Published on: January 26, 2023

74ನೇ ಗಣರಾಜ್ಯೋತ್ಸವ

74ನೇ ಗಣರಾಜ್ಯೋತ್ಸವ


ಸುದ್ಧಿಯಲ್ಲಿ ಏಕಿದೆ? ಈ ವರ್ಷ (2023) ಭಾರತವು ತನ್ನ 74 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. 


ಮುಖ್ಯಾಂಶಗಳು

  • 2023 ರ ಭಾರತದ ಗಣರಾಜ್ಯೋತ್ಸವದ ಥೀಮ್ “ಜನ್ ಭಾಗಿದಾರಿ (ಸಾಮಾನ್ಯ ಜನರ ಭಾಗವಹಿಸುವಿಕೆ) ಆಗಿದೆ.
  • ಭಾರತ್ ಪರ್ವ್: ಜನಭಾಗಿದಾರಿ ಥೀಮ್ ಅನ್ನು ಪ್ರತಿಬಿಂಬಿಸುತ್ತಾ, ಪ್ರವಾಸೋದ್ಯಮ ಸಚಿವಾಲಯದಿಂದ ಜನವರಿ 26-31, 2023 ರವರೆಗೆ ದೆಹಲಿಯ ಕೆಂಪು ಕೋಟೆಯ ಮುಂಭಾಗದ ಜ್ಞಾನ ಪಥದಲ್ಲಿ ‘ಭಾರತ್ ಪರ್ವ್’ ಆಯೋಜಿಸಲಾಗಿದೆ. ಇದು ರಿಪಬ್ಲಿಕ್ ಡೇ ಸ್ತಬ್ದ ಚಿತ್ರಗಳು , ಮಿಲಿಟರಿ ಬ್ಯಾಂಡ್ಗಳ ಪ್ರದರ್ಶನಗಳು, ಸಾಂಸ್ಕೃತಿಕ ಪ್ರದರ್ಶನಗಳು, ಪ್ಯಾನ್ ಇಂಡಿಯಾ ಫುಡ್ ಕೋರ್ಟ್ಗಳು ಮತ್ತು ಕ್ರಾಫ್ಟ್ಸ್ ಬಜಾರ್ ಅನ್ನು ಪ್ರದರ್ಶಿಸುತ್ತದೆ.
  • ಮಿಲಿಟರಿ ಟ್ಯಾಟೂ ಮತ್ತು ಬುಡಕಟ್ಟು ನೃತ್ಯ ಉತ್ಸವ: ಗಣರಾಜ್ಯೋತ್ಸವದ ಅಂಗವಾಗಿ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126 ನೇ ಜನ್ಮದಿನದ (ಪರಾಕ್ರಮ್ ದಿವಸ್ ಎಂದು ಆಚರಿಸಲಾಗುತ್ತದೆ) ಅಂಗವಾಗಿ ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ಮಿಲಿಟರಿ ಟ್ಯಾಟೂ ಮತ್ತು ಬುಡಕಟ್ಟು ನೃತ್ಯ ಉತ್ಸವ ‘ಆದಿ-ಶೌರ್ಯ – ಪರ್ವ್ ಪರಾಕ್ರಮ್ ಕಾ’ ನಡೆಯಿತು . ನವದೆಹಲಿಯಲ್ಲಿ ರಕ್ಷಣಾ ಸಚಿವಾಲಯ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಜಂಟಿಯಾಗಿ ಈವೆಂಟ್ ಅನ್ನು ಆಯೋಜಿಸಿತ್ತು ,
  • ಬೀಟಿಂಗ್ ದಿ ರಿಟ್ರೀಟ್ ಸಮಾರಂಭ: ಗಣತಂತ್ರ ದಿನದ ನಿಮಿತ್ತ ಜನವರಿ 29 ರಂದು ನಡೆಯುವ ಬೀಟಿಂಗ್ ದಿ ರಿಟ್ರೀಟ್ ಸಮಾರಂಭದಲ್ಲಿ ‘ಭಾರತದ ಅತಿದೊಡ್ಡ ಡ್ರೋನ್ ಶೋ’ ಎಂದು ಬಿಂಬಿಸಲಾದ 3,500 ಸ್ಥಳೀಯ ಡ್ರೋನ್ಗಳನ್ನು ಒಳಗೊಂಡ ಡ್ರೋನ್ ಪ್ರದರ್ಶನ ಮತ್ತು ಪ್ರೊಜೆಕ್ಷನ್ ಮ್ಯಾಪಿಂಗ್ ಕೂಡ ಇರುತ್ತದೆ

74ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿ

  • 74 ವರ್ಷಗಳ ಇತಿಹಾಸದಲ್ಲಿ ಈಜಿಪ್ಟ್ ನಾಯಕರೊಬ್ಬರು ಭಾರತೀಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗುತ್ತಿರುವುದು ಇದೇ ಮೊದಲು. ಭಾರತೀಯ ವಿದೇಶಿ ರಾಜತಾಂತ್ರಿಕತೆಯ ದೃಷ್ಟಿಯಿಂದ ಇದೊಂದು ದೊಡ್ಡ ಹೆಜ್ಜೆ. ಭಾರತವು ಅರೇಬಿಯಾ ಮತ್ತು ದಕ್ಷಿಣದಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಲು ಬಯಸಿದೆ.
  • ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಭಾಗವಹಿಸಲಿದ್ದಾರೆ.
  • 2023 ರ ಗಣರಾಜ್ಯೋತ್ಸವದ ಪರೇಡ್ನಲ್ಲಿ ವಿವಿಧ ರಾಜ್ಯಗಳ ಸ್ತಬ್ದ ಚಿತ್ರಗಳ ಪ್ರದರ್ಶನಕ್ಕಾಗಿ ಸರ್ಕಾರವು ಮೂರು ನಿರ್ದಿಷ್ಟ ಥೀಮ್ಗಳನ್ನು ಪ್ರಸ್ತಾಪಿಸಿದೆ. ಅವುಗಳೆಂದರೆ ಭಾರತ@75, ಅಂತಾರಾಷ್ಟ್ರೀಯ ಸಿರಿ ಧಾನ್ಯ ವರ್ಷ, ನಾರಿ ಶಕ್ತಿ. ರಾಜ್ಯಗಳು ಈ ಮೂರು ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಅಥವಾ ಮೂರನ್ನೂ ಆಯ್ಕೆ ಮಾಡಬಹುದು.

ಸ್ತಬ್ಧ ಚಿತ್ರಗಳು

  • 23 ಸ್ತಬ್ಧ ಚಿತ್ರಗಳು ಇರಲಿವೆ – 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಮತ್ತು ಆರು ವಿವಿಧ ಸಚಿವಾಲಯಗಳು/ಇಲಾಖೆಗಳಿಂದ ಭಾಗವಹಿಸಲಿವೆ
  • ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ‘ನಾರಿ ಶಕ್ತಿʼ ಸ್ತಬ್ಧಚಿತ್ರ ಸಾಗಲಿದೆ. ಈ ಬಾರಿ ಪರೇಡ್ನಲ್ಲಿ ಭಾಗವಹಿಸಲು ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೊನೆ ಕ್ಷಣದಲ್ಲಿ ಅವಕಾಶ ನೀಡಲಾಗಿತ್ತು. ಇದೀಗ ಒಂದೇ ವಾರದಲ್ಲಿ ಸ್ತಬ್ಧಚಿತ್ರ ತಯಾರಾಗಿದೆ. ಇದರೊಂದಿಗೆ ಸತತವಾಗಿ 14 ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ ದೇಶದ ಏಕೈಕ ರಾಜ್ಯವೆಂಬ ಶ್ರೇಯವನ್ನು ಕರ್ನಾಟಕ ತನ್ನದಾಗಿಸಿಕೊಳ್ಳಲಿದೆ.
  • ‘ಆಜಾದಿ ಕ ಅಮೃತ ಮಹೋತ್ಸವʼದ ಅಂಗವಾಗಿ ಸೂಲಗಿತ್ತಿ ನರಸಮ್ಮ, ವೃಕ್ಷ ಮಾತೆ ತುಳಸಿ ಗೌಡ ಹಾಲಕ್ಕಿ ಮತ್ತು ಸಾಲುಮರದ ತಿಮ್ಮಕ್ಕ ಸಾಧನೆಗಳನ್ನು ‘ನಾರಿ ಶಕ್ತಿ’ (ವುಮನ್ ಪವರ್) ಹೆಸರಿನಲ್ಲಿ ರಾಜ್ಯವು 2023ರ ಗಣರಾಜ್ಯೋತ್ಸವದ ಸ್ತಬ್ಧಚಿತ್ರದಲ್ಲಿ ಪ್ರಸ್ತುತ ಪಡಿಸಿದೆ. ಇವರುಗಳು ಸಮಾಜಕ್ಕೆ ನೀಡಿದ ನಿಸ್ವಾರ್ಥ ಕೊಡುಗೆಗಾಗಿ ಕೇಂದ್ರ ಸರ್ಕಾರ ‘ಪದ್ಮಶ್ರೀ’ ಪುರಸ್ಕಾರದಿಂದ ಗೌರವಿಸಿದೆ. ಕರ್ನಾಟಕದ ಅತಿ ಹಿಂದುಳಿದ ಹಳ್ಳಿಗಳಲ್ಲಿ, ಸಾಮಾನ್ಯ ಕುಟುಂಬಗಳಲ್ಲಿ ಹುಟ್ಟಿ ಬೆಳೆದರೂ ಇವರುಗಳ ಸಾಧನೆಗೆ ಅವರ ಹುಟ್ಟು – ಜಾತಿ – ಅಂತಸ್ತು ಯಾವುದು ಅಡ್ಡ ಬಂದಿಲ್ಲ. ತಮ್ಮ ಸಾಧನೆಗಳ ಮೂಲಕವೇ ಜಾಗತಿಕವಾಗಿ ಗಮನ ಸೆಳೆದವರು. ಇವರ ಸಾಧನೆಗಾಗಿ ಕರ್ನಾಟಕ ಮತ್ತು ದೇಶವೇ ಹೆಮ್ಮೆಪಡುತ್ತದೆ. ಇದನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಸ್ತಬ್ಧಚಿತ್ರವನ್ನು ರೂಪಿಸಿದೆ.
  • ಸೂಲಗಿತ್ತಿ ನರಸಮ್ಮ: ಗಿಡ-ಮರ, ಬೆಟ್ಟ-ಗುಡ್ಡ, ಪಕ್ಷಿಗಳಿಂದ ಕಂಗೊಳಿಸುತ್ತಿರುವ ಸ್ತಬ್ಧಚಿತ್ರದ ಮುಂಭಾಗದಲ್ಲಿ ತೊಟ್ಟಿಲು ತೂಗುತ್ತಾ, ಕೈನಲ್ಲಿ ಮಗು ಆಡಿಸುತ್ತಿರುವ ಸೂಲಗಿತ್ತಿ ನರಸಮ್ಮ ಅವರನ್ನು ತೋರಿಸಿದೆ. ನುರಿತ ವೈದ್ಯರ ಅನುಪಸ್ಥಿತಿಯಲ್ಲಿ ಸಾಂಪ್ರದಾಯಿಕವಾಗಿ ಹೆರಿಗೆಗಳನ್ನು ಮಾಡಿಸುವಲ್ಲಿ ಅವರು ಸಿದ್ಧಹಸ್ತರು. ಏಳು ದಶಕಗಳಲ್ಲಿ ಇಂತಹ ಎರಡು ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದಾರೆ.
  • ತುಳಸಿ ಗೌಡ ಹಾಲಕ್ಕಿ : ಹಚ್ಚ ಹಸುರಿನಿಂದ ಕೂಡಿರುವ ಸ್ತಬ್ಧಚಿತ್ರದ ಮಧ್ಯಭಾಗದಲ್ಲಿ ಗಿಡ ಮರಗಳನ್ನು ಪೋಷಿಸುತ್ತಿರುವ ತುಳಸಿ ಗೌಡ ಹಾಲಕ್ಕಿ ರನ್ನು ತೋರಿಸಿದೆ. ವೃಕ್ಷ ಮಾತೆ ಎಂದೇ ಹೆಸರಾಗಿರುವ ತುಳಸಿ ಅಪರೂಪದ ಪ್ರಭೇದದ ಸಸ್ಯಗಳನ್ನು ಗುರುತಿಸಿ ಬೆಳೆಸುವಲ್ಲಿ ಪರಿಣತರು. 30,000ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿರುವ ಶ್ರೇಯ ಇವರದ್ದು. ಇದನ್ನು ಗಿಡಗಳ ಮಧ್ಯೆ ಕುಳಿತು ಅವುಗಳನ್ನು ಪೋಷಿಸುತ್ತಿರುವ ರೀತಿಯಲ್ಲಿ ಅವರನ್ನು ತೋರಿಸಿದೆ.
  • ಸಾಲುಮರದ ತಿಮ್ಮಕ್ಕ : ಕಣ್ಣಿಗೆ ಮುದ ನೀಡುವ ಕಾಡಿನ ನಿಜಸ್ವರೂಪದಂತಿರುವ ಸ್ತಬ್ಧಚಿತ್ರದ ಕೊನೆಯ ಭಾಗದಲ್ಲಿ ರಾಜ್ಯ ಹೆದ್ದಾರಿಯ ಆಜುಬಾಜಿನಲ್ಲಿ 8000 ಮರಗಳನ್ನು ನೆಟ್ಟು ನೀರೆರೆದು ಬೆಳೆಸಿದ ಸಾಲುಮರದ ತಿಮ್ಮಕ್ಕ ರನ್ನು ತೋರಿಸಿದೆ. ಇದನ್ನು ಅವರು ಗಿಡಗಳಿಗೆ ನೀರೆರೆಯುತ್ತಿರುವಂತೆ ಬಿಂಬಿಸಿದೆ. ಇದಲ್ಲದೆ 75 ಆಲದ ಮರಗಳನ್ನು 4.5 ಕಿ. ಮೀ ಉದ್ದದ ರಾಜ್ಯ ಹೆದ್ದಾರಿಯಲ್ಲಿ ಬೆಳೆಸಿದ್ದಾರೆ. ಇದನ್ನು ಸ್ತಬ್ಧಚಿತ್ರದ ಕೊನೆಯ ಭಾಗದಲ್ಲಿ ಬೃಹತ್ ಆಲದ ಮರದ ಮೂಲಕ ಚಿತ್ರಿಸಿದೆ.

 ಗಣರಾಜ್ಯೋತ್ಸವ  ಬಗ್ಗೆ

  • ಭಾರತವು 1950 ರಿಂದ ಪ್ರತಿ ವರ್ಷ ಜನವರಿ 26 ಅನ್ನು ಗಣರಾಜ್ಯ ದಿನವನ್ನಾಗಿ ಆಚರಿಸುತ್ತದೆ.
  • ಜನವರಿ 26, 1950 ರಂದು ಜಾರಿಗೆ ಬಂದ ಸಂವಿಧಾನದ ಗೌರವಾರ್ಥವಾಗಿ, ದೇಶಾದ್ಯಂತ ಶಾಲೆಗಳು, ಕಾಲೇಜುಗಳು, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಗಣರಾಜ್ಯೋತ್ಸವವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ.
  • ಜನವರಿ 26, 1950 ರಂದು, ಭಾರತದ ಸಂವಿಧಾನದ ಅಂಗೀಕಾರದೊಂದಿಗೆ, ಭಾರತವು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ರಾಷ್ಟ್ರವಾಯಿತು. ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು 21 ಗನ್ ಸೆಲ್ಯೂಟ್ ಸ್ವೀಕರಿಸಿದರು. ಭಾರತದ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಲಾಯಿತು. ಹೀಗೆ ಈ ಐತಿಹಾಸಿಕ ದಿನ ಹುಟ್ಟಿಕೊಂಡಿದೆ.

ಭಾರತಕ್ಕೆ ಆಗಸ್ಟ್ 15, 1947 ರಂದು ಸ್ವಾತಂತ್ರ್ಯ ಸಿಕ್ಕಿತು. ನವೆಂಬರ್ 26, 1949 ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಿದಾಗ, ಗಣರಾಜ್ಯೋತ್ಸವದ ಆಚರಣೆಗೆ ಜನವರಿ 26 ಅನ್ನು ಸೂಕ್ತ ದಿನಾಂಕವಾಗಿ ನಿಗದಿಪಡಿಸಲಾಯಿತು. ಹೀಗೆ ಜನವರಿ 26, 1950 ನಮ್ಮ ಗಣರಾಜ್ಯ ದಿನವಾಯಿತು