆಯದೆ ಅಂತ್ಯಗೊಂಡಿತು.
- ಹಂಪೆಯಲ್ಲಿದ್ದ ಅನೇಕ ಸ್ಮಾರಕಗಳನ್ನು ಸುಮಾರು ಆರು ತಿಂಗಳುಗಳ ಕಾಲ ಸೈನಿಕರು ನಾಶ ಮಾಡಿದರು ಎನ್ನುತ್ತದೆ ಇತಿಹಾಸ. ಇಂದು ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು, ವಿಶ್ವವಿಖ್ಯಾತ ಕಲ್ಲಿನ ರಥ,ಮಹಾನವಮಿ ದಿಬ್ಬ, ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಕಮಲ ಮಹಲ್ , ಬಡವಿ ಲಿಂಗ, ಅನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ.