Published on: October 15, 2022

ಹಿಜಾಬ್: ಭಿನ್ನಮತದ ತೀರ್ಪು

ಹಿಜಾಬ್: ಭಿನ್ನಮತದ ತೀರ್ಪು

ಸುದ್ದಿಯಲ್ಲಿ ಏಕಿದೆ?

ಶಾಲಾ–ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಭಿನ್ನಮತದ ತೀರ್ಪು ನೀಡಿದೆ. ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.

ಮುಖ್ಯಾಂಶಗಳು

  • ವಾದ–ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠವು ತೀರ್ಪನ್ನು ಕಾಯ್ದಿರಿಸಿತ್ತು.
  • ನ್ಯಾಯಮೂರ್ತಿ ಹೇಮಂತ್ ಗುಪ್ತ ಅವರು ವಿದ್ಯಾರ್ಥಿನಿಯರ ಮೇಲ್ಮನವಿಗಳನ್ನು ತಿರಸ್ಕರಿಸಿದರು. ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಹಿಜಾಬ್ ನಿಷೇಧಿಸಿ ಕರ್ನಾಟಕ ಸರ್ಕಾರ ಹೊರಡಿಸಿರುವ ಫೆಬ್ರುವರಿ 5ರ ಅಧಿಸೂಚನೆಯನ್ನು ರದ್ದುಪಡಿಸಿದರು.

ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಅಭಿಪ್ರಾಯ

  • ‘ಅಗತ್ಯ ಧಾರ್ಮಿಕ ಪದ್ಧತಿ ಕುರಿತು ವಿವಾದ ಸೃಷ್ಟಿಸುವ ಅಗತ್ಯ ಇರಲಿಲ್ಲ ಮತ್ತು ಹೈಕೋರ್ಟ್‌ ತಪ್ಪು ನಿರ್ಧಾರ ಕೈಗೊಂಡಿದೆ’ ಎಂದು ಸುಧಾಂಶು ಧುಲಿಯಾ ಅಭಿಪ್ರಾಯಪಟ್ಟರು.
  • ’ಹೆಣ್ಣು ಮಕ್ಕಳಿಗೆ ಶಾಲೆ ಗೇಟ್ ಪ್ರವೇಶಿಸುವ ಮುನ್ನ ಹಿಜಾಬ್ ತೆಗೆಯುವಂತೆ ಹೇಳುವುದು ಮೊದಲಿಗೆ ಆಕೆಯ ಖಾಸಗೀತನ, ನಂತರ ಆಕೆಯ ಘನತೆಯ ಮೇಲೆ ಧಕ್ಕೆ ತಂದಂತೆ. ಕೊನೆಗೆ, ಆಕೆಗೆ ಜಾತ್ಯತೀತ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಇದು ಸಂವಿಧಾನದ ಪರಿಚ್ಛೇ ದ 19 (1) (ಎ) ರ ಅಭಿವ್ಯಕ್ತಿ ಸ್ವಾತಂತ್ರ್ಯ , ಪರಿಚ್ಛೇ ದ 21ರ ಜೀವಿಸುವ ಹಕ್ಕು ಮತ್ತು ಪರಿಚ್ಛೇ ದ 25 (1) ರ ಧಾರ್ಮಿಕ ಆಚರಣೆ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಆಗಿದೆ’ ಎಂದರು.
  • ಹಿಜಾಬ್ ಧರಿಸುವುದನ್ನು ಸಂವಿಧಾನದ ಅಡಿ ಖಾತರಿಪಡಿಸಲಾದ ಗೋಪ್ಯತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಮೂಲಭೂತ ಹಕ್ಕುಗಳ ಅಡಿಯಲ್ಲಿ ರಕ್ಷಿಸಲಾಗಿದೆ. ಆದರೆ, ಅದನ್ನು ಅರಿಯದೇ ಹೈಕೋರ್ಟ್‌ಪ್ರಮಾದವೆಸಗಿದೆ’ ಎಂದು ಆಕ್ಷೇಪಿಸಿದ್ದರು.
  • ‘ನಮ್ಮ ಸಂವಿಧಾನದಲ್ಲಿ ಹಿಜಾಬ್ ಧರಿಸುವುದು ಒಂದು ಆಯ್ಕೆ. ಇದು ಅಗತ್ಯ ಧಾರ್ಮಿಕ ಪದ್ಧತಿಯಾಗಿಲ್ಲದೆ ಇರಬಹುದು. ಆದರೂ ಅದು ಪ್ರಜ್ಞೆ, ನಂಬಿಕೆ ಮತ್ತು ಅಭಿವ್ಯಕ್ತಿಯ ವಿಷಯವಾಗಿದೆ‘ ಎಂದಿದ್ದಾರೆ.

