ಸುದ್ದಿ - ಭಾರತವು 2023 ರಲ್ಲಿ ನವದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದುವ ಮೂಲಕ ಪ್ರಾರಂಭಿಸಿದ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ (IBCA), ಏಳು ಪ್ರಮುಖ ಬಿಗ್ ಕ್ಯಾಟ್ ಪ್ರಭೇದಗಳ ಜಾಗತಿಕ ಸಂರಕ್ಷಣೆಯ ಗುರಿಯನ್ನು ಹೊಂದಿದೆ.
ಮುಖ್ಯ ವಿಷಯಗಳು:
- IBCA 95 ಬಿಗ್ ಕ್ಯಾಟ್ ವ್ಯಾಪ್ತಿಯ ಹಾಗೂ ವ್ಯಾಪ್ತಿಯಲ್ಲದ ದೇಶಗಳು, ಸಂರಕ್ಷಣಾ ಪಾಲುದಾರರು ಮತ್ತು ಸಂಸ್ಥೆಗಳ ಒಕ್ಕೂಟವಾಗಿದ್ದು, ಪ್ರಸ್ತುತ 26 ಸದಸ್ಯ ಮತ್ತು 5 ವೀಕ್ಷಕ ರಾಷ್ಟ್ರಗಳನ್ನು ಹೊಂದಿದೆ.
- ಪರಿಸರ ವ್ಯವಸ್ಥೆಯ ಸಮತೋಲನ, ಇತರ ಜಾತಿಗಳ ಆವಾಸಸ್ಥಾನಗಳನ್ನು ರಕ್ಷಿಸುವುದು, ಹವಾಮಾನ ಬದಲಾವಣೆಯ ತಗ್ಗಿಸುವಿಕೆ ಮತ್ತು ಸ್ಥಳೀಯ ಆರ್ಥಿಕತೆಯನ್ನು ಬೆಂಬಲಿಸಲು ಈ ಪ್ರಭೇದಗಳ ಸಂರಕ್ಷಣೆ ಅತ್ಯಗತ್ಯವಾಗಿದೆ.
- ಬೇಟೆಯಾಡುವುದನ್ನು ತಡೆಯಲು, ಬೇಡಿಕೆಯನ್ನು ತೊಡೆದುಹಾಕಲು ಮತ್ತು ಅಕ್ರಮ ವನ್ಯಜೀವಿ ವ್ಯಾಪಾರವನ್ನು ನಿಲ್ಲಿಸುವ ನಿಟ್ಟಿನಲ್ಲಿ ಜಾಗತಿಕ ನಾಯಕರ ಒಕ್ಕೂಟವನ್ನು ರಚಿಸುವ ಉದ್ದೇಶದಿಂದ ಜುಲೈ 2019 ರ ಜಾಗತಿಕ ಹುಲಿ ದಿನದ ಆಚರಣೆಯ ಸಂದರ್ಭದಲ್ಲಿ ಭಾರತದ ಪ್ರಧಾನ ಮಂತ್ರಿಯವರು ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ (IBCA) ಅನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದರು.
IBCA ಕುರಿತು
- ಸ್ಥಾಪನೆ: 2023 ರಲ್ಲಿ ಭಾರತದಿಂದ ಪ್ರಾರಂಭಿಸಲಾಗಿದೆ.
- ಪ್ರಧಾನ ಕಚೇರಿ: ನವದೆಹಲಿ, ಭಾರತ.
- ಉದ್ದೇಶ: ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ಜಾಗ್ವಾರ್ ಮತ್ತು ಪೂಮಾ - ಈ ಏಳು ಪ್ರಮುಖ ಬಿಗ್ ಕ್ಯಾಟ್ ಪ್ರಭೇದಗಳ ಜಾಗತಿಕ ಸಂರಕ್ಷಣೆ.
- ಸಾಂಸ್ಥಿಕ ಸ್ವರೂಪ: IBCA ಒಂದು ಬಹು-ರಾಷ್ಟ್ರೀಯ, ಬಹು-ಸಂಸ್ಥೆಗಳ ಒಕ್ಕೂಟವಾಗಿದ್ದು, ಬಿಗ್ ಕ್ಯಾಟ್ ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ 95 ಬಿಗ್ ಕ್ಯಾಟ್ ವ್ಯಾಪ್ತಿಯ ದೇಶಗಳು, ವ್ಯಾಪ್ತಿಯಲ್ಲದ ದೇಶಗಳು, ಸಂರಕ್ಷಣಾ ಪಾಲುದಾರರು, ವೈಜ್ಞಾನಿಕ ಸಂಸ್ಥೆಗಳು, ವ್ಯಾಪಾರ ಗುಂಪುಗಳು ಮತ್ತು ಕಾರ್ಪೊರೇಟ್‌ಗಳನ್ನು ಒಳಗೊಂಡಿದೆ.
- ಪ್ರಸ್ತುತ, ಇದು 26 ಸದಸ್ಯ ರಾಷ್ಟ್ರಗಳು ಮತ್ತು 5 ವೀಕ್ಷಕ ರಾಷ್ಟ್ರಗಳನ್ನು ಒಳಗೊಂಡಿದೆ.
- ನೋಡಲ್ ಏಜೆನ್ಸಿ: ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEF&CC) ಅಡಿಯಲ್ಲಿ ಬರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (NTCA) ಮೂಲಕ ಭಾರತ ಸರ್ಕಾರವು ಇದನ್ನು ಸ್ಥಾಪಿಸಿದೆ.
ಬಿಗ್ ಕ್ಯಾಟ್‌ಗಳ ಸಂರಕ್ಷಣೆಯ ಅಗತ್ಯತೆ
- ಪರಿಸರ ವ್ಯವಸ್ಥೆಯ ಸಮತೋಲನ: ಅಗ್ರ ಪರಭಕ್ಷಕಗಳ ನಷ್ಟವು ಟ್ರೋಫಿಕ್ ಕ್ಯಾಸ್ಕೇಡ್‌ಗೆ (Trophic cascade) ಕಾರಣವಾಗಬಹುದು, ಇದರಲ್ಲಿ ಅಡ್ಡಿಪಡಿಸಿದ ಆಹಾರ ಸರಪಳಿಯು ಪರಿಸರ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಳ್ಳುವಂತೆ ಮಾಡುತ್ತದೆ.
- ಇತರ ಜಾತಿಗಳ ಆವಾಸಸ್ಥಾನದ ಸಂರಕ್ಷಣೆ: ಉದಾಹರಣೆಗೆ, ಏಷ್ಯಾದ ಆನೆಗಳ ಜನಸಂಖ್ಯೆಯ 30% ಕ್ಕಿಂತ ಹೆಚ್ಚು ಆನೆಗಳು ಹುಲಿಗಳ ಸಂರಕ್ಷಿತ ಭೂದೃಶ್ಯಗಳಲ್ಲಿಯೇ ವಾಸಿಸುತ್ತವೆ, ಹಿಮ ಚಿರತೆಗಳು ಟಿಬೆಟಿಯನ್ ಗಸೆಲ್, ಅರ್ಗಾಲಿ ಮತ್ತು ಚಿರು ಮುಂತಾದ ಪ್ರಾಣಿಗಳೊಂದಿಗೆ ತಮ್ಮ ಆವಾಸಸ್ಥಾನವನ್ನು ಹಂಚಿಕೊಳ್ಳುತ್ತವೆ.
- ಹವಾಮಾನ ಬದಲಾವಣೆ ತಗ್ಗಿಸುವಿಕೆ: ಹುಲಿಗಳಿಗಾಗಿ ರಕ್ಷಿಸಲಾದ ಅರಣ್ಯ ಭೂದೃಶ್ಯಗಳು ಏಷ್ಯಾದ ಇತರ ಕಾಡುಗಳಿಗಿಂತ ಹೆಚ್ಚಿನ ಪ್ರಮಾಣದ ಇಂಗಾಲವನ್ನು ಸಂಗ್ರಹಿಸುತ್ತವೆ.
- ಆರ್ಥಿಕತೆಗೆ ಬೆಂಬಲ: ಅರಣ್ಯ ಪ್ರದೇಶದ ಆಸುಪಾಸಿನಲ್ಲಿ ವಾಸಿಸುವ ಜನರಿಗೆ ಪ್ರವಾಸಿ ಹೋಮ್‌ಸ್ಟೇಗಳು, ಹೈನುಗಾರಿಕೆ ಉದ್ಯಮಗಳು ಹಾಗೂ ಹಣ್ಣು ಮತ್ತು ತರಕಾರಿ ಕೃಷಿಯಂತಹ ಪರ್ಯಾಯ ಆದಾಯದ ಮೂಲಗಳನ್ನು ಒದಗಿಸುತ್ತದೆ.