Published on: November 24, 2021
50 ಲಕ್ಷ ಬ್ಯಾರೆಲ್ ತೈಲ ಬಿಡುಗಡೆ
50 ಲಕ್ಷ ಬ್ಯಾರೆಲ್ ತೈಲ ಬಿಡುಗಡೆ
ಸುದ್ಧಿಯಲ್ಲಿ ಏಕಿದೆ ? ಭಾರತ ತನ್ನ ಸಂಗ್ರಹಾಗಾರಗಳಿಂದ 50 ಲಕ್ಷ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದೆ.
ಮುಖ್ಯಾಂಶಗಳು
- ಭಾರತದ ಜತೆಗೆ ಅಮೆರಿಕ, ಜಪಾನ್ ಮತ್ತು ಇತರ ಪ್ರಮುಖ ರಾಷ್ಟ್ರಗಳು ಅಂತಾರಾಷ್ಟ್ರೀಯ ತೈಲ ದರವನ್ನು ತಗ್ಗಿಸುವ ದೃಷ್ಟಿಯಿಂದ ಒಟ್ಟಾಗಿ ತಮ್ಮ ಸಂಗ್ರಹಾಗಾರಗಳಿಂದ ಕಚ್ಚಾ ತೈಲವನ್ನು ಬಿಡುಗಡೆಗೊಳಿಸಲು ನಿರ್ಧರಿಸಿವೆ
- ಭಾರತವು 3.8 ಕೋಟಿ ಬ್ಯಾರೆಲ್ ಕಚ್ಚಾ ತೈಲವನ್ನು ಪೂರ್ವ ಮತ್ತು ಪಶ್ಚಿಮದ ಮೂರು ಕಡೆಗಳಲ್ಲಿ ಆಪತ್ಕಾಲಕ್ಕೆಂದು ದಾಸ್ತಾನಿರಿಸಿದೆ. ಇದರಲ್ಲಿ 50 ಲಕ್ಷ ಬ್ಯಾರೆಲ್ ಬಿಡುಗಡೆಯಾಗಲಿದೆ. ಇದು 7 – 10 ದಿನಗಳ ಬಳಕೆಗೆ ಸಾಕಾಗುತ್ತದೆ.
- ಈ ಕಚ್ಚಾ ತೈಲವನ್ನು ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊಕೆಮಿಕಲ್ಸ್ (ಎಂಆರ್ಪಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಲಿ. (ಎಚ್ಪಿಸಿಎಲ್)ಗೆ ಬಿಡುಗಡೆ ಮಾಡಲಾಗುವುದು.
ಏಕೆ ಈ ನಿರ್ಣಯ ?
- ಕೋವಿಡ್ ಪರಿಣಾಮ ಬೇಡಿಕೆ ಇಳಿದರೆ ಅಥವಾ ಪ್ರಮುಖ ಬಳಕೆದಾರ ರಾಷ್ಟ್ರಗಳು ತಮ್ಮ ಸಂಗ್ರಹಾಗಾರಗಳಿಂದ ತೈಲವನ್ನು ಬಳಸಿದರೆ ಅದಕ್ಕೆ ತಕ್ಕಂತೆ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ತನ್ನ ದರವನ್ನು ಇಳಿಸುವ ನಿರೀಕ್ಷೆ ಇದೆ.
- ಕಚ್ಚಾ ತೈಲ ದರ ಬ್ಯಾರೆಲ್ಗೆ 80 ಡಾಲರ್ಗಿಂತ ಕೆಳಗಿದ್ದರೆ ಮಾತ್ರ ತಾತ್ಕಾಲಿಕವಾಗಿ ರಿಟೇಲ್ ದರವನ್ನು ನಿಯಂತ್ರಿಸಬಹುದು.
ಒಪೆಕ್ ದೇಶಗಳಿಗೆ ಭಾರತ ಸವಾಲು
- ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ ಉತ್ಪಾದನೆ ಹೆಚ್ಚಿಸುವಂತೆ ಒಪೆಕ್ಗೆ ಭಾರತ ಮನವಿ ಮಾಡಿತ್ತು. ಆದರೆ ಇದಕ್ಕೆ ಸೊಪ್ಪು ಹಾಕದ ಒಪೆಕ್ಗೆ ಠಕ್ಕರ್ ನೀಡಲು ಭಾರತ ಸೇರಿದಂತೆ ಹಲವು ದೇಶಗಳು ತೀರ್ಮಾನಿಸಿವೆ. ಆ ಮೂಲಕ ಕಚ್ಚಾತೈಲದ ಆಮದು ಕಡಿತಗೊಳಿಸಿ, ಬೆಲೆ ನಿಯಂತ್ರಣಕ್ಕೆ ಪ್ರಯತ್ನಿಸಲಿವೆ.
- ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಭಾರತದ ಮುಂದಾಳತ್ವದಲ್ಲಿ ಇಂಥಹದ್ದೊಂದು ಕಾರ್ಯತಂತ್ರ ಸಿದ್ಧಗೊಂಡಿದ್ದು, ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಇತರ ದೇಶಗಳೂ ಇದಕ್ಕೆ ಕೈ ಜೋಡಿಸಿವೆ. ಆ ದೇಶಗಳೂ ಒಟ್ಟಿಗೆ ತಮ್ಮ ಸಂಗ್ರಹಾಗಾರಗಳಿಂದ ಕಚ್ಚಾ ತೈಲವನ್ನು ಬಿಡುಗಡೆಗೊಳಿಸಲು ನಿರ್ಧರಿಸಿವೆ.
- ಚೀನಾ ಸಹ ಇಂಥದ್ದೇ ಕಾರ್ಯತಂತ್ರಕ್ಕೆ ಸೈ ಎಂದಿದೆ. ಪ್ರಮುಖ ರಾಷ್ಟ್ರಗಳು ತಮ್ಮದೇ ದಾಸ್ತಾನಿನಲ್ಲಿರುವ ತೈಲವನ್ನು ಬಿಡುಗಡೆಗೊಳಿಸಿದಾಗ ಸೌದಿ ಅರೇಬಿಯಾ, ಮತ್ತು ರಷ್ಯಾ ನೇತೃತ್ವದ ತೈಲೋತ್ಪಾದಕ ರಾಷ್ಟ್ರಗಳಿಗೆ ಬೇಡಿಕೆ ಕಡಿಮೆಯಾಗಲಿದ್ದು, ಬೆಲೆ ಇಳಿಸುವ ಒತ್ತಡಕ್ಕೆ ಸಿಲುಕಲಿವೆ.