ನ್ಯಾಯಮೂರ್ತಿ ಹೇಮಂತ್ ಗುಪ್ತ ಅವರ ಅಭಿಪ್ರಾಯ

  • ‘ಜಾತ್ಯತೀತತೆ ಎಲ್ಲ ಪ್ರಜೆಗಳಿಗೆ ಅನ್ವಯವಾಗುತ್ತದೆ. ಆದ್ದರಿಂದ ಒಂದು ಧಾರ್ಮಿಕ ಸಮುದಾಯಕ್ಕೆ ಅವರ ಧಾರ್ಮಿಕ ಚಿಹ್ನೆಗಳನ್ನು ಬಳಸಲು ಅನುಮತಿ ನೀಡುವುದು ಜಾತ್ಯತೀತ ಮನೋಭಾವಕ್ಕೆ ಧಕ್ಕೆ ತರುತ್ತದೆ. ಆದ್ದರಿಂದ, ಸರ್ಕಾರದ ಆದೇಶವನ್ನು ಜಾತ್ಯತೀತ ಅಥವಾ 1983ರ ಕರ್ನಾಟಕ ಶಿಕ್ಷಣ ಕಾಯ್ದೆಯ ಉದ್ದೇ ಶಗಳ ಉಲ್ಲಂಘನೆ ಅಲ್ಲ’ ಎಂದರು.
  • ರಾಜ್ಯ ಸರ್ಕಾರದ ಅನುದಾನದಿಂದ ನಡೆಯುವ ಜಾತ್ಯತೀತ ಶಾಲೆಗಳಲ್ಲಿ ಧಾರ್ಮಿಕ ನಂಬಿಕೆಗಳಿಗೆ ಅವಕಾಶ ನೀಡಲಾಗದು’ ಎಂದು ಅವರು ತಮ್ಮ ತೀರ್ಪನ್ನು ಸಮರ್ಥಿಸಿಕೊಂಡರು.
  • ‘ಈ ಎಲ್ಲ ವಿದ್ಯಾರ್ಥಿಗಳು 14 ವರ್ಷ ಮೇಲ್ಪಟ್ಟವರಾದ ಕಾರಣ ಅವರಿಗೆ ಪರಿಚ್ಛೇ ದ 21ರ ಶಿಕ್ಷಣದ ಹಕ್ಕು ಅನ್ವಯವಾಗುವುದಿಲ್ಲ. ಈ ಪರಿಚ್ಛೇ ದದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಹಕ್ಕು ಒದಗಿಸಲಾಗಿದೆ. ಆದರೆ, ತಮ್ಮ ಧರ್ಮದ ಭಾಗವಾಗಿ ಜಾತ್ಯತೀತ ಶಾಲೆಗಳಲ್ಲಿ ವಸ್ತ್ರಸಂಹಿತೆಗೆ ಹೆಚ್ಚುವರಿಯಾಗಿ ಏನನ್ನಾದರೂ ಧರಿಸುವಂತಿಲ್ಲ’.
  • ‘ರಾಜ್ಯ ಸರ್ಕಾರವು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಧಾರ್ಮಿಕ ಸಂಕೇತಗಳನ್ನು ಧರಿಸದಂತೆ ಆದೇಶ ಹೊರಡಿಸುವ ಅಧಿಕಾರ ಹೊಂದಿದೆ. ಆದ್ದರಿಂದ, ಹಿಜಾಬ್ ಧರಿಸದಂತೆ ನಿರ್ಬಂ ಧಿಸುವ ಸರ್ಕಾರಿ ಆದೇಶ ಸರಿ ಇದೆ’ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು

  • ವಿಧಿ 25 ಆತ್ಮ ಸಾಕ್ಷಿ ಸ್ವಾತಂತ್ರ್ಯ ಮತ್ತು ಧರ್ಮದ ಅಬಾಧಿತ ಅವಲಂಬನೆ, ಆಚರಣೆ ಮತ್ತು ಪ್ರಚಾರ
  • 25 ನೇ ವಿಧಿ ಅನ್ವಯ ಪ್ರತಿಯೊಬ್ಬರೂ ಧಾರ್ಮಿಕ ಆಚರಣೆಯನ್ನು ಮಾಡಲು ಅವಕಾಶವಿದೆ. ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು ಪ್ರತಿಯೊಬ್ಬರು ತಮಗಿಷ್ಟವಾದ ಧರ್ಮವನ್ನು ಸ್ವೀಕರಿಸಲು ಮತ್ತು ಪ್ರಚಾರ ಮಾಡಲು ಧಾರ್ಮಿಕ ಆಚರಣೆಗಳನ್ನು ಮಾಡಲು ಅವಕಾಶ ಕಲ್ಪಿಸಿದೆ. ಈ ಮೂಲಕ ಎಲ್ಲಾ ಧರ್ಮಗಳನ್ನು ಕೂಡ ಸಮನಾಗಿ ಕಾಣಲಾಗುತ್ತಿದೆ. ಅದೇ ರೀತಿ ಹಿಂದುಗಳು, ಭೌದ್ಧರು, ಜೈನರು ತಮ್ಮ ಧರ್ಮವನ್ನು ಪ್ರಚಾರ ಮಾಡುವ ಆಚರಣೆಗಳನ್ನು ಮಾಡುವ ಹಕ್ಕನ್ನು ಪಡೆಯುತ್ತಾರೆ.
  • ಪ್ರತಿಯೊಬ್ಬ ವ್ಯಕ್ತಿಯು ಯಾವುದೇ ಧರ್ಮವನ್ನು ಆಚರಣೆ ಮಾಡಲು ಅವಕಾಶ ಕಲ್ಪಿಸಿದೆ. ಆದರೆ ಒತ್ತಾಯದಿಂದ ಅಥವಾ ಯಾವುದೇ ಆಮಿಷ ಒಡ್ಡಿ, ಧರ್ಮಕ್ಕೆ ಸೆಳೆಯಬಾರದು ಮತ್ತು ಆಚರಿಸುವಂತೆ ಒತ್ತಾಯಿಸಬಾರದು.

೨೫ ನೇ ವಿಧಿಯಲ್ಲಿ ಬರುವ  ೪ ಅಂಶಗಳು 

  • A ಆತ್ಮಸಾಕ್ಷಿ ಸ್ವಾತಂತ್ರ್ಯ: ಇದು ವ್ಯಕ್ತಿಯ ಆಂತರಿಕ ಸ್ವಾತಂತ್ರ್ಯವಾಗಿದ್ದು, ದೇವರೊಡನೆ ಆತ ಹೊಂದಿರುವ ಭಾವನಾತ್ಮಕ ಸಂಬಂಧ.
  • B ಧರ್ಮ ಅನುಸರಣಾ ಹಕ್ಕು: ತನ್ನ ಧರ್ಮದ ಬಗೆಗಿನ ನಂಬಿಕೆ ಮತ್ತು ವಿಧೇಯತೆಯನ್ನು ಮುಕ್ತವಾಗಿ ಮತ್ತು ಸ್ವತಂತ್ರವಾಗಿ ಘೋಷಿಸುವುದು.
  • C ಧರ್ಮ ಆಚರಣೆಯ ಹಕ್ಕು ವ್ಯಕ್ತಿಯು ತನ್ನ ಧಾರ್ಮಿಕ ಪೂಜೆ, ಮತಾಚರಣೆ, ಹಬ್ಬಗಳ ಬಗ್ಗೆ ತನಗಿರುವ ನಂಬಿಕೆ, ಅನಿಸಿಕೆಗಳನ್ನು ಪ್ರದರ್ಶಿಸುವುದು.
  • D ಧರ್ಮ ಪ್ರಚಾರದ ಹಕ್ಕು : ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಧರ್ಮದ ತತ್ವ ಸಂದೇಶಗಳನ್ನು ಪ್ರಚಾರ ಮಾಡುವ ಹಕ್ಕು(ಪ್ರಚಾರ ಮಾಡುವ ಹಕ್ಕನ್ನು ಕೆಲವರು ಮತಾಂತರಗೊಳಿಸುವ ಹಕ್ಕೆಂದು ತಪ್ಪುಕಲ್ಪನೆ ಹೊಂದಿದ್ದು, ೧೯೭೭ ರಲ್ಲಿ ಸುಪ್ರೀಂ ಕೋರ್ಟ್ ೨೫ ನೇ ವಿಧಿಯಂತೆ ಧರ್ಮ ಪ್ರಚಾರಕ್ಕೆ ಅವಕಾಶ ನೀಡಿದ್ದರೂ ಸಹ ಇತರರನ್ನು ಮತಾಂತರಗೊಳಿಸುವ ಹಕ್ಕನ್ನು ನೀಡಿದೆ ಎಂಬುದು ತಪ್ಪು ಕಲ್ಪನೆ, ಯಾರನ್ನು ಬಲಾತ್ಕಾರ, ಮೋಸ, ಆಮಿಷಗಳ ಮೂಲಕ ಮತಾಂತರಗೊಳಿಸುವಂತಿಲ್ಲ ಎಂದು ಹೇಳಿದೆ).
  • ೨೫ ನೇ ವಿಧಿಯು ಸಿಖ್ಖರು ತಮ್ಮ ಧಾರ್ಮಿಕ ಕಿರಪಾನ್ ಅನ್ನು ಧರಿಸುವ ಸಾಗಿಸುವ ಅವಕಾಶವನ್ನು ಧರ್ಮ ಅನುಸರಣೆಯಲ್ಲಿ ನೀಡಿದ್ದು, ಧಾರ್ಮಿಕ ವಿಚಾರದಲ್ಲಿ ಸಿಖ್ಖರು, ಜೈನರು, ಮತ್ತು ಭೌದ್ಧರನ್ನು ಹಿಂದೂಗಳೆಂದು ಪರಿಗಣಿಸಿದೆ.