Published on: August 9, 2022

14ನೇ ಉಪರಾಷ್ಟ್ರಪತಿ ‘ಜಗದೀಪ್ ಧನಕರ್’

14ನೇ ಉಪರಾಷ್ಟ್ರಪತಿ ‘ಜಗದೀಪ್ ಧನಕರ್’

ಸುದ್ದಿಯಲ್ಲಿ ಏಕಿದೆ?

ಭಾರತದ ನೂತನ14ನೇ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಅವರು ಆಯ್ಕೆಯಾಗಿದ್ದಾರೆ.  ಅವರು ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. 

ಮುಖ್ಯಾಂಶಗಳು

  • ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಒಟ್ಟು 780 ಸಂಸದರಿದ್ದು, 725 ಮಂದಿ ಮತದಾನ ಮಾಡಿದ್ದರು. ಒಟ್ಟು ಚಲಾವಣೆಯಾದ 725 ಮತಗಳ ಪೈಕಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ 528 ಮತಗಳನ್ನು ಪಡೆದಿದ್ದರೆ, ಈ ಮೂಲಕ ಜಗದೀಪ್ ಧನಕರ್ ಅವರು ಭಾರತದ 14ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
  • ಇನ್ನು ರಾಜ್ಯಸಭೆ ಚುನಾಯಿತ ಮತ್ತು ನಾಮನಿರ್ದೇಶಿತ ಸದಸ್ಯರು ಹಾಗೂ ಲೋಕಸಭೆ ಚುನಾಯಿತ ಸದಸ್ಯರನ್ನು ಒಳಗೊಂಡಂತೆ 780 ಮತದಾರರಲ್ಲಿ 725 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಶೇ 92.94ರಷ್ಟು ಮತದಾನವಾಗಿದೆ.

ಜಗದೀಪ್ ಧನಕರ್

  • ಪ್ರಸ್ತುತ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿರುವ, 71 ವರ್ಷದ ಜಗದೀಪ್ ಧನಕರ್, ರಾಜಸ್ಥಾನದ ಜುಂಝುನು ಜಿಲ್ಲೆಯಲ್ಲಿ 1951ರ ಮೇ 18ರಂದು ಕಿತಾನಾ ಗ್ರಾಮದ ರೈತಾಪಿ ಕುಟುಂಬದಲ್ಲಿ ಜನಿಸಿದರು. 1989ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ರಾಜಸ್ಥಾನದ ಜುಂಝುನು ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿ, ಗೆಲುವು ಕಂಡರು.
  • ನಂತರ ಪಿವಿ ನರಸಿಂಹ ರಾವ್ ಅವರು ಪ್ರಧಾನಿಯಾದ ಬಳಿಕ ಕಾಂಗ್ರೆಸ್ ಸೇರ್ಪಡೆಯಾದರು. 1993ರಲ್ಲಿ ಕಿಶನ್‌ಗಡ ಕ್ಷೇತ್ರದಿಂದ ರಾಜಸ್ಥಾನದ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದರು.
  • ನಂತರ ಅಶೋಕ್ ಗೆಹ್ಲೋಟ್ ಅಧಿಕಾರಕ್ಕೆ ಬಂದ ಬಳಿಕ ಅಂದರೆ 2008ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಇನ್ನು 2019ರ ಜುಲೈ 30ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧನ್ಕರ್ ಅವರನ್ನು ಪಶ್ಚಿಮ ಬಂಗಾಳ ರಾಜ್ಯಪಾಲರನ್ನಾಗಿ ನೇಮಿಸಿದ್ದರು.

ಭಾರತದ ಉಪ ರಾಷ್ಟ್ರಪತಿಗಳು

  • ಭಾರತ ಸರ್ಕಾರದ ಕಾರ್ಯಂಗದಲ್ಲಿ ರಾಷ್ಟ್ರಪತಿಯ ನಂತರ ಎರಡನೇ ಉನ್ನತ ಪದವಿಯ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಉಪ ರಾಷ್ಟ್ರಪತಿಗಳು ರಾಜ್ಯಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಶಾಸಕಾಂಗದ ಕರ್ತವ್ಯವನ್ನು ಕೂಡ ಹೊಂದಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆ

  • ಸಂವಿಧಾನದ ೬೬(೧) ನೇ ವಿಧಿಯ ಅನ್ವಯ ಉಪರಾಷ್ಟ್ರಪತಿಯು ಕೂಡ ರಾಷ್ಟ್ರಪತಿಯಂತೆ ಪರೋಕ್ಷ ಮತದಾನದ ಮೂಲಕ ಆಯ್ಕೆಯಾಗುತ್ತಾರೆ. ಉಪರಾಷ್ಟ್ರಪತಿಯವರು ಸಂಸತ್ತಿನ ಎರಡು ಸದನಗಳ ಎಲ್ಲ ಚುನಾಯಿತ ಸದಸ್ಯರಿಂದ ಆಯ್ಕೆಯಾಗುತ್ತಾರೆ ಇವರನ್ನು ಗುಪ್ತ ಮತದಾನದ ಮೂಲಕ ಏಕ ಮತವನ್ನು ವರ್ಗಾಯಿಸುವ ಪ್ರಮಾಣಗುಣ ಪದ್ದತಿಗೆ ಅನುಗುಣವಾಗಿ ಚುನಾಯಿಸಲಾಗುತ್ತದೆ.
  • ಚುನಾವಣೆ ವೇಳೆ ವಿಶೇಷ ಪೆನ್ ನಲ್ಲೇ ತಮ್ಮ ಆಯ್ಕೆ ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಮಾಡಬೇಕು. ಬೇರೆ ಪೆನ್ ಗಳನ್ನು ಬಳಕೆ ಮಾಡಿದ್ದೇ ಆದರೆ ಆ ಮತ ಅಸಿಂಧುವಾಗುತ್ತದೆ. ೨೦೧೭ರ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ರಹಸ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಪಕ್ಷಗಳು ತಮ್ಮ ಸಂಸದರಿಗೆ ಇಂಥಹದ್ದೇ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ವಿಪ್ ಜಾರಿ ಮಾಡುವಂತಿಲ್ಲ.

ಉಪರಾಷ್ಟ್ರಪತಿಯ ಅರ್ಹತೆಗಳು

  • ಭಾರತದ ಪ್ರಜೆಯಾಗಿರಬೇಕು
  • ೩೫ ವರ್ಷ ವಯಸ್ಸಾಗಿರಬೇಕು
  • ರಾಜ್ಯಸಭಾ ಸದಸ್ಯ ಹೊಂದಿರಬೇಕಾದ ಎಲ್ಲ ಅರ್ಹತೆಗಳನ್ನು ಹೊಂದಿರಬೇಕು. ಅಲ್ಲದೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಥವಾ ಸ್ಥಳೀಯ ಪ್ರಾಧಿಕಾರದಲ್ಲಿ ಲಾಭದಾಯಕ ಹುದ್ದೆ ಹೊಂದಿರಬಾರದು.