Published on: November 1, 2021

ಹಸಿರು ಪಟಾಕಿ

ಹಸಿರು ಪಟಾಕಿ

ಸುದ್ಧಿಯಲ್ಲಿ ಏಕಿದೆ?  ದೀಪಾವಳಿ ಸಂದರ್ಭದಲ್ಲಿ ‘ಹಸಿರು ಪಟಾಕಿ’ಗಳನ್ನು ಬಿಟ್ಟು ಉಳಿದ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವುದನ್ನು ಹಾಗೂ ಸಿಡಿಸುವುದನ್ನು ರಾಜ್ಯ ಸರಕಾರ ನಿಷೇಧಿಸಿದೆ.

ಏನು ಈ ಹಸಿರು ಪಟಾಕಿ?

  • ‘ಹಸಿರು ಪಟಾಕಿ’ ಎಂದರೆ ಕಡಿಮೆ ಹೊಗೆ ಉಗುಳುವ, ಶಬ್ದ ಹಾಗೂ ವಾಯು ಮಾಲಿನ್ಯ ಮಾಡದ ಪಟಾಕಿಗಳು. ಸಾಂಪ್ರದಾಯಿಕ ಪಟಾಕಿಗೆ ಹೋಲಿಸಿದರೆ ಇವು ಅತ್ಯಂತ ಸಣ್ಣ ಗಾತ್ರದಲ್ಲಿರುತ್ತವೆ. ಇವುಗಳಲ್ಲಿ ಸರ ಪಟಾಕಿ, ಬಾಂಬ್‌ ಮತ್ತು ಅತಿ ಹೆಚ್ಚು ಶಬ್ದ ಮಾಡುವ ಪಟಾಕಿಗಳು ಇರುವುದಿಲ್ಲ.
  • ಹಸಿರು ಪಟಾಕಿಗಳಲ್ಲಿ ನಿಷೇಧಿತ ರಾಸಾಯನಿಕಗಳಾದ ಲೀಥಿಯಂ, ಆರ್ಸೆನಿಕ್‌, ಅಲ್ಯೂಮಿನಿಯಂ, ಪ್ರೊಟ್ಯಾಶಿಯಂ ನೈಟ್ರೇಟ್‌ ಮತ್ತು ಸೀಸದ ಅಂಶಗಳು ಇರುವುದಿಲ್ಲ. ಇದ್ದರೂ ಅವುಗಳ ಪ್ರಮಾಣವನ್ನು ತಗ್ಗಿಸಲಾಗುತ್ತದೆ. ಹಾಗಾಗಿ ಅವುಗಳು ಅತ್ಯಂತ ಸುರಕ್ಷಿತ ಮತ್ತು ಪರಿಸರಸ್ನೇಹಿ ಎಂದು ಹೇಳಲಾಗುತ್ತದೆ.

ಸುಪ್ರೀಂ ಕೋರ್ಟ್‌ ಏನು ಹೇಳಿತ್ತು?

  • 2017ರಲ್ಲಿ ಸಂಪೂರ್ಣವಾಗಿ ಪಟಾಕಿ ನಿಷೇಧಿಸಬೇಕೆಂಬ ವಿಚಾರ ಸುಪ್ರೀಂಕೋರ್ಟ್‌ ಮುಂದೆ ಬಂದಿತ್ತು. ಪಟಾಕಿ ಸಂಪೂರ್ಣ ನಿಷೇಧ ಅಸಾಧ್ಯ ಎಂಬುದನ್ನು ಮನಗಂಡ ಸುಪ್ರೀಂ ಕೋರ್ಟ್‌ 2018ರ ಅಕ್ಟೋಬರ್‌ನಲ್ಲಿ ‘ಹಸಿರು ಪಟಾಕಿ’ಗಳಿಗೆ ಅನುಮತಿ ನೀಡಿತ್ತು. ಆ ಆದೇಶದಂತೆ ಭಾರತೀಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌), ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆ (ನೀರಿ)ಗಳು ಹಸಿರು ಪಟಾಕಿಯನ್ನು ಅಭಿವೃದ್ಧಿಪಡಿಸಿವೆ. ಸದ್ಯ 230ಕ್ಕೂ ಅಧಿಕ ಕಂಪನಿಗಳೊಂದಿಗೆ ಹಸಿರು ಪಟಾಕಿ ಉತ್ಪಾದನೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅವುಗಳು ಉತ್ಪಾದಿಸುವ ಹಸಿರು ಪಟಾಕಿಗಳನ್ನು ಪ್ರಮಾಣೀಕರಿಸಿ ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲಾಗುತ್ತಿದೆ.
  • ರಾಸಾಯನಿಕಯುಕ್ತ ಪಟಾಕಿಗಳನ್ನು ನಿಷೇಧಿಸಿ ನ್ಯಾಯಾಲಯ ನೀಡಿರುವ ತೀರ್ಪು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಸಮುದಾಯದ ವಿರುದ್ಧವಲ್ಲ. ಆದರೆ, ಆಚರಣೆ ಹೆಸರಿನಲ್ಲಿ ಬೇರೆಯವರ ಜೀವಿಸುವ ಹಕ್ಕಿನೊಂದಿಗೆ ಆಟವಾಡಲು ಅನುಮತಿಸಲು ಸಾಧ್ಯವಿಲ್ಲ. ಇದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆ ಎಂದು ಕಳೆದ ಅ.28ರಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಅಲ್ಲದೆ, ಹಸಿರು ಪಟಾಕಿ ಬಳಕೆ ಕುರಿತು ತಾನು ನೀಡಿರುವ ಆದೇಶದ ಕಟ್ಟುನಿಟ್ಟಿನ ಪಾಲನೆ ಕಾಯ್ದುಕೊಳ್ಳುವಂತೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್‌ ಇಲಾಖೆಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.