Published on: September 23, 2021
ಹವಾನಾ ಸಿಂಡ್ರೋಮ್
ಹವಾನಾ ಸಿಂಡ್ರೋಮ್
ಸುದ್ಧಿಯಲ್ಲಿ ಏಕಿದೆ? ಅಮೆರಿಕದ ಬೇಹುಗಾರಿಕೆ ಸಂಸ್ಥೆ ಸಿಐಎ ನಿರ್ದೇಶಕ ಬಿಲ್ ಬರ್ನ್ಸ್ ಅವರ ನಿಯೋಗವು ಭಾರತಕ್ಕೆ ಭೇಟಿ ನೀಡಿದ್ದ ವೇಳೆ ನಿಗೂಢವಾದ ಮಾನಸಿಕ ಹಾಗೂ ನರರೋಗ ಸಮಸ್ಯೆ ಎನ್ನಲಾದ ‘ಹವಾನಾ ಸಿಂಡ್ರೋಮ್’ ತಮ್ಮ ತಂಡದ ಸದಸ್ಯರಿಗೆ ತಗುಲಿದೆ ಎಂದು ಅಮೆರಿಕ ಆರೋಪ ಮಾಡಿದೆ.
ಏನಿದು ಹವಾನಾ ಸಿಂಡ್ರೂಮ್..?
- 2016ರಲ್ಲಿ ಮೊದಲ ಬಾರಿಗೆ ಈ ಕಾಯಿಲೆ ಕಾಣಿಸಿಕೊಂಡಿತು. ಕ್ಯೂಬಾದ ರಾಜಧಾನಿ ಹವಾನಾದಲ್ಲಿ ಹೋಟೆಲ್ ಕೊಠಡಿಯಲ್ಲಿದ್ದ ಅಮೆರಿಕದ ಸಿಐಎ ಅಧಿಕಾರಿಗಳ ವಿಚಿತ್ರ ವರ್ತನೆಯಿಂದ ಕಾಯಿಲೆಯು ಬಯಲಾಯಿತು. ಮೈಕ್ರೋ ವೇವ್ ತರಂಗಗಳನ್ನು ಬಳಸಿ ವ್ಯಕ್ತಿಯೊಬ್ಬನ ನರಗಳ ಮೇಲೆ ಪ್ರಭಾವ ಬೀರಿ, ಆತನ ಮಾನಸಿಕ ಸ್ಥಿತಿಯನ್ನು ಹದಗೆಡಿಸುವುದು ‘ಹವಾನಾ ಸಿಂಡ್ರೋಮ್’ನ ಮೂಲ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
- ಇದಕ್ಕೆ ತುತ್ತಾದ ವ್ಯಕ್ತಿಗೆ ಏಕಾಏಕಿ ಒತ್ತಡ ಹೆಚ್ಚಾಗುತ್ತದೆ. ಮನೆಯಲ್ಲಿ, ಕಚೇರಿಯಲ್ಲಿ ಯಾರೋ ಇರುವಂತೆ ಅನಿಸುತ್ತದೆ. ದೈಹಿಕವಾಗಿಯೂ ಅದೃಶ್ಯ ವ್ಯಕ್ತಿಗಳು ಸ್ಪರ್ಶಿಸಿದಂತೆ ಅನುಭವವಾಗಿ ಭಯವು ಹೆಚ್ಚುತ್ತಲೇ ಹೋಗುತ್ತದೆ. ಒಟ್ಟಿನಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಅವಘಡಗಳಿಗೆ ಕಾರಣವಾಗುತ್ತದೆ ಎನ್ನಲಾಗಿದೆ.
- ವಿಷಾಹಾರ ಸೇವನೆ ಮಾಡಿದಾಗ ಅನುಭವಿಸುವ ಗಂಭೀರ ಅನಾರೋಗ್ಯದಂತೆ ವ್ಯಕಿ ಬಳಲುತ್ತಿರುತ್ತಾರೆ. ಈ ಕಾಯಿಲೆಯನ್ನು ಅಸ್ತ್ರವಾಗಿ ಬಳಸಿಕೊಂಡು ಗೂಢಚಾರರ ನಿಗೂಢ ಹತ್ಯೆ ಕೂಡ ಮಾಡಬಹುದು ಎನ್ನುವುದು ಹಿರಿಯ ಅಧಿಕಾರಿಗಳ ಆತಂಕವಾಗಿದೆ.
ಸಿಂಡ್ರೋಮ್ಗೆ ತುತ್ತಾದವರಿಗೆ ಪರಿಹಾರ
- ಹವಾನಾ ಸಿಂಡ್ರೋಮ್ಗೆ ತುತ್ತಾದ ಸಿಐಎ ಅಧಿಕಾರಿಗಳಿಗೆ ಪರಿಹಾರ ನೀಡಲು ಅಮೆರಿಕ ಸಂಸತ್ ನಿರ್ಧರಿಸಿದೆ. ಈ ಸಂಬಂಧ ಮಂಡಿಸಲಾಗಿದ್ದ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಈ ಹಿಂದೆ 2016ರಲ್ಲಿ ಕ್ಯೂಬಾದಲ್ಲಿ ಹಾಗೂ 2018ರಲ್ಲಿ ಚೀನಾದಲ್ಲಿ ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳು ಹವಾನಾ ಸಿಂಡ್ರೋಮ್ಗೆ ತುತ್ತಾಗಿದ್ದರು. ಈ ಸಿಂಡ್ರೋಮ್ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ.