Published on: April 6, 2023
2022ರ ಭಾರತೀಯ ನ್ಯಾಯಾಂಗ ವರದಿ
2022ರ ಭಾರತೀಯ ನ್ಯಾಯಾಂಗ ವರದಿ
ಸುದ್ದಿಯಲ್ಲಿ ಏಕಿದೆ? ಉತ್ತಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದಿದೆ. 1 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ 18 ದೊಡ್ಡ ಮತ್ತು ಮಧ್ಯಮ ಗಾತ್ರ ರಾಜ್ಯಗಳ ವ್ಯಾಪ್ತಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ಮತ್ತು ಉತ್ತರ ಪ್ರದೇಶ 18 ನೇ ಸ್ಥಾನದಲ್ಲಿದೆ
ಮುಖ್ಯಾಂಶಗಳು
- 2022ರ ಭಾರತೀಯ ನ್ಯಾಯಾಂಗ ವರದಿಯಲ್ಲಿ ಕರ್ನಾಟಕದ ಜೊತೆ ದಕ್ಷಿಣ ಭಾರತದ ಇತರೆ ಮೂರು ರಾಜ್ಯಗಳು ಟಾಪ್ 5ರಲ್ಲಿ ಸ್ಥಾನ ಪಡೆದಿವೆ.
- ಪೊಲೀಸ್ ಅಧಿಕಾರಿಗಳ ಹಾಗೂ ಕಾನ್‌ಸ್ಟೇಬಲ್ ನೇಮಕಾತಿಯಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಹುದ್ದೆಗಳ ಕೋಟಾವನ್ನು ಸತತವಾಗಿ ನೀಡಿದ ಏಕೈಕ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ ಎಂದು ವರದಿಯಲ್ಲಿ ಕಂಡುಬಂದಿದೆ.
- ಕರ್ನಾಟಕ ರಾಜ್ಯದ ಕಾರಾಗೃಹಗಳ ಒಟ್ಟು ಸಿಬಂದಿ ಪೈಕಿ ಶೇ.32 ಮಂದಿ ಮಹಿಳೆಯರೇ ಆಗಿದ್ದಾರೆ. ಬೇರೆ ಯಾವ ರಾಜ್ಯದಲ್ಲಿಯೂ ಕೂಡ ಇಂಥ ಸಾಧನೆ ಮಾಡಿಲ್ಲ.
- ತಮಿಳುನಾಡು 2ನೇ ಸ್ಥಾನದಲ್ಲಿದ್ದರೆ, ತೆಲಂಗಾಣ 3ನೇ ಸ್ಥಾನದಲ್ಲಿದೆ. ಗುಜರಾತ್ 4ನೇ ಸ್ಥಾನವನ್ನು ಪಡೆದಿದೆ. ಆಂಧ್ರ ಪ್ರದೇಶ 5ನೇ ಸ್ಥಾನ ಪಡೆದಿದೆ. ಉತ್ತರ ಪ್ರದೇಶಕ್ಕೆ ಕೊನೆ ಸ್ಥಾನ ಸಿಕ್ಕಿದೆ.
- 1 ಕೋಟಿಗೂ ಕಡಿಮೆ ಜನಸಂಖ್ಯೆ ಇರುವ 7 ಸಣ್ಣ ರಾಜ್ಯಗಳ ಪೈಕಿ ಸಿಕ್ಕಿಂ ಮೊದಲ ಸ್ಥಾನ ಪಡೆದಿದೆ. ಅರುಣಾಚಲ ಪ್ರದೇಶ ಎರಡನೇ ಸ್ಥಾನ ಪಡೆದಿದೆ. 2020ರಲ್ಲಿ ಮೊದಲ ಸ್ಥಾನದಲ್ಲಿದ್ದ ತ್ರಿಪುರಾ ಈಗ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಕೊನೆಯ ಸ್ಥಾನದಲ್ಲಿ ಗೋವಾ ಇದೆ.
ವರದಿ ನೀಡುವವರು :ಟಾಟಾ ಟ್ರಸ್ಟ್‌ನಿಂದ ಭಾರತೀಯ ನ್ಯಾಯಾಂಗ ವರದಿಯನ್ನು 2019ರಿಂದ ಪ್ರಕಟ ಮಾಡುತ್ತಿದೆ.
ವರದಿಯಲ್ಲಿರುವ ಅಂಶಗಳು
- ದಿಲ್ಲಿ ಮತ್ತು ಚಂಡೀಗಢ ಹೊರತುಪಡಿಸಿ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವು ತನ್ನ ಒಟ್ಟು ವಾರ್ಷಿಕ ಬಜೆಟ್‌ನ ಶೇ.1ಕ್ಕಿಂತ ಹೆಚ್ಚು ನ್ಯಾಯಾಂಗಕ್ಕೆ ಖರ್ಚು ಮಾಡುತ್ತಿಲ್ಲ. ಅಲ್ಲಿನ ಹೈಕೋರ್ಟ್‌ಗಳಲ್ಲಿ ಶೇ.30ರಷ್ಟು ನ್ಯಾಯಾಧೀಶರ ಹುದ್ದೆ ಖಾಲಿ ಇವೆ.
- 2022ರ ಡಿಸೆಂಬರ್ ವೇಳೆಗೆ ಭಾರತದಲ್ಲಿ ಪ್ರತಿ 10 ಲಕ್ಷ ಜನರಿಗೆ 19 ನ್ಯಾಯಾಧೀಶರು ಇದ್ದಾರೆ. ಒಟ್ಟು 4.8 ಕೋಟಿ ಪ್ರಕರಣಗಳ ಬಾಕಿ ಇದೆ.
- 1987ರಲ್ಲಿಯೇ ಕಾನೂನು ಆಯೋಗ ಈ ದಶಕದ ಒಳಗೆ 10 ಲಕ್ಷ ಜನರಿಗೆ 50 ನ್ಯಾಯಾಧೀಶರು ಇರಬೇಕು ಎಂದು ಹೇಳಿತ್ತು. ಆದರೆ, ಈಗಲೂ 10 ಲಕ್ಷ ಜನರಿಗೆ ಕೇವಲ 19 ನ್ಯಾಯಾಧೀಶರು ಇದ್ದಾರೆ ಎಂದು ವರದಿ ಹೇಳಿದೆ.
- ಐದು ವರ್ಷಗಳಿಗೆ ಹೋಲಿಕೆ ಮಾಡಿದರೆ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಒಟ್ಟು ಸಿಬಂದಿಯ ಪೈಕಿ ಮಹಿಳೆಯ ಸಂಖ್ಯೆ ಶೇ.10ನ್ನು ಮೀರುವುದಿಲ್ಲ ಎಂದು ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ.
- 2010ರ ಬಳಿಕ ದೇಶದ ಜೈಲುಗಳಲ್ಲಿ 2.4 ಲಕ್ಷ ಮಂದಿ ಇದ್ದ ವಿಚಾರಣಾಧೀನ ಕೈದಿಗಳ ಸಂಖ್ಯೆ 2021ರ ವೇಳೆಗೆ 4.3 ಲಕ್ಷ ಮಂದಿಗೆ ಏರಿಕೆಯಾಗಿದೆ. ಅಂದರೆ ಶೇ.78 ಹೆಚ್ಚಳವಾಗಿದೆ.
- ಹರಿಯಾಣದಲ್ಲಿ ಹೆಚ್ಚು : 18 ದೊಡ್ಡ ಮತ್ತು ಮಧ್ಯಮ ಗಾತ್ರ ರಾಜ್ಯಗಳ ಪೈಕಿ ಹರಿಯಾಣದ ಜೈಲುಗಳಲ್ಲಿ ಅತ್ಯಂತ ಹೆಚ್ಚಿನ ಕೈದಿಗಳಿದ್ದಾರೆ. ತಮಿಳುನಾಡಿನ 139 ಜೈಲುಗಳಲ್ಲಿ 15ರಲ್ಲಿ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೈದಿಗಳಿದ್ದಾರೆ. ಸಣ್ಣ ರಾಜ್ಯಗಳ ಪೈಕಿ ಮೇಘಾಲಯದಲ್ಲಿ 5ರ ಪೈಕಿ 4ರಲ್ಲಿ ಮಿತಿಗಿಂತ ಹೆಚ್ಚಿನ ಕೈದಿಗಳಿದ್ದಾರೆ. ಅನಂತರದ ಸ್ಥಾನದಲ್ಲಿ ಹಿಮಾಚಲ ಪ್ರದೇಶ ಇದೆ. ಆ ರಾಜ್ಯದ 23ರ ಪೈಕಿ 14ರಲ್ಲಿ ಮಿತಿಗಿಂತ ಹೆಚ್ಚಿನ ಬಂದಿಗಳು ಇದ್ದಾರೆ.
ಮಾನದಂಡಗಳು
- ಐಜೆಆರ್ ವರದಿ ಸಿದ್ಧಪಡಿಸುವಾಗ ನ್ಯಾಯಾಲಯದಲ್ಲಿನ ಖಾಲಿ ಹುದ್ದೆಗಳು, ನ್ಯಾಯಾಂಗಕ್ಕೆ ಬಜೆಟ್ ಹಂಚಿಕೆ, ಮೂಲಸೌಕರ್ಯ, ಮಾನವ ಸಂಪನ್ಮೂಲಗಳು, ಕಾನೂನು ನೆರವು, ಕಾರಾಗೃಹಗಳ ಸ್ಥಿತಿ, ಪೊಲೀಸ್ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಕಾರ್ಯ ನಿರ್ವಹಣೆಯಂತಹ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡಿದೆ.