ಸುದ್ದಿ - ಭಾರತ ಮತ್ತು ಫ್ರಾನ್ಸ್ ದೇಶಗಳು ಜಂಟಿಯಾಗಿ 2027 ರಲ್ಲಿ TRISHNA (Thermal Infra-Red Imaging Satellite for High-resolution Natural Resource Assessment) ಉಪಗ್ರಹವನ್ನು ಉಡಾವಣೆ ಮಾಡಲಿವೆ. TRISHNA ಉಪಗ್ರಹವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಫ್ರಾನ್ಸ್ ದೇಶದ ಬಾಹ್ಯಾಕಾಶ ಸಂಸ್ಥೆಯಾದ CNES (Centre National d’Études Spatiales) ನಡುವಿನ ಒಂದು ಸಹಯೋಗದ ಭೂ ವೀಕ್ಷಣೆ ಉಪಗ್ರಹ ಯೋಜನೆಯಾಗಿದೆ.
ಪ್ರಮುಖ ಪೇಲೋಡ್‌ಗಳು
- ತಾಪಮಾನ ಅತಿಗೆಂಪು ಪೇಲೋಡ್ (TIR) – CNES: ಭೂ ಮೇಲ್ಮೈ ತಾಪಮಾನ ಮತ್ತು ಬಾಷ್ಪೀಕರಣ-ಬಾಷ್ಪವಿಸರ್ಜನೆಯನ್ನು ಅಳೆಯಲು ತಾಪಮಾನ ಅತಿಗೆಂಪು ಸಂವೇದಕಗಳನ್ನು ಇದು ಒಳಗೊಂಡಿದೆ.
- ದೃಶ್ಯ-ಸಮೀಪ ಅತಿಗೆಂಪು-ಅಲ್ಪ ತರಂಗಾಂತರ ಅತಿಗೆಂಪು ಪೇಲೋಡ್ (VNIR-SWIR) – ISRO: ಇದು ಸಸ್ಯವರ್ಗ, ಮೇಲ್ಮೈ ಪ್ರತಿಫಲನ ಮತ್ತು ಜೈವಿಕ ಭೌತಿಕ ನಿಯತಾಂಕಗಳನ್ನು ಅಳೆಯುತ್ತದೆ.
- ಇದು 761 ಕಿಲೋಮೀಟರ್ ಎತ್ತರದಲ್ಲಿ ಸೂರ್ಯ-ಸಮಕಾಲಿಕ ಕಕ್ಷೆಯಲ್ಲಿ (SSO) ಕಾರ್ಯನಿರ್ವಹಿಸಲಿದ್ದು, 5 ವರ್ಷಗಳ ಯೋಜಿತ ಕಾರ್ಯಾಚರಣೆಯ ಅವಧಿಯನ್ನು ಹೊಂದಿದೆ.
- ಸ್ಥಳೀಯ ವಿಭೇದಕ ಶಕ್ತಿ (Spatial Resolution): ಭೂಮಿ ಮತ್ತು ಕರಾವಳಿ ಪ್ರದೇಶಗಳ ಮೇಲೆ 57 ಮೀಟರ್ ವಿಭೇದಕ ಶಕ್ತಿ ಹಾಗೂ ಸಾಗರಗಳು ಮತ್ತು ಧ್ರುವ ಪ್ರದೇಶಗಳ ಮೇಲೆ 1 ಕಿಲೋಮೀಟರ್ ವಿಭೇದಕ ಶಕ್ತಿಯನ್ನು ಹೊಂದಿದೆ.
- ಇದು ಬರಗಾಲ, ನಗರಾಭಿವೃದ್ಧಿ ತಾಪಮಾನ ದ್ವೀಪಗಳು (Urban Heat Islands), ನೀರ್ಗಲ್ಲುಗಳ ಚಲನಶೀಲತೆ, ಹಿಮ ಕರಗುವಿಕೆ, ಶಾಶ್ವತ ಹಿಮಗಟ್ಟಿದ ಭೂಮಿಯ (Permafrost) ಬದಲಾವಣೆಗಳು ಮತ್ತು ಪರಿಸರ ವ್ಯವಸ್ಥೆಯ ಆರೋಗ್ಯದ ಮೇಲ್ವಿಚಾರಣೆಗೆ ಬೆಂಬಲ ನೀಡಲಿದೆ.